ಡಿಕೆಶಿ V/S ಅಶೋಕ್ ; ಕನಕಪುರದಲ್ಲಿ ಒಳ್ಳೆ ಮಿಲಿಟರಿ ಹೋಟೆಲ್ ಗಳಿವೆ, ಅಶೋಕ್ ಊಟ ಮಾಡಿಕೊಂಡು ಹೋಗ್ಲಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಏಪ್ರಿಲ್ 12: ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ರಾಜಕೀಯ ಪಕ್ಷಗಳಿಗೆ ತಮ್ಮ ಪ್ರಬಲ ರಾಜಕೀಯ ಎದುರಾಳಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೋಲಿಸಲು ಆರ್ ಅಶೋಕ್ ಅವರನ್ನ ಬಿಜೆಪಿ ಹೈಕಮಾಂಡ್ ಕಣಕ್ಕಿಳಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಕನಕಪುರಕ್ಕೆ ಸಾಮ್ರಾಟ್ ಅವರಾದರೂ ಬರಲಿ, ಚಕ್ರವರ್ತಿಯಾದರೂ ಬರಲಿ. ಕಾರ್ಯಕರ್ತರಾದರೂ ಬರಲಿ. ಆತಿಥ್ಯ ನೀಡುವುದರಲ್ಲಿ ಕನಕಪುರ ಖ್ಯಾತಿ ಪಡೆದಿದೆ. 30-40 ವರ್ಷಗಳ ಹಿಂದೆಯೇ ಒಳ್ಳೊಳ್ಳೆ ಮಿಲ್ಟ್ರಿ ಹೊಟೇಲ್ ಗಳನ್ನು ತೆರೆದಿದ್ದಾರೆ. ಅವರು ಬಂದು ಊಟ ಮಾಡಿಕೊಂಡು ಹೋಗಬಹುದು ಎಂದು ಹೇಳಿದರು.

ನಾನು ನಾಮಪತ್ರ ಸಲ್ಲಿಸುವ ದಿನ ಹಾಗೂ ಮತ್ತೊಂದು ದಿನ ಹೋಗಿ ಪ್ರಚಾರ ಮಾಡುತ್ತೇನೆ. ಅವರಿಗೆ ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಕಂಡರೆ ಎಷ್ಟು ಭಯವಿದೆ, ಹೇಗೆ ಗಢಗಢನೆ ನಡುಗುತ್ತಿದ್ದಾರೆ ಎಂದು ತಿಳಿದಿದೆ. ಅವರು ಏದರೂ ತಂತ್ರ ಮಾಡಲಿ. ತಂತ್ರಗಾರಿಕೆಯಲ್ಲಿ ನಾವು ಹಿಂದೆ ಉಳಿದಿಲ್ಲ. ಯಾರು ಪ್ರಬಲರು, ಯಾರು ದುರ್ಬಲರು ಎಂದು ಚುನಾವಣೆ ಫಲಿತಾಂಶ ಹೊರಬಂದ ನಂತರ ತಿಳಿಯುತ್ತದೆ.
ಬಿಜೆಪಿಯವರು ಕಳೆದ ಮೂರ್ನಾಲ್ಕು ವರ್ಷಗಳಿಂದ ಇಡಿ, ಐಟಿ, ಸಿಬಿಐ ಪ್ರಕರಣಗಳ ಮೂಲಕ ನನಗೆ ಕಿರುಕುಳ ನೀಡುತ್ತಲೇ ಇದ್ದಾರೆ. ನನಗೆ ನಿತ್ಯ ನೋಟೀಸ್ ಬರುತ್ತಲೇ ಇವೆ. ನನ್ನ ಬೆಂಬಲಕ್ಕೆ ರಾಜ್ಯದ ಜನ ಇದ್ದಾರೆ. ನಾನು ವಿಧಾನಸಭೆಯಲ್ಲಿ ಒಂದು ಮಾತು ಹೇಳಿದ್ದೆ. ನಾವು ಚಿನ್ನ, ಹಣ, ಹಣ್ಣು, ಕುರಿ, ಮೇಕೆ, ಹಸು, ಚಪ್ಪಲಿ ಕದಿಯುವವರನ್ನು ನೋಡಿದ್ದೇವೆ. ಆದರೆ ಮತ ಕದಿಯುವವರನ್ನು ನೋಡಿರಲಿಲ್ಲ ಎಂದು ಹೇಳಿದ್ದೆ ಎಂದರು.
ಈ ಹಿಂದೆ ಬಿಜೆಪಿಯು ಖಾಸಗಿ ಸಂಸ್ಥೆ ಮೂಲಕ 8600 ನಕಲಿ ಬೂತ್ ಅಧಿಕಾರಿಗಳನ್ನು ನೇಮಿಸಿ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿ, ಅಕ್ರಮವಾಗಿ ಮತದಾರರ ಹೆಸರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿತ್ತು. ಇಡೀ ರಾಜ್ಯದಲ್ಲಿ ಲಕ್ಷಾಂತರ ಹೆಸರುಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಆದರೆ ಚುನಾವಣಾ ಆಯೋಗ ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ ಗಮನಹರಿಸಿತ್ತು.

ಬಿಜೆಪಿಯವರಿಂದ ಪಟ್ಟಿ ಪಡೆದು ಹೆಚ್ಚುವರಿ ಮತ ಸೇರಿಸಲು ಚುನಾವಣಾ ಆಯೋಗದ ಕಣ್ಣು ಮುಚ್ಚಿಸಿ ಅಕ್ರಮ ಮಾಡಲಾಗುತ್ತಿದೆ. ಮಹದೇವಪುರ ಕ್ಷೇತ್ರದ ಅಕ್ರಮ ಇಂದು ನಿಮ್ಮ ಮುಂದೆ ಇಡುತ್ತಿದ್ದೇವೆ. ಒಂದು ಮತವನ್ನು 2-3 ಕಡೆ ಸೇರಿಸಲಾಗಿದೆ. ಒಂದೇ ಹೆಸರು, ತಂದೆ ಹೆಸರು ಎಲ್ಲಾ ಒಂದೇ ಆಗಿದ್ದು, ಮತದದಾರರ ಫೋಟೋ ಮಾತ್ರ ಬೇರೆ ಬೇರೆ. ನಮ್ಮ ಬಳಿ 42,222 ಅಕ್ರಮ ಹೆಸರು ಸೇರಿಸಿರುವ ದಾಖಲೆ ಇವೆ. ಚುನಾವಣಾ ಆಯೋಗದ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ. ಫಾರಂ 6,7, 8 ಯಾವುದೂ ಇಲ್ಲದೇ ಈ ಹೆಸರು ಸೇರಿಸಲಾಗಿದೆ. ಚುನಾವಣಾಧಿಕಾರಿಗಳು ಹೊಸ ಮತದಾರರ ಸೇರ್ಪಡೆ ಅಭಿಯಾನದ ಹೆಸರಲ್ಲಿ ಈ ಅಕ್ರಮ ಮಾಡಿದ್ದಾರೆ.
ಚುನಾವಣಾ ಆಯೋಗಕ್ಕೆ ನಾವು ಮತ್ತೊಂದು ಅಧಿಕೃತ ದೂರು ನೀಡುತ್ತೇವೆ. ಆಯೋಗ ಕೂಡಲೇ ಎಆರ್ ಓ, ಬಿಎಲ್ ಓ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಈ ಕ್ಷೇತ್ರದ ಮತದಾರರ ಪಟ್ಟಿ ಮತ್ತೊಮ್ಮೆ ಪರಿಷ್ಕರಣೆ ಆಗಬೇಕು. ಇದು ಸೂಕ್ಷ್ಮ ವಿಚಾರವಾಗಿದ್ದು, ನಕಲಿ ಅರ್ಜಿಗಳ ಮೂಲಕ ಈ ಅಕ್ರಮ ಮಾಡಲಾಗಿದೆ.
ಪಕ್ಷದ ಅಧ್ಯಕ್ಷನಾಗಿ ನನಗೆ ಜವಾಬ್ದಾರಿ ಇದೆ. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುವುದಿಲ್ಲ. ದಾಖಲೆ ಸಮೇತ ಆರೋಪ ಮಾಡುತ್ತಿದ್ದೇನೆ. ಯಾರೆಲ್ಲಾ 2 ಮತಗಳನ್ನು ಹೊಂದಿದ್ದಾರೆ, ಇದಕ್ಕೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳನ್ನು ಬಂಧಿಸಿ ಕೇಸ್ ದಾಖಲಿಸಬೇಕು. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಈ ಅಕ್ರಮ ನಡೆಯುತ್ತಿವೆ. ಈ ವಿಚಾರವಾಗಿ ನಾವೇ ತನಿಖೆ ಮಾಡಿದ್ದೇವೆ. ನಮ್ಮ ಬೂತ್ ಏಜೆಂಟರು ಈ ಬಗ್ಗೆ ಪರಿಶೀಲಿಸಿ ಅಕ್ರಮ ಬಯಲು ಮಾಡಿದ್ದಾರೆ.
ಒಂದು ಕ್ಷೇತ್ರದಲ್ಲಿ 1 ಲಕ್ಷ ಬೋಗಸ್ ಮತ ಸೇರಿಸಲಾಗಿದೆ. ಚುನಾವಣೆ ಸೋಲಿನ ಭಯದಲ್ಲಿ ಈ ರೀತಿ ಅಕ್ರಮ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ಪರಿಶೀಲನೆ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ತಂಡ ಕಳುಹಿಸಬೇಕು. ಚುನಾವಣಾ ಆಯೋಗದ ಘನತೆ ಉಳಿಸಿಕೊಳ್ಳಬೇಕು.
ಕಳೆದ ಬಾರಿ ಅಕ್ರಮ ನಡೆದಾಗ ಕಾಂಗ್ರೆಸ್ ಏನು ಮಾಡಲಿಲ್ಲ ಎಂದು ಹೇಳಿದಾಗ, 'ನಾವು ಡಿಸೆಂಬರ್ ತಿಂಗಳಲ್ಲೇ ಅಕ್ರಮ ನಡೆದಾಗ ನಾವು ದೂರು ನೀಡಿದ್ದೆವು. ಆಯೋಗ ನಾಲ್ಕು ಸಭೆ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಈ ರೀತಿ ಮಾಡಿದ್ದಾರೆ. ಅವರು ಏನೇ ಮಾಡಿದರೂ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ನಾವು ಎರಡು ಮತ ಇರುವವರ ಪಟ್ಟಿಯನ್ನು ಕಾಂಗ್ರೆಸ್ ನಮ್ಮ ಬೂತ್ ಏಜೆಂಟರಿಗೆ ಕೊಡುತ್ತೇವೆ. ಅಲ್ಲಿ ನಕಲಿ ಮತದಾನಕ್ಕೆ ಬಂದಾಗ ಅಳ್ಲೇ ಅವರನ್ನು ಬಂಧಿಸುವಂತೆ ಮಾಡುತ್ತೇವೆ. ಚಿಲುಮೆ ಸಂಸ್ಥೆ, ಮಲ್ಲೇಶ್ವರದ ಮಂತ್ರಿಗಳು ಸೇರಿದಂತೆ ಎಲ್ಲರ ಸಂಪರ್ಕವಿದೆ ಎಂದು ತಿಳಿಸಿದರು.












Click it and Unblock the Notifications