‘ನೇಹಾಳನ್ನು ಕೊಂದಿದ್ದು ಡಿಕೆ ಶಿವಕುಮಾರ್ ಬ್ರದರ್ಸ್’
ಚಿಕ್ಕಮಗಳೂರು, ಏಪ್ರಿಲ್ 21: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಎಮೋಷನಲ್ ಬ್ರದರ್ಸ್ ಇದ್ದಾರಲ್ಲ, ಅವರೇ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾಳನ್ನು ಕೊಂದು ಹಾಕಿದ್ದು ಎಂದು ಮಾಜಿ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.
ಈ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ ಟಿ ರವಿ ಅವರು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದು ಡಿಕೆಶಿ ಬ್ರದರ್ಸ್. ಅವರೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ್ದು. ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಸ್ವಂತ, ರಕ್ತ ಹಂಚಿಕೊಂಡ ಬ್ರದರ್ ಚುನಾವಣೆಯಲ್ಲಿ ಸೋಲ್ತಾರೆ. ಈ ಚುನಾವಣೆಯಲ್ಲಿ ಡಿಕೆಶಿ ಅವರ ಬ್ರದರ್ ಸೋಲ್ತಾರೆ, ಅನುಮಾನವೇ ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.

ಸನ್ಮಾನ್ಯ ಡಿ.ಕೆ. ಶಿವಕುಮಾರ್ ಅವರೇ ನಿಮ್ಮ ಓನ್ ಬ್ರದರ್ ಸೋಲುತ್ತಾರೆ. ರಕ್ತ ಹಂಚಿಕೊಂಡ ಬ್ರದರು ಚುನಾವಣೆಯಲ್ಲಿ ಸೋಲುತ್ತಾರೆ, ಅವರ ಎಮೋಷನಲ್ ಬ್ರದರ್ಸ್ ಇದ್ದಾರಲ್ವಾ ಅವರೇ ರಾಮೇಶ್ವರಂ ಕೆಫೆಯಲ್ಲಿ ಕುಕ್ಕರ್ ಬಾಂಬ್ ಇಟ್ಟಿದ್ದು. ಅವರೇ ನೇಹಾ ಕೊಂದು ಹಾಕಿದ್ದು, ಅವರೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ್ದು. ಆ ಮಹದೇವಪ್ಪ ಅನ್ನೋ ಮಂತ್ರಿ ಹೇಳ್ತಾನೆ, ಇದೆಲ್ಲಾ ಬಿಜೆಪಿಯವರ ಆಟ ಅಂತಾನೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಗೆ ಈ ವಿಷಯದ ಗಂಭೀರತೆ ಇದ್ಯಾ? ಅವರ ಮನೆಯಲ್ಲಿ ಇಂತದ್ದು ಆಗಿಲ್ಲವಲ್ಲಾ? ಅವರ ಮನೆ ಮಕ್ಕಳಿಗೆ ಆಗಿದ್ರೆ ಆಗ ಸಂಕಟ ಅರ್ಥ ಆಗುತ್ತಿತ್ತು. ಸಂವೇದನ ಕಳ್ಕೊಂಡ ಕಾಂಗ್ರೆಸ್ಸಿಗೆ ಏನೂ ಅರ್ಥ ಆಗೋಲ್ಲ, ಅವರ ಸಂವೇದನೆ ಸತ್ತೋಗಿದೆ, ಓಟ್ ಬ್ಯಾಂಕ್ ಮಾತ್ರ ಕಾಣ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಚೊಂಬು ಜಾಹೀರಾತು ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಅಲ್ಲಿನ ಜನ ಅವರಿಗೆ ಚೊಂಬು ಕೊಟ್ಟಿದಾರೆ. ಉತ್ತರ ಪ್ರದೇಶದಲ್ಲಿ 387 ಕಾಂಗ್ರೆಸ್ ಅಭ್ಯರ್ಥಿಗಳ ಠೇವಣಿ ನಷ್ಟ ಆಯ್ತು, ಇದೆಲ್ಲಾ ಕಾಂಗ್ರೆಸಿಗೆ ಚೊಂಬು ಕೊಟ್ಟಿರೋ ಲಕ್ಷಣ ಅಲ್ವಾ..? ಪಂಚವಾರ್ಷಿಕ ಯೋಜನೆ ಹೆಸರಲ್ಲಿ ಜನರಿಗೆ ಚೊಂಬು ಕೊಟ್ರು. ಗರೀಬಿ ಹಠಾವೋ ಹೆಸರಲ್ಲಿ ಜನರ ಕೈಗೆ ಚೊಂಬು ಕೊಟ್ರು, ಈಗ ಅಪಪ್ರಚಾರ ಜನರಿಗೆ ಆಸೆ ತೋರಿಸುವುದು ಅಷ್ಟೇ. ಆಸೆ ತೋರಿಸಿ, ಅಪಪ್ರಚಾರ ಮಾಡಿ ಜನರ ಕೈಗೆ ಚೊಂಬು ಕೊಡಲು ಹೊರಟಿದ್ದಾರೆ. ಬೆಂಗಳೂರಲ್ಲಿ ಯಾವುದಕ್ಕೂ ನೀರಿಲ್ಲ, ಕಾಂಗ್ರೆಸ್ ಖಾಲಿ ಚೊಂಬು ಎಂದು ವ್ಯಂಗ್ಯವಾಡಿದರು.
ನೇಹಾ ತಂದೆಗೆ ಸಾಂತ್ವನ ಹೇಳಿದ ಡಿ ಕೆ ಶಿವಕುಮಾರ್
ಮೊನ್ನೆ ಹುಬ್ಬಳ್ಳಿಯಲ್ಲಿ ಹತ್ಯೆಯಾದ ನೇಹಾ ಹಿರೇಮಠ ಅವರ ತಂದೆ ನಿರಂಜನ ಹಿರೇಮಠ ಅವರಿಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು. ಈ ದುರಂತದಿಂದ ನಮಗೂ ಆಘಾತವಾಗಿದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಗಿರುವ ದುಃಖದಲ್ಲಿ ನಾವೂ ಭಾಗಿ. ಸರಕಾರ ನಿಮ್ಮ ಜತೆಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ. ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಹೋದರ ಡಿ ಕೆ ಸುರೇಶ್ ಅವರ ಪರ ಆನೇಕಲ್ ನಲ್ಲಿ ಭಾನುವಾರ ಮಧ್ಯಾಹ್ನ ಪ್ರಚಾರ ರಾಲಿ ಕೈಗೊಂಡಿದ್ದ ಸಂದರ್ಭದಲ್ಲಿ ಅವರು ನಿರಂಜನ ಹಿರೇಮಠ ಅವರಿಗೆ ದೂರವಾಣಿ ಕರೆ ಮಾಡಿದರು.
ಪೂರ್ವನಿಗದಿತ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರತನಾಗಿದ್ದ ಕಾರಣ ಹುಬ್ಬಳ್ಳಿಗೆ ಖುದ್ದು ಬರಲು ಆಗಲಿಲ್ಲ. ಚುನಾವಣೆ ಮುಗಿದ ನಂತರ ಖಂಡಿತವಾಗಿಯೂ ಬರುತ್ತೇನೆ. ಮಗಳ ಅಗಲಿಕೆಯಿಂದ ನಿಮಗೆ ಆಗಿರುವ ನೋವು ಎಂತಹದು ಎಂಬುದು ನನಗೆ ಅರ್ಥವಾಗುತ್ತದೆ. ನೋವು ಭರಿಸುವ ಶಕ್ತಿಯನ್ನು ನಿಮಗೆ, ನಿಮ್ಮ ಕುಟುಂಬ ಸದಸ್ಯರಿಗೆ ಆ ಭಗವಂತ ನೀಡಲಿ ಎಂದು ಅವರು ಹೇಳಿದರು.












Click it and Unblock the Notifications