ಯಡಿಯೂರಪ್ಪ ಸಿಎಂ ಆದಾಗ ಒಂದು ಸೀರೆ, ಒಂದು ಸೈಕಲ್ ಬಿಟ್ಟರೆ ಬಿಜೆಪಿ ಬೇರೆ ಏನೂ ನೀಡಿಲ್ಲ : ಡಿ ಕೆ ಶಿವಕುಮಾರ್
ಶಿವಮೊಗ್ಗ, ಫೆಬ್ರವರಿ 24: ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದಾಗ ಒಂದು ಸೀರೆ, ಒಂದು ಸೈಕಲ್ ನೀಡಿದ್ದರು. ಅದನ್ನು ಬಿಟ್ಟರೆ ಬಿಜೆಪಿ ಬೇರೆ ಏನೂ ನೀಡಿಲ್ಲ. ಆ ಸೈಕಲ್ ಎಲ್ಲಿ ಹೋಯ್ತು. ಅದನ್ನು ಯಾಕೆ ನಿಲ್ಲಿಸಿದಿರಿ? ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, ಬಿಜೆಪಿ ಸ್ನೇಹಿತರೇ ನೀವು ನಾಲ್ಕು ವರ್ಷ ಅಧಿಕಾರ ನಡೆಸಿದ್ದೀರಿ. ಜನರ ಬದುಕು ಕಟ್ಟಿಕೊಡಲು ಯಾವುದಾದರೂ ಒಂದು ಯೋಜನೆ ನೀಡಿದ್ದೀರಾ? ಅದನ್ನು ಜನರಿಗೆ ತಿಳಿಸಿ. ಈ ಭಾಗದ ಶಾಸಕರಾದ ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದರು. ಅವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ಅರಗ ಜ್ಞಾನೇಂದ್ರ 420 ಗ್ಯಾರಂಟಿ ಎಂದಿದ್ದಾರೆ. ಅರಗ ಜ್ಞಾನೇಂದ್ರ ನಿನಗೆ ಜ್ಞಾನ ಇದೆಯಾ? ನಿನಗೆ ಇರೋದು ಅರ್ಧ ಜ್ಞಾನ ಮಾತ್ರ ಎಂದು ಹೇಳಿದರು.

ಅಲ್ಲಮ ಪ್ರಭುಗಳು ಒಂದು ಮಾತು ಹೇಳಿದ್ದಾರೆ. ಕೊಟ್ಟ ಕುದುರೆ ಎರಲಾಗದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರ ಇದ್ದಾಗ ಏನೂ ಮಾಡದೇ, ಅಧಿಕಾರ ಕಳೆದುಕೊಂಡ ನಂತರ ಈಗ ಮೋದಿ ಗ್ಯಾರಂಟಿ ಎಂದು ಅರಿಯುತ್ತೇನೆ ಎಂದರೆ ಏನು ಪ್ರಯೋಜನ? ನೀವು ಅಧಿಕಾರದಲ್ಲಿದ್ದಾಗ ಇಂತಹ ಒಂದು ಯೋಜನೆ ನೀಡಲಿಲ್ಲ.
ನೀವು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದಿರಿ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದಿರಿ. ಹೇಳಿದಂತೆ ಮಾಡಿದಿರಾ? ಏನಿಲ್ಲ, ಏನಿಲ್ಲಾ. ಬಿಜೆಪಿ ನಾಯಕರು ಕೇವಲ ಖಾಲಿ ಮಾತಾಡುತ್ತಾರೆ. ಕುವೆಂಪು ಅವರು ಒಂದು ಮಾತು ಹೇಳಿದ್ದಾರೆ. ಭರತ ಖಂಡದ ಹಿತವೇ ನಮ್ಮ ಹಿತ. ಭಾರತ ಮಾತೆಯ ಹಿತವೇ ನಮ್ಮ ಹಿತ. ಭಾರತಾಂಬೆ ಮಕ್ಕಳೆಲ್ಲಾ ಸಹೋದರರು ಎಂದು ಹೇಳಿದ್ದಾರೆ. ಅದರಂತೆ ನಾವು ಎಲ್ಲರನ್ನೂ ಸಹೋದರ ಸಹೋದರಿಯಂತೆ ಕಾಣುತ್ತೇವೆ.
ಅರ್ಚಕನ ಪ್ರಭಾವದಿಂದ ನಾವು ಶಿಲೆಯಲ್ಲೂ ಶಿವನನ್ನು ಕಾಣುತ್ತೇವೆ. ನಿನ್ನೆ ನಾವು ಒಂದು ಮಸೂದೆಯನ್ನು ಮಂಡಿಸಿದೆವು. ಅದರ ಮೂಲಕ ದೊಡ್ಡ ದೇವಾಲಯಗಳ ಆದಾಯದಲ್ಲಿ ಶೇ.10ರಷ್ಟು ಆದಾಯ ತೆಗೆದುಕೊಂಡು ಅದನ್ನು ಅರ್ಚಕರ ವೇತನ, ವಿಮೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂದಾಗಿದ್ದೆವು. ದೇವಾಲಯ, ಧರ್ಮದ ಬಗ್ಗೆ ಮಾತನಾಡುವ ಬಿಜೆಪಿ ಹಾಗೂ ಜೆಡಿಎಸ್ ನವರು ಆ ಮಸೂದೆಯನ್ನು ಪರಿಷತ್ತಿನಲ್ಲಿ ಸೋಲಿಸಿದ್ದಾರೆ. ಇನ್ನು ಮೂರು ತಿಂಗಳಲ್ಲಿ ನಾವು ಮೇಲ್ಮನೆಯಲ್ಲಿ ಬಹುಮತ ಪಡೆಯುತ್ತೇವೆ. ಆಗ ನಮ್ಮ ಮಸೂದೆ ಜಾರಿಯಾಗುವಂತೆ ಮಾಡುತ್ತೇವೆ.
ನಮ್ಮ ಸರ್ಕಾರ ಎಪಿಎಂಸಿಗಳಿಗೆ, ಹಿಂದುಳಿದವರಿಗೆ ಶಕ್ತಿ ನೀಡುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. "ಜಾತಿ ವಿಚಾರ ಬಗ್ಗೆ ಯೋಚಿಸಬೇಡಿ" ಎಂದು ನಾರಾಯಣ ಗುರುಗಳು ನಮಗೆ ಸಂದೇಶ ನೀಡಿದರು. ಅದರಂತೆ ನಾವು ಜಾತಿಯನ್ನು ಬಿಟ್ಟು ನೀತಿ ಮೇಲೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅದಕ್ಕಾಗಿ ಬಜೆಟ್ ನಲ್ಲಿ 52 ಸಾವಿರ ಕೋಟಿ ಹಣ ಮೀಸಲಿಟ್ಟಿದ್ದೇವೆ.
ಬಿಜೆಪಿಯವರು ಇಂತಹ ಒಂದು ಕಾರ್ಯಕ್ರಮ ಹೆಸರಲ್ಲಿ ಮತ ಕೇಳಲು ಆಗುತ್ತದೆಯೇ? ನಮ್ಮದು 420 ಕಾರ್ಯಕ್ರಮವಾದರೆ ನಮ್ಮ ಯೋಜನೆಯಿಂದ ಪ್ರಯೋಜನ ಪಡೆಯಬೇಡಿ ಎಂದು ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಅವರು ಜನರಿಗೆ ಕರೆ ನೀಡಲಿ ಎಂದು ಸವಾಲು ಹಾಕುತ್ತೇನೆ. ರಾಜ್ಯದ ಮಹಿಳೆಯರು ತಮ್ಮ ಮನೆಯಲ್ಲಿ ದೀಪ ಹಚ್ಚುವಾಗ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತಾರೆ.
ನಾನು ಸಂತ ಸೇವಾಲಾಲ್ ಅವರ ಜನ್ಮಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಒಂದು ಮಾತು ನನಗೆ ನೆನಪಾಯಿತು. 'ನೀರಿನಿಂದ ಸ್ನಾನ ಮಾಡಿದವರು ಬಟ್ಟೆ ಬದಲಾಯಿಸುತ್ತಾರೆ. ಬೆವರಿನಿಂದ ಸ್ನಾನ ಮಾಡುವವರು ಇತಿಹಾಸ ಬದಲಿಸುತ್ತಾರೆ.' ಅಲ್ಲಮಪ್ರಭು ಅವರ ಪಾರ್ಕ್ ನಲ್ಲಿ ಅವರ ಒಂದು ವಚನ ಬರೆದಿದ್ದಾರೆ. 'ದೇಹದೊಳಗೆ ದೇವಾಲಯವಿದ್ದು, ಬೇರೆ ದೇವಾಲಯ' ಯಾಕೆ ಎಂದು ಬರೆಯಲಾಗಿತ್ತು.
ಮಾನವನ ಧರ್ಮ ಶ್ರೇಷ್ಠ ಧರ್ಮ. ನಮ್ಮ ಕಾಂಗ್ರೆಸ್ ಸರ್ಕಾರ ಈ ತತ್ವದ ಮೇಲೆ ಶೈಕ್ಷಣಿಕ ಹಕ್ಕು, ಆಹಾರಭದ್ರತೆ ಹಕ್ಕು, ಗ್ರಾಮೀಣ ಖಾತ್ರಿ ಯೋಜನೆ, ರೈತರಿಗೆ ಭೂಮಿ, ಮನೆ ನೀಡುವ ಯೋಜನೆ ತಂದಿದೆ. ಬಂಗಾರಪ್ಪ ಅವರು ಆರಾಧನಾ ಯೋಜನೆ ಮೂಲಕ ದೇವಾಲಯಗಳ ಅಭಿವೃದ್ಧಿ ಮಾಡಿದರು. ಎಲ್ಲಾ ವರ್ಗದ ಜನರ ಬದುಕಿನಲ್ಲಿ ಬದಲಾವಣೆ ತರುವ ಯೋಜನೆ ತಂದಿದ್ದಾರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನೀವೆಲ್ಲರೂ ನಮಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಹೇಳಿದರು.












Click it and Unblock the Notifications