ಬಡವರಿಗೆ ಅಕ್ಕಿ ಕೊಡಲು ನಿರಾಕರಿಸಿದ ಕೇಂದ್ರದ ವಿರುದ್ಧ ಜೂ.20ರಂದು ಬೃಹತ್ ಪ್ರತಿಭಟನೆ: ಡಿಕೆಶಿ
ಬೆಂಗಳೂರು, ಜೂ. 16: ಕರ್ನಾಟಕ ರಾಜ್ಯದ ಪ್ರತಿಷ್ಠಿತ ಯೋಜನೆಯಾದ ಅನ್ನಭಾಗ್ಯ ಜಾರಿಗೆ ಅಗತ್ಯ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಆಹಾರ ಪ್ರಾಧಿಕಾರ ಅವಕಾಶ ನಿರಾಕರಿಸಿದ್ದು, ಇದು ಬಿಜೆಪಿಯ ದ್ವೇಷ ರಾಜಕಾರಣ ಹಾಗೂ ಬಡವರ ವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಇದರ ವಿರುದ್ಧ ಕರ್ನಾಟಕ ಕಾಂಗ್ರೆಸ್ ಜೂನ್ 20ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ ಜನರಲ್ಲಿ ಅರಿವು ಮೂಡಿಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ (ಜೂನ್ 16) ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ. ಅಕ್ಕಿ ನೀಡಲು ಬದ್ಧವಾಗಿದೆ. ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಈ ಜಾರಿ ಬಗ್ಗೆ ವಿರೋಧ ಪಕ್ಷದ ಸ್ನೇಹಿತರು ಅನೇಕ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಬಂದ ಮೊದಲ ದಿನವೇ ಮೊದಲ ಆದೇಶ ಹೊರಡಿಸಿ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಎರಡನೇ ಸಂಪುಟ ಸಭೆಯಲ್ಲಿ ಈ ಯೋಜನೆ ಜಾರಿ ಸಮಯವನ್ನು ನಿರ್ಧರಿಸಿದ್ದೇವೆ. ವಿಪಕ್ಷಗಳ ಟೀಕೆಗೆ ನಾವು ಉತ್ತರ ನೀಡುವುದಿಲ್ಲ. ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ ಎಂಬ ಮಾತನ್ನು ನಾವು ನಂಬಿದ್ದೇವೆ ಎಂದರು.
ಅಮಿತ್ ಶಾ ವಿರುದ್ಧ ಡಿ.ಕೆ.ಶಿ.ಆಕ್ರೋಶ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಸೋತರೆ ಕೇಂದ್ರ ಅನುದಾನ ಸ್ಥಗಿತ ಎಂದು ಹೇಳಿದ್ದರು. ಈಗ ಕರ್ನಾಟಕ ರಾಜ್ಯಕ್ಕೆ ಅಕ್ಕಿ ಖರೀದಿಗೆ ಅವಕಾಶ ತಪ್ಪಿಸುವ ಮೂಲಕ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಮತ್ತೊಂದೆಡೆ ಒಕ್ಕೂಟ ವ್ಯವಸ್ಥೆಯಲ್ಲಿ ಕೆಲಸ ಮಾಡುವುದಾಗಿ ಪ್ರಧಾನ ಮಂತ್ರಿಗಳು ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಅಧ್ಯಕ್ಷರು ಮತದಾರರನ್ನು ಬೆದರಿಸಿದ್ದರು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಮಾಡಿದ್ದು, ಮುಂದಿನ ತಿಂಗಳಿಂದ ಯೋಜನೆ ಜಾರಿಗೆ ತೀರ್ಮಾನ ಮಾಡಿದ್ದೆವು. ಇದಕ್ಕಾಗಿ ಭಾರತೀಯ ಆಹಾರ ಪ್ರಾಧಿಕಾರಕ್ಕೆ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು. ಪ್ರಾಧಿಕಾರ ಕೂಡ ಜೂನ್ 12ರಂದು ಜುಲೈ ತಿಂಗಳಲ್ಲಿ ಇ ಹರಾಜು ಮೂಲಕ ಅಕ್ಕಿ ನೀಡುವುದಾಗಿ ಅನುಮತಿ ನೀಡಿತ್ತು ಎಂದರು.
ಈ ವೇಳೆ 2,08,425.750 ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಅನುಮತಿ ನೀಡುವುದಾಗಿ ಪ್ರಾಧಿಕಾರ ಪತ್ರ ಬರೆದಿತ್ತು. ಇದಾದ ಮರುದಿನವೇ (ಜೂನ್ 13) ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರುವುದನ್ನು ತಡೆಯಲಾಗಿದೆ ಎಂದು ಉಲ್ಟಾ ಹೊಡೆದಿದೆ. ಇದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಜನ ಹಾಕಿರುವ ಮತಗಳಿಗೆ ಬಿಜೆಪಿಯ ಭ್ರಷ್ಟ ಸರ್ಕಾರ ಧಿಕ್ಕಾರ ಹಾಕಿದೆ ಎಂದು ಗುಡುಗಿದರು.
ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ
ಈ ಮೂಲಕ ಬಿಜೆಪಿ ಬಡವರಿಗೆ ದ್ರೋಹ ಮಾಡುತ್ತಿದೆ. ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ. ಬಿಜೆಪಿ ಎಂದರೆ ಬಡವರಿಗೆ ದ್ರೋಹ ಬಗೆಯುವ ಪಕ್ಷವಾಗಿದೆ. ಕೇಂದ್ರದ ಈ ದ್ರೋಹ ಖಂಡಿಸಿ ಜೂನ್ 20ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುವುದು. ಈ ಪ್ರತಿಭಟನೆಯಲ್ಲಿ ಆಯಾ ಜಿಲ್ಲೆಯ ಶಾಸಕರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರ ನೀಡದಿದ್ದರೂ ಜನರಿಗೆ ನಾವು 10 ಕೆ.ಜಿ ಅಕ್ಕಿಯನ್ನು ಕೊಡುತ್ತೇವೆ. ಅನ್ನ ಭಾಗ್ಯ ಯೋಜನೆ ಜಾರಿ ಆಗಲಿದೆ. ಮುಖ್ಯಮಂತ್ರಿಗಳು, ಸಚಿವರು ಬೇರೆ ರಾಜ್ಯಗಳ ಜೊತೆ ಚರ್ಚೆ ಮಾಡುತ್ತಿದ್ದಾರೆ. ನಾವು ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಲು ಸಾಧ್ಯವಿಲ್ಲ ಎಂದೇನಿಲ್ಲ. ಇದು ಒಕ್ಕೂಟ ವ್ಯವಸ್ಥೆ. ದೇಶದಲ್ಲಿ ಈಗಾಗಲೇ ಇರುವ ವ್ಯವಸ್ಥೆ ಹಾಗೂ ಪ್ರಕ್ರಿಯೆಯ ಮೂಲಕ ಅಕ್ಕಿ ಖರೀದಿಗೆ ಮನವಿ ಮಾಡಿದ್ದೆವು ಎಂದರು.
ಪಾರದರ್ಶಕ ವ್ಯವಸ್ಥೆಯಲ್ಲಿ ಅಕ್ಕಿ ಖರೀದಿಗೆ ನಾವು ಎಫ್‌ಸಿಐಗೆ ಕೇಳಿದ್ದೇವೆ. ಕೇಂದ್ರದ ಬಳಿ 7 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ನಾವು ಕೇವಲ 2.85 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಕೇಳಿದ್ದೆವು. ದಾಸ್ತಾನು ಇದ್ದರೂ ಅಕ್ಕಿ ನೀಡಲು ನಿರಾಕರಿಸಿದ್ದಾರೆ. ಕೇಂದ್ರದ ಈ ಧೋರಣೆ ವಿರುದ್ಧ ಪ್ರತಿಭಟಿಸಿ, ಜನರಿಗೆ ಅರಿವು ಮೂಡಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ ಎಂದು ಸೂಚನೆ ನೀಡಿದರು.
ಎಫ್‌ಸಿಐ ನೀತಿ ಬದಲಾಗಿದ್ದು, ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಗೊತ್ತಿಲ್ಲದೇ ಅನುಮತಿ ನೀಡಿ ಪತ್ರ ಬರೆದಿದ್ದಾರೆ ಎಂಬ ಎಫ್‌ಸಿಐ ಅಧಿಕಾರಿಗಳ ಸ್ಪಷ್ಟನೆ ಬಗ್ಗೆ ಕೇಳಿದಾಗ, ಅಲ್ಲಿಗೆ ಭಾರತ ಆಹಾರ ಪ್ರಾಧಿಕಾರಕ್ಕೆ ತಮ್ಮ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ ಎಂಬುದು ಸ್ಪಷ್ಟ ಆಗುತ್ತದೆ ಅಲ್ಲವೇ? ಎಂದರು.
ಹೆಚ್ಚು ಅಕ್ಕಿ ಬೆಳೆಯುವ ರಾಜ್ಯಗಳ ಸಂಪರ್ಕ
"ನಾವು ಹೆಚ್ಚು ಅಕ್ಕಿ ಬೆಳೆಯುವ ರಾಜ್ಯಗಳನ್ನು ಸಂಪರ್ಕಿಸುತ್ತಿದ್ದೇವೆ. ಆದರೆ ಯಾರನ್ನು ಸಂಪರ್ಕಿಸುತ್ತೇವೆ ಎಂದು ಬಹಿರಂಗಪಡಿಸುವುದಿಲ್ಲ. ಬಹಿರಂಗಪಡಿಸಿದರೆ ಅವರಿಗೂ ಅಕ್ಕಿ ಮಾರಾಟ ಮಾಡದಂತೆ ಬೆದರಿಕೆ ಹಾಕುತ್ತಾರೆ. ಈ ಯೋಜನೆ ಕೇವಲ ಕಾಂಗ್ರೆಸಿಗರಿಗೆ ಮಾತ್ರವಲ್ಲ, ಎಲ್ಲಾ ಪಕ್ಷದ ಬೆಂಬಲಿಗರು, ಮತದಾರರಿಗೆ ಲಭ್ಯವಾಗುತ್ತದೆ. ಹೀಗಾಗಿ ರಾಜ್ಯದ ಸಂಸದರು ನಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ," ಎಂದರು. ಹಾಗೆಯೇ ಈಗ ಎಫ್‌ಐನಲ್ಲಿ ಏನು ದರ ನಿಗದಿಯಾಗಿದೆಯೋ ಆ ದರದಲ್ಲಿ ಅಕ್ಕಿ ಖರೀದಿ ಮಾಡುತ್ತೇವೆ ಎಂದು ತಿಳಿಸಿದರು.
ಚುನಾವಣೆ ಮುಗಿದಿದೆ. ಜನಪ್ರತಿನಿಧಿಗಳಾಗಿ ರಾಜ್ಯದ ನೆಲ, ಜಲ, ಭಾಷೆ, ಗಡಿ ವಿಚಾರವಾಗಿ ಒಟ್ಟಾಗಿ ಕೆಲಸ ಮಾಡಬೇಕು. ನಾನು ಬೆಂಗಳೂರಿನ ಅಭಿವೃದ್ಧಿ ಕುರಿತು ನಡೆಸಿದ ಸಭೆಯಲ್ಲಿ ಎಲ್ಲಾ ಪಕ್ಷದವರನ್ನು ಅಹ್ವಾನ ಮಾಡಿದ್ದೆ. ಜೂನ್ 21ರಂದು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯದ ಸಚಿವರುಗಳನ್ನು ಕರೆದಿದ್ದು, ಪಕ್ಷದ ಪ್ರಣಾಳಿಕೆ ಜಾರಿ ವಿಚಾರವಾಗಿ ಮಾರ್ಗದರ್ಶನ ನೀಡಲಿದ್ದೇವೆ. ಈ ವೇಳೆ ಕೇಂದ್ರದ ಸಚಿವರುಗಳನ್ನು ಭೇಟಿ ಮಾಡಿ ಬಾಕಿಯಿರುವ ಯೋಜನೆ ಜಾರಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
"ಕಾನೂನು ಹೋರಾಟ ಬೇಡ. ಒಕ್ಕೂಟ ವ್ಯವಸ್ಥೆಯಲ್ಲಿ ಯಾರಿಗೆ ಏನು ಸಿಗಬೇಕೋ ಅವರಿಗೆ ಸಿಗಬೇಕು. ನಾವು ಕೇಂದ್ರ ಸರ್ಕಾರಕ್ಕೆ ಶೇ.40ರಷ್ಟು ತೆರಿಗೆ ಪಾವತಿ ಮಾಡುತ್ತೇವೆ. ಆದರೆ ನಮಗೆ ವಾಪಸ್ ಕೇವಲ ಶೇ.17ರಷ್ಟು ಮಾತ್ರ ಸಿಗುತ್ತದೆ. ಆದ್ದರಿಂದ ಎಲ್ಲರನ್ನು ಸಮಾನವಾಗಿ ನೋಡಬೇಕು ಎಂಬ ಉದ್ದೇಶದಿಂದ ಸಂವಿಧಾನ ಪೀಠಿಕೆಯನ್ನು ಎಲ್ಲ ಶಾಲೆಗಳಲ್ಲಿ ಓದಿಸಲು ಸರ್ಕಾರ ತೀರ್ಮಾನಿಸಿದೆ" ಎಂದು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಡಿ.ಕೆ.ಶಿ ಹೇಳಿದ್ದೇನು?
ಇನ್ನು ಗೃಹಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಪ್ರತಿಕ್ರಿಯಿಸಿ, "ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಸೇವಾ ಸಿಂಧುವಿನಲ್ಲಿ ಪ್ರತಿನಿತ್ಯ 200ಕ್ಕಿಂತ ಹೆಚ್ಚು ಅರ್ಜಿ ಪಡೆಯಲು ಆಗುವುದಿಲ್ಲ. ಪ್ರತಿ ಪಂಚಾಯತಿಯಲ್ಲಿ ಒಂದು ಗ್ರಾಮ ಒನ್ ಮಾತ್ರ ಇದೆ. ಈ ಪ್ರದೇಶದಲ್ಲಿ ಎರಡೂವರೆ ಸಾವಿರ ಕುಟುಂಬಗಳಿವೆ. ಹೀಗಾಗಿ ಅಲ್ಲಿ ಮಹಿಳೆಯರನ್ನು ಸರದಿಯಲ್ಲಿ ನಿಲ್ಲಿಸಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ಬದಲಾಗಿದೆ ಅರ್ಜಿಗಳನ್ನು ಅವರೇ ಹಾಕಲು ಅವಕಾಶ ಮಾಡಿಕೊಡಲಾಗುತ್ತದೆ," ಎಂದರು.
ಸ್ವಲ್ಪ ತಡವಾದರೂ ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಆಪ್ ನಿರ್ಮಾಣ ಮಾಡಬಹುದು. ಪ್ರತಿಯೊಬ್ಬರು ತಮ್ಮ ಅರ್ಜಿಯನ್ನು ಅವರದ್ದೇ ಸ್ಮಾರ್ಟ್ ಫೋನ್ ಮೂಲಕವೂ ಸಲ್ಲಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಇನ್ನು ಗ್ಯಾರಂಟಿ ಯೋಜನೆ ಜಾರಿ ವಿಚಾರವಾಗಿ ಬಿಜೆಪಿ ನಾಯಕರ ಟೀಕೆ ಕುರಿತು ಪ್ರತಿಕ್ರಯಿಸಿ, "ಬಿಜೆಪಿ ನಾಯಕರು ಏನಾದರೂ ಟೀಕೆ ಮಾಡಲಿ. ಅವರಿಗೆ ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ, ಅವರು ಮೊದಲು ತಾವು ಕೊಟ್ಟಿರುವ ಭರವಸೆ ಈಡೇರಿಸುವ ಬಗ್ಗೆ ಮಾತನಾಡಲಿ. ಅವರು ವಿದೇಶದಿಂದ ಎಷ್ಟು ಕಪ್ಪು ಹಣ ತಂದಿದ್ದಾರೆ, ಎಷ್ಟು ಜನರ ಖಾತೆಗೆ 15 ಲಕ್ಷ ಹಾಕಿದ್ದಾರೆ? ರೈತರ ಆದಾಯ ಡಬಲ್ ಮಾಡಿದ್ದಾರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಟ್ಟರಾ? ಎಂಬುದರ ಬಗ್ಗೆ ಮಾತನಾಡಲಿ" ಎಂದು ತಿರುಗೇಟು ನೀಡಿದರು.
ಈ ವೇಳೆ ಸಚಿವ ಎಂ.ಸಿ. ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಚಂದ್ರಪ್ಪ, ಶಾಸಕ ಶ್ರೀನಿವಾಸ್ ಮಾನೆ, ಎಂಎಲ್‌ಸಿ ದಿನೇಶ್ ಗೂಳಿಗೌಡ, ಎನ್ ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications