Property: ಆಸ್ತಿ ದಾಖಲೆ ಡಿಜಿಟಲೀಕರಣ, ಇ- ಖಾತೆಗಳ ಕುರಿತು ವಿವರ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 23: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಕಾವೇರಿ ಕುಡಿಯುವ ನೀರು, ಮೇಲ್ಸೇತುವೆಗಳು, ಪೆರಿಫೆರಲ್ ರಿಂಗ್ ರಸ್ತೆ, ಮೆಟ್ರೋ ಮಾರ್ಗ, ಸುರಂಗ ರಸ್ತೆ, ಬಫರ್ ರಸ್ತೆಗಳು, ಮಳೆನೀರುಗಾಲುವೆಗಳ ಅಭಿವೃದ್ಧಿ, ಬ್ಲಾಕ್ ಟಾಪಿಂಗ್, ವೈಟ್ ಟಾಪಿಂಗ್ ಸೇರಿದಂತೆ ಇನ್ನು ಹಲವು ಯೋಜನೆಗಳ ವಿವರ ನೀಡುವ ಮೂಲಕ, ಬೆಂಗಳೂರಿನ ವಿಚಾರವಾಗಿ ಟೀಕೆ ಮಾಡಿದ್ದ ವಿರೋಧ ಪಕ್ಷಗಳ ಶಾಸಕರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಆಸ್ತಿ ದಾಖಲೆಗಳನ್ನು ತಿದ್ದುವುದನ್ನು ತಪ್ಪಿಸಲು 25 ಲಕ್ಷ ಆಸ್ತಿಗಳನ್ನು ಡಿಜಿಟಲ್ ಮೂಲಕ ಸ್ಕ್ಯಾನ್ ಮಾಡಲಾಗಿದೆ. ಇ- ಖಾತೆಗಳನ್ನು ಮಾಡಲು ದೊಡ್ಡ ಆಂದೋಲನವನ್ನೇ ಹಮ್ಮಿಕೊಳ್ಳಲಾಗಿದೆ. ಮನೆ, ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ನಾವು ತೀರ್ಮಾನಿಸಿದ್ದು, ಇಲ್ಲಿ ಯಾರೇ ಲಂಚ ಕೇಳಿದರೂ ನಮ್ಮ ಗಮನಕ್ಕೆ ತನ್ನಿ, ಸಂಜೆ ವೇಳೆಗೆ ಅವರನ್ನು ಅಮಾನತುಗೊಳಿಸುತ್ತೇವೆ.

ಈಗಾಗಲೇ 7.2 ಲಕ್ಷ ಖಾತೆಗಳನ್ನು ವಿತರಣೆ ಮಾಡಲಾಗಿದೆ. ಪ್ರತಿಯೊಂದು ಮನೆಗೂ ಡ್ರಾಫ್ಟ್ ಖಾತೆ ನೀಡಲು ಆಲೋಚಿಸಲಾಗಿದೆ. ಜುಲೈ ತಿಂಗಳಿನಿಂದಲೇ ಖಾತಾ ಮಾಸ ಎನ್ನುವ ಅಭಿಯಾನ ಪ್ರಾರಂಭ ಮಾಡಿದ್ದೇವೆ. ತೆರಿಗೆ ಪಾವತಿಯೂ ಸಹ ಗಣಕೀಕೃತವಾಗುತ್ತದೆ. ವಿರೋಧ ಪಕ್ಷದ ಶಾಸಕ ಅಶ್ವತ್ ನಾರಾಯಣ ಅವರು ದನ್ನು ಹಗರಣೆ ಎನ್ನುತ್ತಿದ್ದಾರೆ. ಆದರೆ ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದು ಡಿ ಕೆ ಶಿವಕುಮಾರ್ ಅವರು ಹೇಳಿದರು.
ನಮ್ಮ ಈ ಕಾರ್ಯವನ್ನು ನೋಡಿ ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಪ್ರಶಸ್ತಿ ನೀಡಿದ್ದಾರೆ. ಇದರಿಂದ ಆಸ್ತಿ ಸ್ವಯಂ ಘೋಷಣೆ ವೇಳೆ ತೆರಿಗೆ ಸೋರಿಕೆಯಾಗುವುದು ಸಹ ನಿಲ್ಲಲಿದೆ. ಇ- ಆಸ್ತಿ ದಾಖಲೆಯಲ್ಲಿ ಮಾಲೀಕರ ಪೋಟೋ ಹಾಗೂ ಕಟ್ಟಡದ ಫೋಟೋ ಸಹ ಇರಲಿದೆ. ಗಂಡ- ಹೆಂಡತಿ ಜಂಟಿ ಖಾತೆ ಇದ್ದರೆ ಇಬ್ಬರ ಫೋಟೊ ಸಹ ದಾಖಲೆಯಲ್ಲಿ ಇರಲಿದೆ. ಇದರಿಂದ ಬೋಗಸ್ ನೋಂದಣಿಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.
ಓಟಿಎಸ್ ಯೋಜನೆಯಿಂದ 2.60 ಲಕ್ಷ ಮಾಲೀಕರಿಗೆ ಅನುಕೂಲವಾಯಿತು. 1,200 ಕೋಟಿಯಷ್ಟು ಹೆಚ್ಚವರಿ ತೆರಿಗೆ ಸಂಗ್ರಹವಾಯಿತು. ಬಡ್ಡಿ, ದಂಡ ಎಲ್ಲವನ್ನು ಮನ್ನಾ ಮಾಡಲಾಯಿತು. ಟಿಡಿಆರ್ ವ್ಯವಸ್ಥೆಯನ್ನು ಸಹ ಸರಳೀಕರಣಗೊಳಿಸಲಾಗಿದೆ. 50×80 ಅಳತೆವರೆಗಿನ ಕಟ್ಟಡಗಳ ನಿರ್ಮಾಣಕ್ಕೆ ಪ್ರಮಾಣಿಕೃತ ಎಂಜಿನಿಯರ್ ಹಾಗೂ ವಾಸ್ತುಶಿಲ್ಪಗಳಿಂದಲೇ ಅನುಮೋದನೆ ನೀಡುವ 'ನಂಬಿಕೆ ನಕ್ಷೆ' ಯೋಜನೆಗೆ 2024 ರ ಮಾರ್ಚ್ ತಿಂಗಳಲ್ಲೇ ಚಾಲನೆ ನೀಡಲಾಗಿದೆ. ಇದರಿಂದ ಹೀಗಾಗಲೇ 9 ಸಾವಿರ ನಕ್ಷೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಬಡವಾಣೆಗಳನ್ನು ನಿರ್ಮಿಸಿದ ನಂತರ ಕಂದಾಯ ನಿವೇಶನಗಳನ್ನು ಹಂಚಿದ ನಂತರ ಅಲ್ಲಿರುವ ರಸ್ತೆಗಳು ಮಾಲೀಕನ ಹೆಸರಿನಲ್ಲಿ ಇದ್ದ ಅನೇಕ ಪ್ರಕರಣಗಳಿದ್ದವು. ಆದ ಕಾರಣಕ್ಕೆ ನಗರದ ಎಲ್ಲಾ ಖಾಸಗಿ ರಸ್ತೆಗಳು ಸರ್ಕಾರಿ ರಸ್ತೆಗಳು ಎಂದು ಘೋಷಣೆ ಮಾಡಿ ಎಲ್ಲದಕ್ಕೂ ಖಾತೆಗಳನ್ನು ಮಾಡಲಾಯಿತು. 7.5 ಲಕ್ಷ ಬಿ ಖಾತೆಗಳನ್ನು ಎ ಖಾತೆಗಳನ್ನಾಗಿ ಮಾಡಬೇಕಿದೆ. ಆದ ಕಾರಣಕ್ಕೆ ಅನಭಿವೃದ್ದಿ ಭೂಮಿ ಎಂದು ಶೇ.5.5 ರಷ್ಟು ಶುಲ್ಕ ಪಾವತಿಸಿಕೊಂಡು ಎ ಖಾತೆ ನೀಡಲು ತೀರ್ಮಾನ ಮಾಡಿದ್ದೇವೆ. ಪ್ರೀಮಿಯಂ ಎಫ್ ಎಆರ್ ಕಾನೂನನ್ನು ಬಿಜೆಪಿ ಸಮಯದಲ್ಲಿ ತರಲಾಗಿತ್ತು. ಇದು ಬೆಂಗಳೂರಿಗೆ ಬೇಡ ಎಂದು ನಾನು ತಿದ್ದುಪಡಿ ತಂದಿದ್ದೆ ಅದನ್ನು ಎಲ್ಲರೂ ಒಪ್ಪಿದ್ದರು. ಆದರೆ ರಾಜ್ಯಪಾಲರು ಅಂಕಿತ ಹಾಕಲಿಲ್ಲ. ಕೊನೆಗೆ ಬಿಜೆಪಿ ಕಾಲದ ಕಾನೂನನ್ನೇ ಜಾರಿಗೆ ತರಲಾಯಿತು. ಈ ಕಾನೂನಿನ ಅನ್ವಯ ಬೆಂಗಳೂರಿನಲ್ಲಿ 5 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದರು.
ರಾಜಕಾಲುವೆಗಳ ಪಕ್ಕ 300 ಕಿಮೀ ಉದ್ದಕ್ಕೆ ರಸ್ತೆ ನಿರ್ಮಾಣ ಮಾಡಲು 3 ಸಾವಿರ ಕೋಟಿ ರೂಪಾಯಿಯಲ್ಲಿ ಯೋಜನೆ ರೂಪಿಸಲಾಗಿದೆ. ಡಬಲ್ ಡೆಕ್ಕರ್ ಯೋಜನೆಗೆ ಪ್ರತಿ ಕಿಮೀಗೆ 120 ಕೋಟಿ ವೆಚ್ಚವಾಗುತ್ತಿದ್ದು 9 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಒಟ್ಟು 44 ಕಿಮೀ ಉದ್ದ ಡಬಲ್ ಡೆಕ್ಕರ್ ನಿರ್ಮಾಣ ಮಾಡಲಾಗುವುದು. ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ 109 ಕೋಟಿ ಜಾಗ ಗುರುತಿಸಲಾಗಿದೆ. ಇದಕ್ಕೆ 15 ಸಾವಿರ ಕೋಟಿ ವೆಚ್ಚ ಮಾಡಲಾಗುವುದು ಎಂದರು.












Click it and Unblock the Notifications