Karnataka CM: ಸಿಎಂ ಕುರ್ಚಿ ಗಿಟ್ಟಿಸಿಕೊಳ್ಳಲು ಹೈಕಮಾಂಡ್ ಮೇಲೆ ಡಿ.ಕೆ.ಶಿವಕುಮಾರ್ ಹೊಸ ಅಸ್ತ್ರ
ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವು ಬೂದಿಮುಚ್ಚಿದ ಕೆಂಡದಂತೆ ಇದೆ. ಇತ್ತೀಚಿಗಷ್ಟೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ದೆಹಲಿ ಭೇಟಿಯು ಭಾರೀ ಕುತೂಹಲ ಮೂಡಿಸಿದ್ದು, ಸಿಎಂ ಕುರ್ಚಿ ಗಿಟ್ಟಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಅವರು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಅತ್ತ ಐದು ವರ್ಷವೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಘೋಷಣೆ ಮಾಡುತ್ತಿರುವ ಹಿನ್ನೆಲೆ ಡಿಕೆಶಿ ತನ್ನದೇ ಆದ ತಂತ್ರ ರೂಪಿಸಿ, ಹೈಕಮಾಂಡ್‌ಗೆ ತನ್ನ ಪವರ್ ತೋರಿಸಲು ಮುಂದಾಗಿದ್ದಾರೆ.
ಹೌದು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ನಿನ್ನೆ, ಮೊನ್ನೆಯದಲ್ಲ. ಈ ಸರ್ಕಾರ ರಚನೆಯಾದಾಗಿನಿಂದಲೂ ಅಧಿಕಾರದ ಹಂಚಿಕೆ ಗುಸುಗುಸು ಇದ್ದೇ ಇದೆ. ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗಿ ಅಧಿಕಾರ ಪಡೆಯಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಲೇ ಇವೆ. ಆಗಾಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ನಡುವೆ ಅಧಿಕಾರದ ಒಪ್ಪಂದವೂ ನಡೆದಿದೆ ಎಂದೆಲ್ಲ ಸುದ್ದಿ ಸದ್ದು ಮಾಡಿತ್ತು. ಆದರೆ ಹೈಕಮಾಂಡ್ ಈ ವಿಚಾರದಲ್ಲಿ ಸೈಲೆಂಟಾಗಿ ಇರುವಂತೆ ಎಲ್ಲರ ಬಾಯಿಗೆ ಬೀಗ ಹಾಕಿತ್ತು.

ಇತ್ತೀಚೆಗೆ ಸೆಪ್ಟೆಂಬರ್ ಕ್ರಾಂತಿ, ನವೆಂಬರ್ ಕ್ರಾಂತಿ ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ. ಸೆಪ್ಟೆಂಬರ್ ಮುಗಿಯಿತು, ಯಾವುದೇ ಕ್ರಾಂತಿಯಾಗಲಿಲ್ಲ. ಈಗ ನವೆಂಬರ್ ಕ್ರಾಂತಿ ಮುನ್ನೆಲೆಯಲ್ಲಿದೆ. ಇದಕ್ಕೆ ಪುಷ್ಟಿ ನೀಡುವಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇತ್ತೀಚೆಗೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿರುವ ಡಿಕೆಶಿ, ಸಿದ್ದರಾಮಯ್ಯ ಇದೇ ವಿಚಾರವಾಗಿ ಚರ್ಚೆ ನಡೆಸಿಬಂದಿದ್ದಾರೆ. ಆದರೆ ಡಿಕೆಶಿ ಅವರ ಕನಸಿಗೆ ಹೈಕಮಾಂಡ್ ರೆಡ್‌ಸಿಗ್ನಲ್ ನೀಡಿದೆ ಎನ್ನುವುದು ರಾಜಕೀಯ ವಲಯಲ್ಲಿದ ಚರ್ಚೆ.
ಈ ಹಿನ್ನೆಲೆ ಕನಕಪುರದ ಬಂಡೆ ಹೈಕಮಾಂಡ್‌ಗೆ ತನ್ನ ಶಕ್ತಿ ಪ್ರದರ್ಶಿಸಲು ಹೊಸ ಮಾಸ್ಟರ್‌ಪ್ಲ್ಯಾನ್ ಮಾಡಿದ್ದಾರಂತೆ. ಕಾಂಗ್ರೆಸ್ ಸರ್ಕಾರವು ಈಗಾಗಲೇ ತನ್ನ ಅಧಿಕಾರದ ಅರ್ಧ ಅವಧಿಯನ್ನು ಪೂರೈಸಿದೆ. ಇನ್ನು ಎರಡೂವರೆ ವರ್ಷವಷ್ಟೇ ಬಾಕಿ ಇದೆ. ಈ ಹಿನ್ನೆಲೆ ಡಿ.ಕೆ.ಶಿವಕುಮಾರ್ ಅವರ ಬಣದ ಶಾಸಕರು ದೆಹಲಿಗೆ ತೆರಳಿ, ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಡಿ.ಕೆ.ಶಿವಕುಮಾರ್ ಬಣದ ಹತ್ತು ಕಾಂಗ್ರೆಸ್ ಶಾಸಕರು ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ತಕ್ಷಣವೇ ಮುಖ್ಯಮಂತ್ರಿಯಾಗಿ ಘೋಷಿಸಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದೆಹಲಿ ಭೇಟಿಯು ಡಿಕೆಶಿಗೆ ಯಶಸ್ವಿಯಾಗದ ಹಿನ್ನೆಲೆ ಇದೀಗ ಶಾಸಕರ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಅವರು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಹಲವು ವೇದಿಕೆಗಳಲ್ಲಿ ಸಿದ್ದರಾಮಯ್ಯ ಅವರು ಐದು ವರ್ಷವೂ ನಾನೇ ಸಿಎಂ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಸಿಎಂ ಆಗುವ ಅವಕಾಶ ಕೈತಪ್ಪುವ ಭೀತಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ತಮ್ಮ ಶಾಸಕರು ದೆಹಲಿಗೆ ಕಳಿಸಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ನಾನು ಪಕ್ಷದ ನಿಷ್ಠಾವಂತ ಎನ್ನುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಸಿಗುತ್ತಾ ಕಾದು ನೋಡಬೇಕಿದೆ.











Click it and Unblock the Notifications