ದುಬೈನಲ್ಲಿ ಕೆಎಲ್ಇ ಶಾಲೆ ಮಾರ್ಚ್ 1ರಂದು ಆರಂಭ
ಬೆಳಗಾವಿ. ಫೆ.25 : ಬೆಳಗಾವಿಯ ಕೆಎಲ್ಇ ಸಂಸ್ಥೆಯು ದುಬೈನಲ್ಲಿ ಸಿಬಿಎಸ್ಇ ಶಾಲೆಯನ್ನು ನಿರ್ಮಿಸಿದ್ದು, ಇದರ ಉದ್ಘಾಟನೆ ಸಮಾರಂಭ ಮಾ.1ರಂದು ನಡೆಯಲಿದೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಾ.ಪ್ರಭಾಕರ ಕೋರೆ, ಗಲ್ಫ್ ರಾಷ್ಟ್ರಗಳಾದ ಅಬುದಾಬಿ, ಸೌದಿ ಅರೇಬಿಯಾ, ಬೆಹರಿನ್, ಕತಾರ್, ಕುವೈತ್, ಮಸ್ಕತ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಕೆಎಲ್ಇ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ದುಬೈನಲ್ಲಿ ಶೇ.63ರಷ್ಟು ಅನಿವಾಸಿ ಭಾರತೀಯರಿದ್ದಾರೆ ಆದ್ದರಿಂದ ಕೆಎಲ್ಇ ಸಂಸ್ಥೆ ವತಿಯಿಂದ ಶಾಲೆ ಆರಂಭಿಸಬೇಕು ಎಂದು ಅನಿವಾಸಿ ಭಾರತೀಯರು ಒತ್ತಾಯಿಸುತ್ತಿದ್ದರು. ಈ ಹಿನ್ನಲೆಯಲ್ಲಿ 'ಎ' ಗ್ರೇಡ್ ಶಾಲೆ ಆರಂಭಿಸಲಾಗಿದೆ ಎಂದು ಪ್ರಭಾಕರ ಕೋರೆ ತಿಳಿಸಿದರು.
ಕೆಎಲ್ಇ ವತಿಯಿಂದ ಆರಂಭಿಸಲಾಗುತ್ತಿರುವ ಶಾಲೆಯನ್ನು 35 ವರ್ಷಗಳ ಅವಧಿಗೆ ಲೀಸ್ ಮೇಲೆ ಪಡೆಯಲಾಗಿದೆ. 116 ಕೊಠಡಿಗಳನ್ನು ಹೊಂದಿರುವ ಬಿಲ್ವ ಇಂಡಿಯನ್ ಸ್ಕೂಲ್ ಹೆಸರಿನ ಈ ಶಾಲೆ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಆರಂಭದಲ್ಲಿ ನರ್ಸರಿಯಿಂದ 5ನೇ ತರಗತಿ ವರೆಗೆ ಪ್ರವೇಶ ನೀಡಲಾಗುವುದು ಎಂದರು.
ಶಾಲೆಯ ಉದ್ಘಾಟನೆಗೆ ಮುಖ್ಯ ಅತಿಥಿಗಳಾಗಿ ಕೇಂದ್ರ ಕೃಷಿ ಸಚಿವ ಶರದ ಪವಾರ್ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಆಗಮಿಸಲಿದ್ದು, ಅಧ್ಯಕ್ಷತೆಯನ್ನ್ನು ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ವಹಿಸಲಿದ್ದಾರೆ ಎಂದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ದುಬೈನಲ್ಲಿ ಆರಂಭವಾಗಲಿದೆ ಕೆಎಲ್ಇ ಶಾಲೆ
ಬೆಳಗಾವಿಯ ಕೆಎಲ್ಇ ಸಂಸ್ಥೆಯು ದುಬೈನಲ್ಲಿ `ಬಿಲ್ವ ಇಂಡಿಯನ್ ಸ್ಕೂಲ್` ಹೆಸರಿನಲ್ಲಿ ಶಾಲೆಯನ್ನು ನಿರ್ಮಾಣ ಮಾಡಿದೆ. ಇದರ ಉದ್ಘಾಟನೆಯನ್ನು ಮಾರ್ಚ್ 1ರಂದು ಮಾಡಲಾಗುವುದು ಎಂದು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ. ಕೇಂದ್ರ ಕೃಷಿ ಸಚಿವ ಶರದ ಪವಾರ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಶಾಲೆಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಕೋರೆ ತಿಳಿಸಿದರು.

ಸಂಗೀತ ವಿದ್ವತ್ ಪರೀಕ್ಷೆ
ಇದುವರೆಗೆ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುತ್ತಿದ್ದ ಸಂಗೀತ ಸೀನಿಯರ್, ಜೂನಿಯರ್ ಹಾಗೂ ವಿದ್ವತ್ ಪರೀಕ್ಷೆಗಳನ್ನು ಇನ್ನು ಮುಂದೆ ಅಂದರೆ 2015-16ನೇ ಸಾಲಿನಿಂದ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೀರಿಗೆ ಬಂತು ಮೀಟರ್
ಚಿತ್ರದುರ್ಗ ನಗರದಲ್ಲಿ ಬಹು ದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಕುಡಿಯುವ ನೀರಿನ ಮೀಟರ್ ಅಳವಡಿಕೆಗೆ ಸೋಮವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಇದರಿಂದಾಗಿ ಇನ್ನು ನಗರದ ಮನೆಗಳಿಗೆ ಮೀಟರ್ ಅಳವಡಿಸಲಾಗುತ್ತದೆ. ಪುಣೆಯ ಚೇತನಾ ಕಂಟ್ರೋಲ್ ಸಿಸ್ಟಮ್ಸ್ ಈಗಾಗಲೇ 5571 ವಾಟರ್ ಮೀಟರ್ ಮತ್ತು 17 ಬಲ್ಕ್ ವಾಟರ್ ಮೀಟರ್ ಗಳನ್ನು ನಗರಸಭೆಗೆ ಸರಬರಾಜು ಮಾಡಿದ್ದಾರೆ. ಸದ್ಯಕ್ಕೆ ಚಿತ್ರದುರ್ಗದ 17 ವಾರ್ಡ್‌ಗಳಲ್ಲಿ 5571 ಗ್ರಾಹಕರ ಮನೆಗಳಿಗೆ ವಾಟರ್ ಮೀಟರ್ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ. ಹಂತ-ಹಂತವಾಗಿ ಇತರ ವಾರ್ಡ್ ಗಳಲ್ಲಿಯೂ ಮೀಟರ್ ಅಳವಡಿಕೆ ನಡೆಯಲಿದೆ.

ರಾಮನಗರದ ಜನರಿಗೆ ಮತ್ತೆ ಆನೆ ಆತಂಕ
ರಾಮನಗರ ಜಿಲ್ಲೆಯಲ್ಲಿ ಕಾಡಾನೆಗಳು ಮತ್ತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಉಂಟುಮಾಡಿವೆ. ಸೋಮವಾರ ಪ್ರತ್ಯೇಕ ಆನೆಗಳ ಹಿಂಡು ಎರಡು ಕಡೆ ಬೆಳೆ ನಾಶ ಮಾಡಿದ್ದು, ಗ್ರಾಮದ ಅಂಚಿನಲ್ಲೇ ಬೀಡುಬಿಟ್ಟಿದ್ದು, ಜನರಿಗೆ ಆತಂಕ ಮೂಡಿಸಿವೆ. ಬನ್ನೇರುಘಟ್ಟ ಅರಣ್ಯದ ಮೂಲಕ 8 ಆನೆಗಳ ಹಿಂಡು ಭಾನುವಾರ ರಾಮನಗರದ ಬಿಡದಿ ಹೋಬಳಿಯ ಹುಚ್ಚಮ್ಮನದೊಡ್ಡಿ ಗ್ರಾಮದ ಬಳಿ ಕಬ್ಬು, ಬಾಳೆ ಬೆಳೆಗಳನ್ನು ನಾಶಪಡಿಸಿವೆ. ಸಾವನದುರ್ಗ ಅರಣ್ಯದಿಂದ ತಪ್ಪಿಸಿಕೊಂಡ 7 ಆನೆಗಳ ಹಿಂಡು, ಮಾಗಡಿ ತಾಲೂಕಿನ ಶ್ರೀಗಿರಿಪುರ ಸುತ್ತಮುತ್ತ ಬೀಡು ಬಿಟ್ಟಿದ್ದು, ಬೆಳೆಗಳನ್ನು ನಾಶ ಮಾಡಿವೆ.

ಮಾಸ್ತಿ ಕಥಾ ಪುರಸ್ಕಾರಕ್ಕೆ ಆಹ್ವಾನ
ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ನೀಡುವ ವಾರ್ಷಿಕ `ಮಾಸ್ತಿ ಕಥಾ ಪುರಸ್ಕಾರ`ಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. 2013ರ ಜನವರಿಯಿಂದ ಡಿ.3ರೊಳಗೆ ಪ್ರಕಟವಾಗಿರುವ ಕಥೆಯನ್ನು ಪ್ರಶಸ್ತಿಗೆ ಪುರಸ್ಕರಿಸಲಾಗುತ್ತದೆ. ವಿಜೇತರಿಗೆ ಲೇಖಕರಿಗೆ 20 ಸಾವಿರ ಮತ್ತು ಪ್ರಕಾಶಕರಿಗೆ 10 ಸಾವಿರ ರೂ. ಬಹುಮಾನ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಥೆ ಕಳಿಸಬೇಕಾದ ವಿಳಾಸ : ಮಾವಿನಕೆರೆ ರಂಗನಾಥ್, ಅಧ್ಯಕ್ಷರು, ಮಾಸ್ತಿ ಅಯ್ಯಂಗಾರ್ ಟ್ರಸ್ಟ್, ನಂ.21, ಎಲ್ಲಪ್ಪ ಗಾರ್ಡನ್, 10ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು -56003. ಹೆಚ್ಚಿನ ಮಾಹಿತಿಗಾಗಿ : 080-23363347 ನಂಬರ್ ಗೆ ಕರೆ ಮಾಡಬಹುದು.

ಇನ್ಫೋಸಿಸ್ ಫೌಂಡೇಶನ್ ಧರ್ಮಶಾಲೆ
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗುವ ಬಡ ರೋಗಿಗಳ ಸಂಬಂಧಿಕರ ವಸತಿ ವ್ಯವಸ್ಥೆಗಾಗಿ 'ಇನ್ಫೋಸಿಸ್ ಫೌಂಡೇಶನ್ ಧರ್ಮಶಾಲೆ' ಆರಂಭವಾಗಿದೆ. ರೋಗಿಗಳೊಂದಿಗೆ ಬರುವ ಬಡ ಸಂಬಂಧಿಕರು ಕಿಮ್ಸ್ ಆವರಣದಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ನಿದ್ದೆ ಮಾಡಿ ರಾತ್ರಿ ಕಳೆಯುವುದನ್ನು ತಪ್ಪಿಸಲು ಇನ್ಫೋಸಿಸ್ ಧರ್ಮಶಾಲೆ ನಿರ್ಮಿಸಿದೆ. ಮೇ 2012ರಲ್ಲಿ ಇನ್ಫೋಸಿಸ್ ಫೌಂಡೇಶನ್ ಧರ್ಮಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಈ ಕಟ್ಟಡ 2013 ನವೆಂಬರ್ ತಿಂಗಳಲ್ಲೇ ಪೂರ್ಣಗೊಂಡಿದ್ದು, ಕಟ್ಟಡವನ್ನು ಕಿಮ್ಸ್ ನಿರ್ದೇಶಕಿ ವಸಂತಾ ಕಾಮತ್ ಅವರಿಗೆ ಹಸ್ತಾಂತರಿಸಲಾಗಿದೆ. ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.












Click it and Unblock the Notifications