ಕೆಪಿಸಿಸಿ ಅಧ್ಯಕ್ಷರಾಗಿ ಡಿ. ಕೆ. ಶಿವಕುಮಾರ್ ನೇಮಕ
ಬೆಂಗಳೂರು, ಮಾರ್ಚ್ 11 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ, ಕನಕಪುರ ಶಾಸಕ ಡಿ. ಕೆ. ಶಿವಕುಮಾರ್ ನೇಮಕವಾಗಿದ್ದಾರೆ. 15 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಳಿಕ ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
Recommended Video
ಎಐಸಿಸಿ ಬುಧವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಮಧುಸೂದನ್ ಮಿಸ್ತ್ರಿ ನೇತೃತ್ವದ ಹೈಕಮಾಂಡ್ ನಾಯಕರ ನಿಯೋಗ ರಾಜ್ಯಕ್ಕೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು? ಎಂದು ವಿವಿಧ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿತ್ತು.
ಉಪ ಚುನಾವಣೆ ಫಲಿತಾಂಶದ ಬಳಿಕ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಮುನ್ನಡೆಸುವವರು ಯಾರು? ಎಂಬ ಚರ್ಚೆ ಆರಂಭವಾಗಿತ್ತು.
ಡಿ. ಕೆ. ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿರುವ ಎಐಸಿಸಿ ಮೂವರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಸತೀಶ್ ಜಾರಕಿಹೊಳಿ, ಈಶ್ವರ ಖಂಡ್ರೆ, ಸಲೀಂ ಅಹಮದ್ ಕಾರ್ಯಾಧ್ಯಕ್ಷರಾಗಿದ್ದಾರೆ.

ಸಿದ್ದರಾಮಯ್ಯ ರಾಜೀನಾಮೆ ಅಂಗೀಕಾರವಿಲ್ಲ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿಲ್ಲ. ವಿಪಕ್ಷ ನಾಯಕರಾಗಿ ಮತ್ತು ವಿಧಾನಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಎರಡೂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯಲಿದ್ದಾರೆ.

ವಿಪ್ ಜಾರಿ ಮಾಡುವವರು ಬದಲು
ನೂತನ ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡಿರುವ ಎಐಸಿಸಿ ಮುಖ್ಯ ಸಚೇತಕರನ್ನು ಬದಲಾವಣೆ ಮಾಡಿದೆ. ವಿಧಾನಸಭೆ ಮುಖ್ಯ ಸಚೇತಕರಾಗಿ ಅಜಯ್ ಸಿಂಗ್, ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಎಂ. ನಾರಾಯಣ ಸ್ವಾಮಿ ನೇಮಕಗೊಂಡಿದ್ದಾರೆ.

ಹಲವು ನಾಯಕರ ಹೆಸರು
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೆ. ಎಚ್. ಮುನಿಯಪ್ಪ, ಎಂ. ಬಿ. ಪಾಟೀಲ್ ಸೇರಿದಂತೆ ಹಲವು ನಾಯಕರ ಹೆಸರು ಕೇಳಿ ಬಂದಿತ್ತು. ಡಿ. ಕೆ. ಶಿವಕುಮಾರ್ ಅಧ್ಯಕ್ಷರಾಗಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಡಿಸೆಂಬರ್‌ನಿಂದ ಅಳೆದೂ ತೂಗಿ ಲೆಕ್ಕಾಚಾರ ಹಾಕಿರುವ ಎಐಸಿಸಿ ಡಿ. ಕೆ. ಶಿವಕುಮಾರ್ ನೇಮಕ ಮಾಡಿದೆ.

ಸಿದ್ದರಾಮಯ್ಯ ಭೇಟಿಯಾದ ಡಿಕೆಶಿ
ಎಐಸಿಸಿ ಕೆಪಿಸಿಸಿ ಅಧ್ಯಕ್ಷರ ಘೋಷಣೆ ಮಾಡುತ್ತಿದ್ದಂತೆ ವಿಧಾನಸಭೆಯಲ್ಲಿದ್ದ ಡಿ. ಕೆ. ಶಿವಕುಮಾರ್ ವಿಧಾನಸೌಧದ ಮೊಗಸಾಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾದರು.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಬದಲಾವಣೆ
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಮಾಡಿರುವ ಎಐಸಿಸಿ ಅಧಿಕೃತ ಆದೇಶ ಹೊರಡಿಸಿದೆ. ಆದೇಶದ ಪ್ರತಿ ಇಲ್ಲಿದೆ.












Click it and Unblock the Notifications