ಡಿ ಕೆ ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ : ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 02: ಕಾವೆರಿ ನದಿಗೆ ಬರುತ್ತಿರುವ ಒಳ ಹರಿವಿನ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರು ಅತಿ ಹೆಚ್ಚು ನೀರು ಬರುತ್ತಿದೆ ಅಂತ ಹೇಳಿದ್ದಾರೆ. ಆದರೆ, ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಸುಮಾರು 2000 ಕ್ಯೂಸೆಕ್ಸ್ ನೀರು ಬರುತ್ತಿದೆ ಅಂತ ಹೇಳಿದ್ದಾರೆ. ಡಿಕೆಶಿವಕುಮಾರ್ ಅವರು ಯಾಕೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಯಾಕೆ ಇಷ್ಟೊಂದು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಡಿಸಿಎಂ ಯಾವಾಗಲೂ ಬ್ರಾಂಡ್ ಬೆಂಗಳೂರು ಅಂತ ಭಾಷಣ ಮಾಡಿದರೆ ಸಾಲದು, ಬೆಂಗಳೂರಿಗೆ ಕಾವೇರಿ ನೀರು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಬ್ಯಾಡ್ ಬೆಂಗಳೂರು ಆಗುತ್ತದೆ ಎಂದರು. ಸಂಕಷ್ಟ ಸೂತ್ರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2018 ಕ್ಕೂ ಮೊದಲು ಸಂಕಷ್ಟ ಸೂತ್ರ ಜಾರಿಗೊಳಿಸಲು ಈ ಪರಿಸ್ಥಿತಿ ಇರಲಿಲ್ಲ. ಸಿಡಬ್ಲುಎಂಎ ಬಂದ ಮೇಲೆ ನೀರಿನ ಸಮಸ್ಯೆ ಈಗ ಬಂದಿದೆ. ಹೀಗಾಗಿ ಸಂಕಷ್ಟ ಸೂತ್ರ ಜಾರಿ ಮಾಡುವುದು ಅಹತ್ಯವಿದೆ ಎಂದು ಹೇಳಿದರು.
ಶಿವಮೊಗ್ಗ ಗಲಾಟೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಲು ತೂರುವವರು, ಗಲಭೆ ಸೃಷ್ಟಿಸುವವರಿಗೆ ಈ ಸರ್ಕಾರದಲ್ಲಿ ಕಾನೂನಿನ ಭಯವಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿವಮೊಗ್ಗ ಗಲಭೆಯ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಸಣ್ಣ ಗಲಾಟೆ ಎಂದು ಹೇಳಿರುವುದು ದುರ್ದೈವದ ಸಂಗತಿ. ಮನೆಗಳಿಗೆ ಕಲ್ಲು ತೂರಿದ್ದಾರೆ.
ಕೋಲಾರದಲ್ಲಿಯೂ ಇದೇ ರೀತಿ ಘಟನೆ ನಡೆಯಿತು ಸರ್ಕಾರ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ ಬಾಲಿಶವಾಗಿದೆ. ಸರ್ಕಾರದ ಈ ನಡವಳಿಕೆಯಿಂದಲೇ ಜೂಜುಕೋರರು, ಗಲಭೆಕೋರರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ ಎಂದರು.
ಇನ್ನೂ ಶಿವಮೊಗ್ಗ ಗಲಭೆ ಕುರಿತು ಸಿ.ಎನ್.ಅಶ್ವತ್ಥ್‍ನಾರಾಯಣ್ ಮಾತನಾಡಿ, ರಾಜ್ಯ ಸರಕಾರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಅಶಾಂತಿ ಇರಬೇಕೆಂಬ ಸರಕಾರದ ಮನಸ್ಥಿತಿ ಶಿವಮೊಗ್ಗ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಕಾಣುತ್ತಿದೆ ಎಂದು ಹೇಳಿದರು.
ನಮ್ಮ ಸಂಸ್ಕೃತಿ, ನಮ್ಮ ಧರ್ಮವನ್ನು ನಿರ್ನಾಮ ಮಾಡುವಂಥ ವ್ಯಕ್ತಿಗಳನ್ನು ಮೆರೆಸುತ್ತಿದ್ದಾರೆ. ಎಸ್ಪಿಯವರ ಮೇಲೆಯೇ ಕಲ್ಲುತೂರಾಟ, ಹಲ್ಲೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸರಕಾರವು ಬಾಯಿಗೆ ಬೀಗ ಹಾಕಿಕೊಂಡಿದೆ. ಅಧಿಕಾರಿಗಳು ಕಾನೂನು- ಸುವ್ಯವಸ್ಥೆ ಕಾಪಾಡಲು ಆಗುತ್ತಿಲ್ಲ. ಕೋಮುಗಲಭೆ ಮಾಡಿದವರ ಆಸ್ತಿ ಜಪ್ತಿ ಮಾಡಬೇಕು. ಗೂಂಡಾ ಕಾಯ್ದೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.
ನರಹಂತಕ ಟಿಪ್ಪು ಸುಲ್ತಾನ್, ಔರಂಗಜೇಬ್‍ರನ್ನು ಗ್ರೇಟ್ ಎನ್ನುವವರ ಮೇಲೆ ಕ್ರಮ ಕೈಗೊಳ್ಳಿ. ಹಲ್ಲೆಗೊಳಗಾದವರಿಗೆ ರಕ್ಷಣೆ ಮತ್ತು ಚಿಕಿತ್ಸೆ ಕೊಡಿಸಿ ಎಂದು ಒತ್ತಾಯಿಸಿದರು. ಸೌಹಾರ್ದತೆ ಮರೆತು ವರ್ತನೆ ಖಂಡನೀಯ. ತಕ್ಷಣ ಇದರ ಬಗ್ಗೆ ಕ್ರಮ ವಹಿಸಿ ಎಂದರು.
ಗೃಹ ಸಚಿವರು ಹಗುರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಬಾರಿ ಬಾರಿಗೆ ಎಡವುತ್ತಿದ್ದಾರೆ. ಪೊಲೀಸ್ ಇಲಾಖೆ ವರ್ಗಾವಣೆಯಲ್ಲೂ ಗೊಂದಲ ಆಗಿದೆ. ಒಂದರ ಮೇಲೊಂದು ಎಡವಟ್ಟು ಸಂಭವಿಸಿದೆ. ಗೃಹ ಸಚಿವರು ಜವಾಬ್ದಾರಿಯಿಂದ ಮಾತನಾಡಬೇಕು. ವಿಷಯ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ. ಟಿಪ್ಪು ಸುಲ್ತಾನ್, ಔರಂಗಜೇಬ್‍ರನ್ನು ವಿಜೃಂಭಿಸುವಂತೆ ಚಿತ್ರಿಸಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಟೀಕಿಸಿದರು. ಮುಂಜಾಗ್ರತೆ ವಹಿಸದೆ ಇದ್ದುದು ಆಕ್ಷೇಪಾರ್ಹ ಎಂದರು.












Click it and Unblock the Notifications