Latest Updates; ದೆಹಲಿಯಲ್ಲೇ ಇದ್ದಾರೆ ಡಿ. ಕೆ. ಶಿವಕುಮಾರ್
ನವದೆಹಲಿ, ಅಕ್ಟೋಬರ್ 24 : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ದೆಹಲಿಯಲ್ಲಿಯೇ ಇದ್ದಾರೆ. ಕರ್ನಾಟಕಕ್ಕೆ ಎಂದು ವಾಪಸ್ ಆಗಲಿದ್ದಾರೆ? ಎಂಬುದು ಖಚಿತವಾಗಿಲ್ಲ.
Recommended Video
ತಿಹಾರ್ ಜೈಲಿನಿಂದ ಬುಧವಾರ ರಾತ್ರಿ 9.30ರ ಸುಮಾರಿಗೆ ಬಿಡುಗಡೆಗೊಂಡ ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ನಿವಾಸದಲ್ಲಿದ್ದಾರೆ. ಗುರುವಾರ ಬೆಳಗ್ಗೆಯಿಂದ ವಿವಿಧ ನಾಯಕರು, ಸಂಬಂಧಿಕರು, ಆಪ್ತರು ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು.
ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್, ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಲಿಂಗಪ್ಪ ಸೇರಿದಂತೆ ಕರ್ನಾಟಕದ ವಿವಿಧ ನಾಯಕರು ಡಿ. ಕೆ. ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಜಾರಿ ನಿರ್ದೇಶನಾಲಯ ಡಿ. ಕೆ. ಶಿವಕುಮಾರ್ ಪತ್ನಿ ಉಷಾ, ತಾಯಿ ಗೌರಮ್ಮಗೆ ನೀಡಿದ ಸಮನ್ಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 30ಕ್ಕೆ ಮುಂದೂಡಿದೆ.
ಡಿ. ಕೆ. ಶಿವಕುಮಾರ್ ವಕೀಲರ ಭೇಟಿಗಾಗಿ ಕಾದು ಕುಳಿತಿದ್ದಾರೆ. ವಕೀಲರು ಸುಪ್ರೀಂಕೋರ್ಟ್‌ನಲ್ಲಿ ವಿವಿಧ ಪ್ರಕರಣಗಳ ವಾದದಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ, ಸಂಜೆಯ ವೇಳೆಗೆ ಅವರನ್ನು ಡಿ. ಕೆ. ಶಿವಕುಮಾರ್ ಭೇಟಿಯಾಗಲಿದ್ದಾರೆ.
ಡಿ. ಕೆ. ಶಿವಕುಮಾರ್ ಟ್ವೀಟ್ ಮಾಡಿಲ್ಲ : ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಗೊಂಡರೂ ಅವರ ಟ್ವಿಟರ್ ಖಾತೆ ಅಪ್ ಡೇಟ್ ಆಗಿಲ್ಲ. ಸೆಪ್ಟೆಂಬರ್ 10ರಂದು ಅವರ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಬಳಿಕ ಯಾವುದೇ ಟ್ವೀಟ್ ಮಾಡಿಲ್ಲ.
ಡಿ. ಕೆ. ಶಿವಕುಮಾರ್ ಫೇಸ್ ಬುಕ್ ಪೇಜ್‌ನಲ್ಲಿ ಅಪ್‌ಡೇಟ್ ಮಾಡಲಾಗಿದೆ. ತಿಹಾರ್ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಶಿವಮಂದಿರದಲ್ಲಿ ಪೂಜೆ ಸಲ್ಲಿಸಿದ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ.
ರಾಜ್ಯಕ್ಕೆ ವಾಪಸ್ ಯಾವಾಗ? : ಡಿ. ಕೆ. ಶಿವಕುಮಾರ್ ಕರ್ನಾಟಕಕ್ಕೆ ವಾಪಸ್ ಆಗುವುದು ಯಾವಾಗ? ಎಂಬ ಪ್ರಶ್ನೆಗೆ ಇನ್ನು ಖಚಿತವಾದ ಉತ್ತರವಿಲ್ಲ. ಇಂದು ಸಂಜೆ ಅಥವ ಶುಕ್ರವಾರ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಆಪ್ತರು ಇದನ್ನು ಖಚಿತಪಡಿಸಿಲ್ಲ.












Click it and Unblock the Notifications