ಕರ್ನಾಟಕ ನೀರಾವರಿ ನಿಗಮದಲ್ಲಿ ಬೃಹತ್ ಅಕ್ರಮ? ಡಿ.ಕೆ ಶಿವಕುಮಾರ್ ಮಹತ್ವದ ಮಾಹಿತಿ
ಬೆಂಗಳೂರು, ಮಾರ್ಚ್ 17: ಕರ್ನಾಟಕ ರಾಜ್ಯ ನೀರಾವರಿ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕಳೆದ ವರ್ಷ 28 ಇಂಜಿನಿಯರ್‌ಗಳನ್ನು ವಜಾಗೊಳಿಸಲಾಗಿತ್ತು. ಅದರ ಬೆನ್ನಲ್ಲೆ ನಿಗಮದ ನೇಮಕಾತಿ, ನಿಯಮ ಬಾಹಿರವಾಗಿ ಮುಂಬಡ್ತಿ ನೀಡಲಾಗುತ್ತಿದೆ. ನಿಗಮದಲ್ಲಿ ಬೃಹತ್ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಸದನದಲ್ಲಿ ಸುದ್ದಿಯಾಗಿದೆ. ಈ ವಿಚಾರ ಕುರಿತು ಜಲಸಂಪನ್ಮೂಲ ಸಚಿವರು ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ್ದಾರೆ.
ಹಿಂದಿನಿಂದಲೂ ರಾಜ್ಯ ನೀರಾವರಿ ನಿಗಮದಲ್ಲಿ ಅಕ್ರಮ ಮುಂಬಡ್ತಿ, ಅಕ್ರಮ ನೇಮಕಾತಿ ಗುಲ್ಲು ಸುದ್ದಿಯಾಗುತ್ತಲೇ ಇದೆ. ಕೇಂದ್ರದಲ್ಲಿ ಮಾತ್ರವಲ್ಲದೇ, ವಿಧಾನಸಭೆಯ್ಲಲೂ ಸದ್ದು ಮಾಡಿದೆ. ಅದರ ಬಿಸಿ ರಾಜ್ಯ ಬಜೆಟ್ ಅಧಿವೇಶನಕ್ಕೂ ತಟ್ಟಿದೆ. ನಿಯಮ 351ರ ಅಡಿಯಲ್ಲಿ ಜೆಡಿಎಲ್‌ಪಿ ನಾಯಕ ಸುರೇಶ್ ಬಾಬು ಕೇಳಿದ ಸೂಚನಾ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.

ಕರ್ನಾಟಕ ನೀರಾವರಿ ನಿಗಮದ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರವು ಸಾರ್ವಜನಿಕ ದೂರು ಸ್ವೀಕರಿಸಿದೆ. ಇದರಲ್ಲಿ ಅಕ್ರಮ ನೇಮಕಾತಿ/ನಿಯಮ ಬಾಹಿರ ಮುಂಬಡ್ತಿ ನೀಡಿರುವುದು, ವೇತನ ಹಾಗೂ ಇನ್ನಿತರೆ ಸವಲತ್ತುಗಳನ್ನು ನಿಯಮ ಬಾಹಿರವಾಗಿ ಪಡೆದಿರುವ ಬಗ್ಗೆ ಹೇಳಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸುವಂತೆ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಡಿಕೆ ಶಿವಕುಮಾರ್ ಅವರು ಲಿಖಿತವಾಗಿ ಸದನಕ್ಕೆ ತಿಳಿಸಿದರು.
ಸದ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರಕ್ಕೆ ವರದಿ ಈಗಾಗಲೇ ಸಲ್ಲಿಸಿದ್ದಾರೆ. ಅದರೆ ಅದು ಸರ್ಕಾರದ ಪರಿಶೀಲನಾ ಹಂತದಲ್ಲಿದೆ ಎಂದಿದ್ದಾರೆ. ಅವರ ಈ ಮಾತಿಗೆ ಸದನಕ್ಕೆ ಉತ್ತರ ಸಿಕ್ಕಿದೆ. ಆದರೆ ನೊಂದವರಿಗೆ ಸಮಾಧಾನವಾಗಿಲ್ಲ. 2007 ರಿಂದಲೂ ನೊಂದವರಿಗೆ ನ್ಯಾಯ ದೊರೆತಿಲ್ಲ. ಈವರೆಗೆ ನಿಗಮದ ಅಕ್ರಮ ಅರೋಪ ವಿಚಾರ ಶಕ್ತಿ ಸೌಧದಲ್ಲಿ ಸದ್ದು ಮಾಡುತ್ತಿದೆ.

ಕರ್ನಾಟಕ ನೀರಾವರಿ ನಿಗಮ, ನೋಂದಾಯಿತ ಕಛೇರಿ, ಬೆಂಗಳೂರು ಇಲ್ಲಿ ಸುಮಾರು 25 ನೌಕರರು ನಿಗಮದಲ್ಲಿ 2000 ದಿಂದ 2007 ರವರೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2007 ರಲ್ಲಿ ನಿಗಮದ ಮಂಡಳಿ ಸಭೆಯ ಅನುಮೋದನೆ ಪಡೆದು ಖಾಯಂ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡು 2010 ರಲ್ಲಿ ನಿಗಮದ ಖಾಯಂ ನೌಕರರಾಗಿ ಸೇವೆಗೆ ಸೇರಿಕೊಂಡಿದ್ದಾರೆ.
ನಿಯಮ ಪಾಲಿಸದೇ ವೇತನ, ಮುಂಬಡ್ತಿ? ಇದು ವರ್ಷಗಳ ಅಳಲು
ಸೇವೆ ಸೇರ್ಪಡೆ ಆದಾಗ ವೇತನ ನಿಗದಿ ಮಾಡುವಾಗ ಯಾವುದೇ ವಿದ್ಯಾರ್ಹತೆ, ಅನುಭವ, ವಯಸ್ಸು ಇತರೆ ಮಾನದಂಡಗಳನ್ನು ಪರಿಗಣಿಸಿರಲಿಲ್ಲ. ಇಷ್ಟ ಬಂದಂತೆ ಮಾನದಂಡ ಇಲ್ಲದೇ ಒಬ್ಬೊಬ್ಬರಿಗೆ ಎರೆಡೆರೆಡು ಪದನಾಮ ನೀಡಲಾಗಿದೆ. ಪ್ರಮುಖ ವಿಷಯಗಳನ್ನು ಕಡೆಗಣಿಸಲಾಗಿದೆ. 2021 ರ ನವೆಂಬರ್ ನಲ್ಲಿ ನಿಗಮದ ಹಣಕಾಸು ಶಾಖೆಯಲ್ಲಿ ಕೆಲವು ನೌಕರರು ತಮಗೆ ಇಷ್ಟ ಬಂದಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿಕೊಂಡು ಸ್ಟೆನೋ ಕಂ ಆಫೀಸ್ ಅಸಿಸ್ಟೆಂಟ್ ಎಂಬ ಹೊಸ ಹುದ್ದೆ ಸೃಷ್ಟಿಸಲಾಗಿದೆ. ಸುಮಾರು 15,000 ಗಳ ವರೆಗೆ ಮೂಲ ವೇತನ ಹೆಚ್ಚಿಸಿಕೊಂಡು, ಪ್ರಬಾರ ಹುದ್ದೆಯ ಭತ್ಯೆಯನ್ನೂ ಪಡೆದುಕೊಂಡಿದ್ದಾರೆ. ವೃಂದ ಮತ್ತು ನೇಮಕಾತಿ ನಿಯಮಗಳು ಇಲ್ಲಿ ಪಾಲನೆ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಸ್ಟೆನೋ ಹುದ್ದೆಯಲ್ಲಿ ಕೆಲಸ ಮಾಡ ಬೇಕಾದರೆ ಸಂಪೂರ್ಣ ಜೂನಿಯರ್, ಮಧ್ಯಂತರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಉತ್ತೀರ್ಣ ಆಗಿರಬೇಕು. ಪದವಿ ಪಡೆದಿರಬೇಕು. ಆದರೆ ಇಂತಹ ವಿದ್ಯಾರ್ಹತೆಯ ಇಲ್ಲದೇ ಎಲ್ಲಾ ನಿಯಮ ಗಾಳಿಗೆ ತೂರಿ ಮನಬಂದಂತೆ ವೇತನ ನಿಗದಿ ಮಾಡಿಕೊಂಡಿದ್ದಾರೆ ಎಂದು ನೊಂದವರು ದೂರಿದ್ದಾರೆ. ಈ ಬಗ್ಗೆ ಸರ್ಕಾರ ಪರಿಶೀಲಿಸಿವುದಾಗಿ ಹೇಳಿತ್ತು. ಆದರೆ ಯಾವುದು ಕಾರ್ಯರೂಪಕ್ಕೆ ಬಂದಿಲ್ಲ ಎಂಬುದೇ ಬೇಸರದ ಸಂಗತಿ.












Click it and Unblock the Notifications