DCM DK Shivakumar: ಸಿಎಂ ವಿರುದ್ಧ ಎಫ್ ಐಆರ್ ದಾಖಲಾದರೆ ಪಕ್ಷಕ್ಕೆ ಮುಜುಗರ: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 27: ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದು, ಸಿದ್ದರಾಮಯ್ಯ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಇತ್ತ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್ ಐಆರ್ ದಾಖಲಾದರೆ ಪಕ್ಷಕ್ಕೆ ಮುಜುಗರ ಎನ್ನುವ ಕುರಿತು ಚರ್ಚೆಯಾಗುತ್ತಿದ್ದು, ಈ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್ ಐಆರ್ ದಾಖಲಾದರೆ ಯಾವ ಮುಜುಗರವೂ ಆಗುವುದಿಲ್ಲ ಎಂದು ಉತ್ತರಿಸಿದರು.

ಸಿಬಿಐ ಮುಕ್ತ ತನಿಖೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿರುವ ಬಗ್ಗೆ ಬಿಜೆಪಿ ಟೀಕೆಯ ಬಗ್ಗೆ ಮಾತನಾಡಿ, ದ್ವೇಷದ ರಾಜಕಾರಣಕ್ಕೆ ದಾರಿ ಆಗಬಾರದು ಎನ್ನುವ ಕಾರಣಕ್ಕೆ ಸಿಬಿಐಗೆ ನೀಡಿದ್ದ ಮುಕ್ತ ಅನುಮತಿ ಅಧಿಕಾರವನ್ನು ಹಿಂದಕ್ಕೆ ತೆಗದುಕೊಳ್ಳಲಾಗಿದೆ. ಗಂಭೀರ ಪ್ರಕರಣಗಳು ಎದುರಾದಾಗ ನಮ್ಮ ಅಧಿಕಾರಿಗಳು ತನಿಖೆಗೆ ಸೂಕ್ತರಲ್ಲ ಎನ್ನುವ ಅಭಿಪ್ರಾಯ ಬಂದರೆ, ಆ ವೇಳೆ ಸಿಬಿಐಗೆ ನೀಡುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಬ್ಯೂರೋ ಏಜೆನ್ಸಿ ಎಂದವರು ಯಾರು?
ಸಿಬಿಐ ಬಗ್ಗೆ ಜನತಾದಳದ ದೇವೇಗೌಡರು, ಕುಮಾರಸ್ವಾಮಿ ಏನು ಮಾತನಾಡಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಬಿಜೆಪಿಯವರು ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೋ ಆಫ್ ಏಜೆನ್ಸಿ ಎಂದು ಕರೆದಿದ್ದರು. ಸಿಬಿಐಗೆ ಯಾವ, ಯಾವ ಪ್ರಕರಣಗಳನ್ನು ನೀಡಲಾಗಿತ್ತು. ಅವುಗಳು ಏನಾಗಿವೆ, ಐಎಂಎ ಪ್ರಕರಣ ಏನಾಗಿದೆ ಎಂಬುದರ ಬಗ್ಗೆ ನಾನು ಚರ್ಚಿಸುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ರಕ್ಷಣೆಗೆ ಹಾಗೂ ಸಿಬಿಐ ತನಿಖೆ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವ ಆರೋಪದ ಬಗ್ಗೆ ಮಾತನಾಡಿ, ವಿರೋಧ ಪಕ್ಷದವರು ಮಾತನಾಡಿಕೊಳ್ಳಲಿ, ಇದರ ಬಗ್ಗೆ ಬೇರೆ ಸಮಯದಲ್ಲಿ ಮಾತನಾಡೋಣ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.
ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ನಿರ್ಣಯದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅನೇಕ ವಿಚಾರಗಳನ್ನು ಮುಖ್ಯಮಂತ್ರಿಗಳು ಹಾಗೂ ಕ್ಯಾಬಿನೆಟ್ ಗಮನಕ್ಕೆ ತರದೇ ತೀರ್ಮಾನ ಮಾಡಲು ಆಗುತ್ತದೆಯೇ? ಆದ ಕಾರಣ ರಾಜ್ಯಪಾಲರ ಪತ್ರಕ್ಕೆ ಸಂಪುಟದಲ್ಲಿ ಒಪ್ಪಿಗೆ ಪಡೆದು ಉತ್ತರ ನೀಡಬೇಕು ಎನ್ನುವ ತೀರ್ಮಾನ ತಗೆದುಕೊಂಡಿದ್ದೇವೆ.
ನನಗೂ ನೀತಿ, ನಿಯಮಗಳ ಬಗ್ಗೆ ಸ್ವಲ್ಪ ತಿಳುವಳಿಕೆಯಿದೆ. ನಾನು ವಿದ್ಯಾವಂತ, ಬುದ್ದಿವಂತ ಅಲ್ಲದಿದ್ದರೂ ಪ್ರಜ್ಞಾವಂತಿಕೆ ಹೊಂದಿದ್ದೇನೆ. ಪ್ರತಿಯೊಂದಕ್ಕೂ ನಿಯಮವಿರುತ್ತದೆ. ರಾಜ್ಯಪಾಲರ ಕಚೇರಿಗೆ ಮುಖ್ಯ ಕಾರ್ಯದರ್ಶಿಗಳ ಮೂಲಕ ಉತ್ತರ ಹೋಗಬೇಕು.
ನನ್ನ ಕಚೇರಿಗೆ ಕೆಲವು ದಿನಗಳ ಹಿಂದೆ ಡಿನೋಟಿಫಿಕೇಷನ್ ಅಥವಾ ರೀಡೂ ಸಂಬಂಧಪಟ್ಟ ಕಡತ ಬಂದಿತ್ತು. ನನ್ನ ಕಾರ್ಯದರ್ಶಿ ನನಗೆ ಕಳುಹಿಸಿದ್ದರು. ಇದಕ್ಕೆ ನಾನು, "ಬೇರೆಯವರಿಗೆ ಉತ್ತರ ಕೊಡಲು ಆಗುವುದಿಲ್ಲ. ಕ್ಯಾಬಿನೆಟ್ ನಲ್ಲಿ ಈ ಹಿಂದೆ ತೀರ್ಮಾನವಾದಂತೆ, ಈ ಕುರಿತು ಸಂಪುಟ ಉಪ ಸಮಿತಿ ರಚನೆಯಾಗಿದೆ, ಅಲ್ಲಿಗೆ ಕಳುಹಿಸಿ ಎಂದೆ" ಎಂದರು.
ರಾಜಭವನದಿಂದ ಮಾಹಿತಿ ಸೋರಿಕೆ ಬಗ್ಗೆ ಬಿಜೆಪಿ ಆರೋಪದ ಮಾಡುತ್ತಿದೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ತ್ತರಿಸಿ, ಇದು ರಾಜಭವನದ ಆಂತರಿಕ ವಿಚಾರ. ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಲೋಕಾಯುಕ್ತ ಕಚೇರಿಯಲ್ಲಿ ಏನು ನಡೆಯುತ್ತಿದೆ ಎನ್ನುವ ಬಗ್ಗೆಯೂ ಮಾಹಿತಿಯಿಲ್ಲ ಎಂದರು.












Click it and Unblock the Notifications