ಕುರ್ಚಿ ಸಿಗುವುದೇ ಕಷ್ಟ. ಕುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು: ಡಿ ಕೆ ಶಿವಕುಮಾರ್ ಹೇಳಿದ್ದು ಯಾರಿಗೆ?
ಬೆಂಗಳೂರು, ಜುಲೈ 11: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಜೋರು ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನಲೆ ಇದೀಗ ಅಧಿಕಾರ ಹಂಚಿಕೆ ಸೂತ್ರ ಮುನ್ನಲೆಗೆ ಬಂದಿದ್ದು, ಸದ್ಯ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ ಕೆ ಶಿವಕುಮಾರ್‌ಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ. ನಾನೇ ಐದು ವರ್ಷಗಳ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ಕೈ ಪಾಳಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇತ್ತ ಡಿ ಕೆ ಶಿವಕುಮಾರ್ ಖುರ್ಚಿ ಸಿಗುವುದೇ ಕಷ್ಟ ಎಂದು ಮಾತನಾಡಿದ್ದಾರೆ.
ಬೆಂಗಳೂರು ವಕೀಲರ ಸಂಘದಿಂದ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಉದ್ಘಾಟಿಸಿ ಶಿವಕುಮಾರ್ ಅವರು ಮಾತನಾಡಿ, ಸಭಾಂಗಣದ ಇಕ್ಕೆಲಗಳಲ್ಲಿ ನಿಂತಿದ್ದ ವಕೀಲರನ್ನು ಉದ್ದೇಶಿಸಿ ಇಷ್ಟೊಂದು ಖುರ್ಚಿಗಳಿವೆ ಬನ್ನಿ ಕುಳಿತುಕೊಳ್ಳಿ. ಖುರ್ಚಿ ಸಿಗುವುದೇ ಕಷ್ಟ. ಖುರ್ಚಿ ಸಿಕ್ಕಾಗ ತೆಪ್ಪಗೆ ಬಂದು ಕುಳಿತುಕೊಳ್ಳಬೇಕು. ನಿಮ್ಮನ್ನು ನೋಡಿದರೆ ತ್ಯಾಗಿಗಳ ತರಹ ಕಾಣುತ್ತಾ ಇದ್ದೀರಿ ಎಂದು ಚಟಾಕಿ ಹಾರಿಸಿದರು.

ವಕೀಲರ ಬಳಿ ನ್ಯಾಯ ಕೊಡಿಸಿ ಎಂದು ಜನರು ಬರುತ್ತಾರೆ. ನಿಮ್ಮ ಆತ್ಮತೃಪ್ತಿಗೆ ಕೆಲಸ ಮಾಡಬೇಕು. ನಿಮ್ಮ ಬಳಿ ಬಂದ ಕಕ್ಷಿದಾರನಿಗೆ ಸಂತೋಷವಾಗುವಂತೆ ಕೆಲಸ ಮಾಡಬೇಕು. ಕಪ್ಪು ಕೋಟು ಹಾಕಿದ್ದೇನೆ ಎಂದು ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ನಿಮ್ಮ ಹಾಗೂ ಪೊಲೀಸರ ನಡುವೆ ಆಗಾಗ್ಗೆ ಸಂಘರ್ಷವಾಗುತ್ತಾ ಇರುತ್ತಾರೆ. ಈ ಪೋಲೀಸರು ಮೈಮೇಲೆ ಖಾಕಿ ಬಂದ ತಕ್ಷಣ ದೇವರು ಬಂದಂತೆ ಆಡುತ್ತಾರೆ ಎಂದರು.
ಬೆಂಗಳೂರು ಯೋಜಿತ ನಗರವಲ್ಲ. ಆದರೆ ಕೆಂಪೇಗೌಡರು ಅಂದೇ ಯೋಜಿತವಾಗಿ ನಗರ ಕಟ್ಟಿದವರು. ಕೃಷ್ಣದೇವರಾಯ ಅವರ ಚಿಂತನೆಗಳನ್ನು ಇಲ್ಲಿ ಅಳವಡಿಸಿದರು. ವ್ಯಾಪಾರ ವಹಿವಾಟುಗಳನ್ನು ಬೆಳೆಸಲು ಈ ಊರನ್ನು ಕಟ್ಟಿ ಬೆಳಗಿದರು. ಅವರ ಆಚಾರ ವಿಚಾರಗಳನ್ನು ಉಳಿಸಲು ʼಗ್ರೇಟರ್ ಬೆಂಗಳೂರು ಪ್ರಾಧಿಕಾರʼದ ಮೂಲಕ ಮುಂದಡಿ ಇಟ್ಟಿದ್ದೇವೆ ಎಂದರು.
ರಾಜ್ಯಪಾಲರು ಸಹ ಶಿವಕುಮಾರ್ ದೂರದೃಷ್ಟಿ ಹೊಂದಿದ್ದಾನೆ ಎಂದು ಸಹಕಾರ ನೀಡಿದ್ದಾರೆ. ವಿರೋಧ ಪಕ್ಷದ ನಾಯಕ ಅಶೋಕ್ ಅವರು ಸಹ ಉತ್ತಮ ಜನನಾಯಕ. ಅವರು ಸಹ ಇದಕ್ಕೆ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರೂ.1 ಲಕ್ಷ ಕೋಟಿ ಯೋಜನೆಗಳನ್ನು ಬೆಂಗಳೂರಿನ ಅಭಿವೃದ್ದಿಗೆ ಖರ್ಚು ಮಾಡುವ ಆಲೋಚನೆ ಇದೆ. ಕೆಂಪೇಗೌಡ ಜಯಂತಿ, ಪ್ರಾಧಿಕಾರ ಪ್ರಾರಂಭ ಮಾಡಿದವರೇ ನಾವು. ಪ್ರತಿ ಊರಿನಲ್ಲೂ ಕೆಂಪೇಗೌಡ ಜಯಂತಿ ಮಾಡಬೇಕು ಎಂದು ಹೇಳಿದವರು ನಾವೇ. ಬೆಂಗಳೂರು ನಗರ ಅಭಿವೃದ್ದಿ ಇಲಾಖೆಯನ್ನು ಛಲದಿಂದ ತೆಗೆದುಕೊಂಡಿದ್ದೇನೆ.
ಈ ನಗರದ ಬಗ್ಗೆ ನನ್ನದೇ ಆದ ಕನಸುಗಳಿವೆ. ತಿಹಾರ್ ಜೈಲಿನಿಂದ ಹೊರಗೆ ಬಂದಾಗ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ ನಾನು ಹುಟ್ಟುತ್ತಾ ಕೃಷಿಕ, ನಂತರ ಉದ್ಯಮಿ, ಆಕಸ್ಮಿಕವಾಗಿ ಶಿಕ್ಷಣ ಪ್ರೇಮಿ, ಆಯ್ಕೆಯಿಂದ ರಾಜಕಾರಣಿ. ರಾಜಕಾರಣಿ ಆಗಲೇ ಬೇಕು ಎಂದು ಶಾಲಾ ದಿನಗಳಲ್ಲೇ ಕನಸು ಕಂಡವನು. ಅಲ್ಲಿಂದ ಸಂಘಟನೆ ಮಾಡಿಕೊಂಡು ಬೆಳೆಸಿದ್ದೇನೆ ಎಂದು ಹೇಳಿದರು. ನಮ್ಮ ತಂದೆ, ತಾತನ ಹೆಸರು ಕೆಂಪೇಗೌಡ ಎಂದಿದೆ. ನನ್ನ ಮಗನ ಹೆಸರು ಆಕಾಶ್ ಕೆಂಪೇಗೌಡ, ತಮ್ಮನ ಹೆಸರೂ ಸಹ ಕೆಂಪೇಗೌಡ ಎಂದಿತ್ತು ಆನಂತರ ಸುರೇಶ್ ಎಂದು ಮಾಡಿಕೊಂಡ. ಶಿವನಿಗೆ ಹರಕೆ ಮಾಡಿಕೊಂಡು ನನಗೆ ಶಿವಕುಮಾರ್ ಎಂದು ಹೆಸರಿಟ್ಟರು. ಈ ಇತಿಹಾಸ ನನಗೆ ಗೊತ್ತಿಲ್ಲ ಎಂದು ಹೇಳಿದರು.












Click it and Unblock the Notifications