Karnataka CM: 'ಡಿ.ಕೆ.ಶಿವಕುಮಾರ್ ಸಿಎಂ ಎಂದು ಈಗಾಗಲೇ ತೀರ್ಮಾನ ಆಗೋಗಿದೆ'
ರಾಜ್ಯ ಕಾಂಗ್ರೆಸ್‌ನಲ್ಲಿ ಇದೀಗ ಸಿಎಂ ಬದಲಾವಣೆ ವಿಚಾರ ಜೋರಾಗಿದೆ. ಎಲ್ಲೆಡೆಯೂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುವ ಬಗ್ಗೆ ನಾಯಕರು ಭವಿಷ್ಯ ನುಡಿಯುತ್ತಿದ್ದಾರೆ. ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಹಲವರು ಹೇಳುತ್ತಿದ್ದರೆ, ಮತ್ತೊಂದೆಡೆ ಡಿಕೆಶಿ ಈ ವರ್ಷದೊಳಗೆ ಮುಖ್ಯಮಂತ್ರಿಯಾಗುವುದು ಫಿಕ್ಸ್ ಎನ್ನುತ್ತಿದ್ದಾರೆ. ಅನೇಕರು ಡಿ.ಕೆ.ಶಿವಕುಮಾರ್ ಪರ ಬ್ಯಾಟಿಂಗ್ ಬೀಸುತ್ತಿದ್ದು, ಇದೀಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಎಂದು ತೀರ್ಮಾನ ಆಗೋಗಿದೆ ಎನ್ನುವ ಮೂಲಕ ಕಾಂಗ್ರೆಸ್‌ನ ಹಿರಿಯ ನಾಯಕ ಸಂಚಲನ ಸೃಷ್ಟಿಸಿದ್ದಾರೆ.
ಹೌದು, ಮೊದಲಿಗೆ ಅಧಿಕಾರದ ಹಂಚಿಕೆ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಲಗಾಮು ಹಾಕಿತ್ತು. ಈ ಹೇಳಿಕೆ ಬಳಿಕ ಕಾಂಗ್ರೆಸ್‌ನಲ್ಲೂ ಕೆಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ರು. ಆದರೆ ಹೈಕಮಾಂಡ್ ಎಲ್ಲರನ್ನೂ ತಣ್ಣಗಾಗಿಸಿತ್ತು. ಸಿಎಂ ಬದಲಾವಣೆ ವಿಚಾರದ ಬಗ್ಗೆ ಯಾರೂ ಮಾತನಾಡದೆ ಬಾಯಿ ಮುಚ್ಚಿಕೊಂಡಿರಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡ ವಾರ್ನಿಂಗ್ ಕೊಟ್ಟಿದ್ರು. ಆದರೂ ನಾಯಕರು ತಮ್ಮ ಚಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಿಎಂ ವೀರಪ್ಪ ಮೊಯ್ಲಿ ಅವರು ಕೂಡ ಡಿಕೆಶಿ ಸಿಎಂ ಆಗುವ ಬಗ್ಗೆ ಹೇಳಿಕೆ ನೀಡಿದ್ದಾರೆ.

ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಅವರು ಸಿಎಂ ಆಗುವುದು ಸೆಟಲ್ಡ್ ಮ್ಯಾಟರ್ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಡಿಕೆ ಶಿವಕುಮಾರ್ ಬೆಂಬಲಿಗರು ಮಾತನಾಡದೆ ಸುಮ್ಮನಿದ್ದರೆ ಒಳ್ಳೆಯದು. ಏಕೆಂದರೆ ಜನರ ಮನಸ್ಸಿನಲ್ಲಿ ಡಿಕೆ ಶಿವಕುಮಾರ್ ಅವರು ಸಿಎಂ ಎಂದು ತೀರ್ಮಾನ ಆಗೋಗಿದೆ. ಇತಿಹಾಸವೂ ಇದನ್ನೇ ತೀರ್ಮಾನ ಮಾಡಿದೆ. ಇದೆಲ್ಲವೂ ಮ್ಯಾಟರ್ ಆಫ್ ಟೈಮ್ ಅಷ್ಟೇ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಎಂಎಲ್‌ಎ ಟಿಕೆಟ್ ಕೊಡಿಸಿದ್ದೇ ನಾನು!
ಡಿಕೆ ಶಿವಕುಮಾರ್ ಅವರಿಗೆ ಮೊದಲ ಸಲ ಎಂಎಲ್‌ಎ ಟಿಕೆಟ್ ಕೊಡಿಸಿದ್ದೇ ನಾನು. ಈಗ ಅವರು ಕರ್ನಾಟಕದ ಯಶಸ್ವಿ ನಾಯಕರಾಗಿ ಬೆಳೆದು ನಿಂತಿದ್ದಾರೆ. ಅವರು ಶೀಘ್ರದಲ್ಲೇ ಸಿಎಂ ಆಗಬೇಕು. ಇದು ಈಗಾಗಲೇ ನಿರ್ಧಾರವಾಗಿದೆ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಕಷ್ಟದಲ್ಲಿದ್ದಾಗ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ರಾಷ್ಟ್ರದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲು ತಂತ್ರ ರೂಪಿಸಿದ ಧೀಮಂತ ನಾಯಕ ಡಿಕೆ ಶಿವಕುಮಾರ್ ಎಂದು ಕೊಂಡಾಡಿದ್ದಾರೆ. ಕಾರ್ಕಳವು ಗೊಮ್ಮಟೇಶ್ವರನ ಪುಣ್ಯಭೂಮಿಯಾಗಿದೆ. ಡಿಕೆ ಶಿವಕುಮಾರ್ ಕೂಡ ಗೊಮ್ಮಟೇಶ್ವರನಂತೆ ಎತ್ತರಕ್ಕೆ ಬೆಳೆಯಬೇಕು ಎಂದೂ ಆಶಿಸಿದ್ದಾರೆ.

ಕಾರ್ಕಳದಂತಹ ಪುಣ್ಯ ಭೂಮಿಯಲ್ಲಿ ಆಡಿದ ಮಾತು ನೂರಕ್ಕೆ ನೂರರಷ್ಟು ಸತ್ಯವಾಗುತ್ತೆ. ಯಾರು ಏನೇ ಹೇಳಿದರೂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ಕೊಡಬೇಡಿ. ಯಾರೂ ಏನೇ ಕೋಟಿ ಪ್ರಯತ್ನಗಳನ್ನು ಮಾಡಿದರೂ ನಿಮಗೆ ಸಿಎಂ ಸ್ಥಾನ ತಪ್ಪಿಸಲು ಸಾಧ್ಯವೇ ಇಲ್ಲ ಎನ್ನುವುದು ಸತ್ಯ. ನೀವು ದೇವಸ್ಥಾನಗಳಿಗೆ ಹೋಗುವುದರಲ್ಲಿ ಯಾವುದೇ ತಪ್ಪಿಲ್ಲ. ಕರಾವಳಿಯು ದೇವರ ಭೂಮಿ. ಆದರೆ, ಬಿಜೆಪಿಯವರು ದೇವರ ಭೂಮಿಯನ್ನು ಋಣಭೂಮಿ ಮಾಡಿದ್ದಾರೆ ಎಂದೂ ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications