ತಮ್ಮನ ಭವಿಷ್ಯಕ್ಕಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾದ್ರಾ ಡಿಕೆಶಿ?
ಬೆಂಗಳೂರು ಗ್ರಾಮಾಂತರದ ಲೋಕಸಭಾ ಚುನಾವಣೆಯಲ್ಲಿ ಕಂಡ ಸೋಲಿನ ಕಹಿಯನ್ನು ಮರೆಯಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಹೀಗಾಗಿ ಈಗಿನಿಂದಲೇ ಕಾಂಗ್ರೆಸ್ ಚಾಣಕ್ಯ ಚುನಾವಣೆ ರಣಕಹಳೆಯನ್ನು ಮೊಳಗಿಸಿದ್ದಾರೆ. ತಮ್ಮದೇ ಸ್ಟೈಲ್‌ನಲ್ಲಿ ಚುನವಾವಣೆ ಅಖಾಡಕ್ಕೆ ಇಳಿದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಉಪ ಚುನಾವಣೆಯಲ್ಲಿ ಗೆಲುವಿನ ಕನಸು ಕಾಣುತ್ತಿದ್ದಾರೆ.
ಚನ್ನಪಟ್ಟಣ ವಿಧಾಸಭಾ ಕ್ಷೇತ್ರದಿಂದ ಶಾಸಕರಾಗಿದ್ದ ಎಚ್‌ಡಿ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದ್ದಾರೆ. ಅಷ್ಟೇ ಅಲ್ಲಾ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಇವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ಮುಖಭಂಗ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಡಬಲ್ ಡಿಜಿಟ್ ಸಾಧನೆ ಮಾಡಲು ಆಗಲಿಲ್ಲ. ಅಲ್ಲದೆ ಡಿಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ, ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ವಿರುದ್ಧ ಸೋಲು ಕಂಡಿದ್ದಾರೆ. ಮೊದಲ ಬಾರಿಗೆ ಚುನಾವಣಾ ಅಖಾಡ ಪ್ರವೇಶಿಸಿದ್ದ ಮಂಜುನಾಥ್, ಜನರ ಹೃದಯ ಗೆಲ್ಲುವಲ್ಲಿ ಸಫಲರಾಗಿದ್ದಾರೆ.
ಉಪಚುನಾವಣೆಯ ಕಾವು
ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ಕಾವು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದಕ್ಕೆ ಪಾಂಚಜನ್ಯವನ್ನು ಅದಾಗಲೇ ಡಿಕೆ ಶಿವಕುಮಾರ್ ಮೊಳಗಿಸಿದ್ದಾರೆ. ಅನಿವಾರ್ಯವಾದರೆ ಚನ್ನಪಟ್ಟಣದಿಂದ ಸ್ಪರ್ಧಿಸುತ್ತನೇ, ಈ ವಿಚಾರದಲ್ಲಿ ಮತದಾರರ ಮಾತೇ ಅಂತಿಮ ಎಂದು ಸ್ಪಷ್ಟ ಪಡಿಸಿದ್ದಾರೆ. ಈಗಾಗಲೇ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದು, ರಾಜ್ಯದ ಉಪಮುಖ್ಯಮಂತ್ರಿ ಆಗಿರುವ ಡಿಕೆಶಿ ಚನ್ನಪಟ್ಟಣದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಬಹುದು.
ಚನ್ನಪಟ್ಟಣದಿಂದ ಡಿಕೆಶಿ ಸ್ಪರ್ಧೆ?
ಡಿಕೆ ಶಿವಕುಮಾರ್ ತಮ್ಮ ತಮ್ಮನಿಗಾಗಿ ತಮ್ಮ ಕ್ಷೇತ್ರವನ್ನು ಬಿಟ್ಟು ಕೊಡುವ ಸಾಧ್ಯತೆ ಇದೆ. ಬುಧವಾರ ಡಿಕೆ ಶಿವಕುಮಾರ್ ಚನ್ನಪಟ್ಟಣ ಪ್ರವಾಸ ಕೈಗೊಂಡಿದ್ದರು, ಈ ವೇಳೆ 14 ದೇವಸ್ಥಾನಗಳಿಗೆ ಭೇಟಿ ನೀಡಿ ಆಶಿರ್ವಾದ ಪಡೆದಿದ್ದಾರೆ. ಈ ಮೂಲಕ ತಾನು ಜನ ಮೆಚ್ಚಿದರೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ರೆಡಿ ಎಂದು ತಿಳಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, ರಾಮನಗರ ಜಿಲ್ಲೆಯಿಂದ ಜೆಡಿಎಸ್ ನಿರ್ನಾಮ ಮಾಡುವ ಕನಸು ಡಿಕೆಶಿಯದ್ದಾಗಿದೆ. ಆದರೆ ಈ ಕನಸು ಸುಲಭವಾಗಿ ಕೈಗುಡುವುದಲ್ಲ. ಈ ಕ್ಷೇತ್ರದಲ್ಲಿ ಎಚ್‌ಡಿಕೆ ಪ್ರಭಾವ ಸಹ ಹೆಚ್ಚಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ನಿಂತು ಒಂದು ವೇಳೆ ಸೋತರೆ ಎಂಬ ಭಯ ಅವರಿಗೆ ಕಾಡುತ್ತಿದೆ. ಚನ್ನಪಟ್ಟಣವನ್ನು ಗೆದ್ದು, ಕನಕಪುರ ಕ್ಷೇತ್ರವನ್ನು ತನ್ನ ಸಹೋದರ ಡಿಕೆ ಸುರೇಶ್ ಅವರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.
ಇನ್ನು ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭಿಸಿಲ್ಲ ಆದರೂ, ಇಗಿನ ಬೆಳಗವಣಿಗೆಗಳನ್ನು ನೋಡಿದರೆ, ಭವಿಷ್ಯದಲ್ಲಿ ಹೀಗೆಲ್ಲಾ ಆಗಬಹುದು ಎಂಬ ಚಿತ್ರಣವಂತೂ ಸಿಗುತ್ತಿದೆ. ಡಿಕೆ ಸುರೇಶ್ ಅವರಿಗೆ ಕನಕಪುರ ಬಿಟ್ಟು ಅವರ ರಾಜಕೀಯ ಭವಿಷ್ಯವನ್ನು ಉಜ್ವಲ ಗೊಳಿಸುವ ಇರಾದೆ ಸಹ ಡಿಕೆ ಶಿವಕುಮಾರ್ ಅವರದ್ದಾಗಿದೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಹೈ ಕಮಾಂಡ್ ಇನ್ನು ಈ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಚನ್ನಪಟ್ಟಣ ವಿಧಾನಸಭಾ ಚುನಾವಣೆ ರೋಚಕತೆ ಹೆಚ್ಚಿಸಿದೆ.












Click it and Unblock the Notifications