DK Shivakumar: ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್

ಬೆಂಗಳೂರು, ಡಿಸೆಂಬರ್ 21: ಬೆಂಗಳೂರಿಗೆ ಆಗಮಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಭಾನುವಾರ ಕಲಬುರಗಿಯಲ್ಲಿ ನಡೆಯುವ ಶ್ರೀ ಜಯದೇವ ಆಸ್ಪತ್ರೆಯ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಆಗಮಿಸಿದ್ದಾರೆ.

ಶನಿವಾರ ಸಂಜೆ ಬೆಂಗಳೂರಿನ ನಿವಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವ ಎನ್. ಎಸ್. ಬೋಸರಾಜು ಸಹ ಉಪಸ್ಥಿತರಿದ್ದರು.

DK Shivakumar Meets AICC President Mallikarjun Kharge In Bengaluru

ಮುಖ್ಯಮಂತ್ರಿಗಳ ಜೊತೆಗಿನ ಸಭೆ: ಮಲ್ಲಿಕಾರ್ಜುನ ಖರ್ಗೆ ಭೇಟಿಗೂ ಮುನ್ನ ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ವಿವಿಧ ಸಚಿವರ ಜೊತೆಗಿನ ಸಭೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಭೆ ನಡೆಸಿ, ಪೂರ್ವಸಿದ್ಧತೆಗಳ ಮಾಹಿತಿ ಪಡೆದು ಸಲಹೆ, ಸೂಚನೆಗಳನ್ನು ನೀಡಿದರು.

ಡಿಸೆಂಬರ್ 26, 27ರಂದು ಬೆಳಗಾವಿಯಲ್ಲಿ ನಡೆಯಲಿರುವ ಶತಮಾನೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಡಿ. ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ, ಎಚ್. ಕೆ. ಪಾಟೀಲ್, ಕೆ. ಜೆ. ಜಾರ್ಜ್, ಕೆ. ಎಚ್. ಮುನಿಯಪ್ಪ, ಎನ್. ಎಸ್. ಬೋಸರಾಜು, ಡಾ. ಎಂ. ಸಿ. ಸುಧಾಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಡಿ. ಕೆ. ಶಿವಕುಮಾರ್ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭದ ಸಿದ್ಧತೆಗಳ ಕುರಿತು ಸಹ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿವರಣೆ ನೀಡಿದ್ದಾರೆ. ಇದೊಂದು ಪ್ರಮುಖ ಕಾರ್ಯಕ್ರಮವಾಗಿದ್ದು, ಸೋನಿಯಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೆಳಗಾವಿ ಕಾರ್ಯಕ್ರಮದ ಕುರಿತು ಮಾತನಾಡಿರುವ ಡಿ. ಕೆ. ಶಿವಕುಮಾರ್, "ಬೆಳಗಾವಿ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಕರ್ನಾಟಕಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ" ಎಂದು ಹೇಳಿದ್ದಾರೆ.

"ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದಾಗ ಗಂಗಾಧರ ದೇಶಪಾಂಡೆ ಹಾಗೂ ಜವಹಾರ್ ಲಾಲ್ ನೆಹರೂ ಅವರು ಮಾತ್ರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ದೇಶಪಾಂಡೆ ಅವರು ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ನಡೆಸಲು ಆಹ್ವಾನ ನೀಡಿದರು. ಅಧಿವೇಶನಕ್ಕೆ ಬಂದ ಬರುವ ಜನರಿಗೆ ಕುಡಿಯುವ ನೀರು ಕಲ್ಪಿಸಲು ಬಾವಿ ತೋಡಲಾಗಿತ್ತು" ಎಂದು ತಿಳಿಸಿದ್ದಾರೆ.

"100 ವರ್ಷಗಳ ನಂತರ ನಮ್ಮ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅಂದು ಗಾಂಧಿ ಇಂದು ಖರ್ಗೆ ಅವರು ಅಧ್ಯಕ್ಷರಾಗಿದ್ದಾರೆ. ಈ ಮಧ್ಯೆ ಅನೇಕ ಮಹಾನ್ ನಾಯಕರು ಆ ಸ್ಥಾನ ಅಲಂಕರಿಸಿದ್ದಾರೆ. ನಿಜಲಿಂಗಪ್ಪನವರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಕೂಡ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಈ ಬಾರಿಯ ಅಧಿವೇಶನವನ್ನು ಗುಜರಾತಿನ ಸಬರಮತಿ ಆಶ್ರಮದಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಯಿತು. ನಂತರ ನಾನು ಎಐಸಿಸಿಗೆ ಬೆಳಗಾವಿಯಲ್ಲೇ ನಡೆಸುವ ಪ್ರಸ್ತಾವನೆ ಸಲ್ಲಿಸಿದೆ, ಅವರು ಒಪ್ಪಿದರು" ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

"ಡಿಸೆಂಬರ್ 26ರಂದು ಬೆಳಗಾವಿಯಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು, ಎಲ್ಲ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಆಗಮಿಸಲಿದ್ದಾರೆ. ಮರುದಿನ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಪಂಚಾಯಿತಿ ಸದಸ್ಯರು, ಸಮಿತಿ ಹಾಗೂ ನಿಗಮಗಳ ಸದಸ್ಯರು, ನಾಮನಿರ್ದೇಶಿತರು ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಆಗಮಿಸಲಿದ್ದಾರೆ" ಎಂದು ವಿವರಣೆ ನೀಡಿದರು.

"ಸುವರ್ಣಸೌಧದ ಬಳಿ ಗಾಂಧಿ ಪ್ರತಿಮೆ ಉದ್ಘಾಟನೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದ ಶಾಸಕರು ಹಾಗೂ ಪರಿಷತ್ ನಾಯಕರಿಗೂ ಆಹ್ವಾನ ನೀಡಲಾಗುವುದು. ಸ್ಪೀಕರ್ ಹಾಗೂ ಸಭಾಪತಿಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ನಡೆಯಲಿರುವ ಜಾಗಗಳಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಇತರೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅವಕಾಶ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು ಎಂದು ಇಂದಿರಾ ಗಾಂಧಿ ಅವರು ಹೇಳಿದ್ದಾರೆ. ಇಂದಿರಾ ಗಾಂಧಿ ಅವರ ನುಡಿಮುತ್ತುಗಳ ಬಗ್ಗೆ ಸೋನಿಯಾ ಗಾಂಧಿ ಅವರು ಒಂದು ಪುಸ್ತಕ ಬರೆದಿದ್ದಾರೆ. ಆ ಪುಸ್ತಕವನ್ನು ನಾನು ಕನ್ನಡಕ್ಕೆ ಅನುವಾದ ಮಾಡಿಸಿದ್ದು, ಗಾಂಧಿ ಭಾರತ ಕಾರ್ಯಕ್ರಮದ ವೇಳೆ ಬಿಡುಗಡೆ ಮಾಡಲಾಗುವುದು" ಎಂದು ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+