ಬಾರ್ ಗಳಲ್ಲಿ ಸಿಸಿಟಿವಿ ಕಡ್ಡಾಯ, ಇತರ ಜಿಲ್ಲಾ ಸುದ್ದಿಗಳು
ದಾವಣಗೆರೆ, ನ.7: ಕರ್ನಾಟಕದಲ್ಲಿ ಹೈಕೋರ್ಟ್ ನಿರ್ದೇಶನದಂತೆ ಬಾರ್ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಸರ್ಕಾರ ಎಲ್ಲಾ ಬಾರ್ ಮಾಲೀಕರಿಗೂ ಎರಡು ತಿಂಗಳ ಗಡುವು ನೀಡಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಗಡುವು ಮೀರದ ನಂತರ ಸಿಸಿಟಿವಿ ಆಳವಡಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಗೃಹ ಸಚಿವ ಜಾರ್ಜ್, ರಾಜ್ಯದಲ್ಲಿ ಲೈವ್ ಬ್ಯಾಂಡ್ ಗಳನ್ನು ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಬಾರ್ ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಹೈಕೋರ್ಟ್ ನಿರ್ದೇಶನದಂತೆ ಬಾರ್ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಳವಡಿಸಬೇಕು ಎಂದು ಹೇಳಿದರು.
ರಾಜ್ಯದ ಎಲ್ಲಾ ಬಾರ್ ಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಬಾರ್ ಮಾಲೀಕರಿಗೆ ಸಿಸಿಟಿವಿ ಆಳವಡಿಕೆಗೆ 2 ತಿಂಗಳ ಗಡುವು ನೀಡಲಾಗಿದೆ ಎಂದು ಜಾರ್ಜ್ ಸ್ಪಷ್ಟಪಡಿಸಿದರು. ಗಡುವು ಮುಗಿದ ಮೇಲೆಯೂ ಸಿಸಿಟಿವಿ ಆಳವಡಿಸಿದ ಬಾರ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಳೆದ ನಾಲ್ಕು ವರ್ಷಗಳಿಂದ ಗೃಹ ಇಲಾಖೆಯಲ್ಲಿ ಯಾವುದೇ ನೇಮಕಾತಿ ಮಾಡಿಕೊಂಡಿಲ್ಲ. ಇಲಾಖೆಯಲ್ಲಿ ಇನ್ಸ್ ಪೆಕ್ಟರ್ ಸೇರಿದಂತೆ 16 ಸಾವಿರ ಹುದ್ದೆಗಳು ಖಾಲಿ ಇವೆ. ಈ ವರ್ಷ 8500 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಹೈ-ಕಮೀಸಲು ಮತ್ತು ಮಹಿಳೆಯರಿಗೆ ಶೇ 20 ರಷ್ಟು ಮೀಸಲಾತಿಯನ್ನು ನೇಮಕಾತಿ ವೇಳೆ ನೀಡಲಾಗುವುದು ಎಂದು ಭರವಸೆ ನೀಡಿದರು. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಸಿಸಿಟಿವಿ ಅಳವಡಿಕೆಗೆ ಎರಡು ತಿಂಗಳ ಗಡುವು
ರಾಜ್ಯದಲ್ಲಿ ಹೈಕೋರ್ಟ್ ನಿರ್ದೇಶನದಂತೆ ಬಾರ್ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಸರ್ಕಾರ ಎಲ್ಲಾ ಬಾರ್ ಮಾಲೀಕರಿಗೂ ಎರಡು ತಿಂಗಳ ಗಡುವು ನೀಡಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ರಾಜ್ಯದಲ್ಲಿ ಲೈವ್ ಬ್ಯಾಂಡ್ ಗಳನ್ನು ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ. ಬಾರ್ ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಹೈಕೋರ್ಟ್ ನಿರ್ದೇಶನದಂತೆ ಬಾರ್ ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಳವಡಿಸಬೇಕು ಎಂದು ಹೇಳಿದರು.

ಶಿವಮೊಗ್ಗದಲ್ಲಿ ಮರಳು ಲಾರಿ ಮುಷ್ಕರ
ಶಿವಮೊಗ್ಗ ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆ ಪರಿಹಾರ ನೀಡದ ಜಿಲ್ಲಾಡಳಿತದ ವಿರುದ್ಧ ಮರಳು ಸಾಗಾಣೆ ಲಾರಿ ಮಾಲೀಕರು ಸಮರ ಸಾರಿದ್ದು, ನ.7ರಂದು ಪ್ರತಿಭಟನೆ ನಡೆಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ಶಿವಮೊಗ್ಗ ಕಟ್ಟಡ ಸಾಮಗ್ರಿ ಸರಬರಾಜು ಲಾರಿ ಮಾಲಿಕರ ಸಂಘದ ಅಧ್ಯಕ್ಷ ಡಿ. ರಾಜಶೇಖರಪ್ಪ ಅವರು ಲಾರಿ ಮಾಲೀಕರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಾರಿ ಮಾಲಿಕರು ಕಾನೂನು ಬದ್ಧವಾಗಿ ಲಾರಿಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳಡಿಸಿಕೊಂಡರೂ ತಮಗೆ ಮರಳು ಸಾಗಾಣೆಗೆ ಪರ್ಮಿಟ್ ನೀಡುತ್ತಿಲ್ಲ. ಇದರಿಂದ ಜಿಲ್ಲಾಡಳಿತವೇ ಪರೋಕ್ಷವಾಗಿ ಅಕ್ರಮ ಮರಳು ಸಾಗಾಣೆ ದಂಧೆಗೆ ಕುಮ್ಮಕ್ಕು ನೀಡುತ್ತಿದೆ ಆದ್ದರಿಂದ ಹೋರಾಟ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ನಗರ ಸಭೆಗೆ 1 ಕೋಟಿ ಬಾಕಿ ಕಟ್ಟಬೇಕು
ತುಮಕೂರಿನ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಯ ಬಾಡಿಗೆದಾರರಿಂದ ನಗರಸಭೆಗೆ 1 ಕೋಟಿ ರು. ಬಾಡಿಗೆ ಬಾಕಿ ಉಳಿದಿದೆ. ಆದರೂ ಕಳೆದ 10 ತಿಂಗಳ ಅವಧಿಯಲ್ಲಿ ಇಷ್ಟು ದೊಡ್ಡ ಮೊತ್ತದ ಬಾಡಿಗೆ ಹಣವನ್ನು ವಸೂಲಿ ಮಾಡಲು ನಗರಸಭೆ ಮುಂದಾಗಿಲ್ಲ ಎಂದು ನಗರಸಭೆ ವಿರೋಧ ಪಕ್ಷಗಳು ಆರೋಪಿಸಿವೆ. ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ 122 ಅಂಗಡಿ ಮಳಿಗೆಗಳ ಪೈಕಿ 90 ಮಳಿಗೆಯನ್ನು ನಗರಸಭೆ ಹರಾಜು ಹಾಕಿತ್ತು. ಉಳಿದ 32 ಮಳಿಗೆಯನ್ನ ಯಾರೊಬ್ಬರು ಹರಾಜಲ್ಲಿ ಕೂಗಿಕೊಳ್ಳಲಿಲ್ಲ. 8 ರಿಂದ 50 ಸಾವಿರ ರು. ಗಳವರೆಗೆ ಬಹಿರಂಗ ಹರಾಜಿನಲ್ಲಿ ಅಂಗಡಿಗಳನ್ನು ಬಾಡಿಗೆಗೆ ಪಡೆದವರು, ನಂತರ ಬಾಡಿಗೆ ಕಟ್ಟಿಲ್ಲ ಮತ್ತು ನಗರಸಭೆ ಸಹ ಅದನ್ನು ಮಸೂಲಿ ಮಾಡಿಲ್ಲ ಎಂದು ವಿಪಕ್ಷಗಳು ದೂರಿವೆ.

ನಿರೀಕ್ಷಿತ ರೈಲಿಗೆ ನಾಳೆ ಚಾಲನೆ
ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ನಡುವಿನ ಪ್ಯಾಸೆಂಜರ್ ರೈಲು ಸಂಚಾರ ಶುಕ್ರವಾರದಿಂದ ಆರಂಭವಾಗಲಿದೆ. ಚಿಕ್ಕಬಳ್ಳಾಪುರದಿಂದ ಬರುವ ನೂತನ ಬ್ರಾಡ್‌ಗೇಜ್ ರೈಲಿನ ಸ್ವಾಗತ ಸಮಾರಂಭವು ಮಧ್ಯಾಹ್ನ 1.30ಕ್ಕೆ ಕೋಲಾರದ ರೈಲ್ವೆ ನಿಲ್ದಾಣದಲ್ಲಿ ನಡೆಯಲಿದೆ. ಕೇಂದ್ರ ರೈಲ್ವೆ ಖಾತೆ ಸಚಿವ ಎಸ್.ಮಲ್ಲಿಕಾರ್ಜುನ ಖರ್ಗೆ, ಇಂಧನ ಖಾತೆ ಸಚಿವ ಎಂ.ವೀರಪ್ಪಮೊಯ್ಲಿ, ಸಣ್ಣ ಮತ್ತು ಮದ್ಯಮ ಕೈಗಾರಿಕಾ ಸಚಿವ ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಶಾಸಕರಾದ ರಮೇಶ್‌ಕುಮಾರ್, ವರ್ತೂರ್ ಪ್ರಕಾಶ್, ನಾರಾಯಣಸ್ವಾಮಿ, ಕೆ.ಎಸ್.ಮಂಜುನಾಥ್‌ಗೌಡ, ವೈ.ರಾಮಪ್ಪ, ಸಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಶಿವಯೋಗಿ ಸ್ವಾಮಿ, ಮುಂತಾದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ರಾಜಕೀಯಕ್ಕೆ ಕನಿಷ್ಠ ವಿದ್ಯಾರ್ಹತೆ ನಿಗದಿಗೊಳಿಸಿ
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಂಗಗಳಾದ ಲೋಕಸಭೆ ಹಾಗೂ ವಿಧಾನಸಭೆಗೆ ಸ್ಪರ್ಧಿಸುವವರಿಗೆ ರಾಜ್ಯಶಾಸ್ತ್ರ ವಿಷಯದ ಪದವಿ ವಿದ್ಯಾಭ್ಯಾಸ ಕಡ್ಡಾಯ ಮಾಡಬೇಕು ಎಂದು ಉಪನ್ಯಾಸಕ ಐ.ಜಿ.ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಚಿತ್ರದುರ್ಗದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಹುದ್ದೆಗಳಿಗೆ ವಿದ್ಯಾರ್ಹತೆ ನಿಗದಿ ಮಾಡಿರುವ ರಾಜಕೀಯದವರು ತಮಗೆ ಮಾತ್ರ ಯಾವುದೇ ವಿದ್ಯಾರ್ಹತೆ ನಿಗದಿ ಮಾಡಿಕೊಂಡಿಲ್ಲ. ರಾಜಕೀಯ ಪ್ರವೇಶಿಸುವವರಿಗೆ ಕನಿಷ್ಠ ಮಟ್ಟದ ವಿದ್ಯಾಭ್ಯಾಸ ಇದ್ದರೆ ಒಳ್ಳೆಯದು ಎಂದರು.

ಶಾಲೆಯ ವಿರುದ್ಧ ಪ್ರತಿಭಟನೆ
ಕನಕಪುರದ ಸೆಂಟ್ ಥಾಮಸ್ ಶಾಲೆಯ ಶಿಕ್ಷಕಿ ಮಂಗಳ ಎಂಬುವವರು ವಿದ್ಯಾರ್ಥಿನಿಗೆ ಮಾನಸಿಕ ಹಿಂಸೆ ನೀಡಿದ್ದಾರೆ, ನೊಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ ಎಂದು ಆರೋಪಿಸಿ ವಿದ್ಯಾರ್ಥಿನಿ ಪೋಷಕರು ಮತ್ತು ಸಾರ್ವಜನಿಕರು ಚರ್ಚ್ ಫಾದರ್ ಕೊಠಡಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ. ಶಾಲೆಯ ಬಳಿ ಆಗಮಿಸಿದ ವಿದ್ಯಾರ್ಥಿನಿಯ ಪೋಷಕರು ಹಾಗೂ ಸಂಘ-ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಶಿಕ್ಷಕಿ ಮಂಗಳರವರ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಅವರನ್ನು ವಜಾಗೊಳಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಕಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಫಾದರ್ ಭರವಸೆ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ವೇಳಾಪಟ್ಟಿ ನಿಗದಿ
ಮಡಿಕೇರಿ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ವೇಳಾಪಟ್ಟಿ ನಿಗದಿಪಡಿಸುವ ಸಂಬಂಧ ಪ್ರಾದೇಶಿಕ ಸಾರಿಗೆ ಅಧಿಕಾರಿ ನಫೀಜ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರಸ್ತಾವನೆಯಂತೆ ಜಿಲ್ಲೆಯ ನಾನಾ ಭಾಗಗಳಲ್ಲಿ ಕೆಎಸ್ಆರ್ ಟಿಸಿ ಬಸ್‌ಸಂಚಾರಕ್ಕೆ ವೇಳಾಪಟ್ಟಿ ನಿಗದಿಪಡಿಸಬೇಕಿದ್ದು, ಆಕ್ಷೇಪಣೆಗಳಿದ್ದಲ್ಲಿ ತಿಳಿಸಬಹುದಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಸೂಚನೆ ನೀಡಿದರು. ವೇಳಾಪಟ್ಟಿ ಮಂಜೂರಾತಿ ವಿಷಯಕ್ಕೆ ಸಂಬಂಧಿಸಿದ ವಿಷಯ ನ್ಯಾಯಾಧೀಕರಣದ ಮುಂದೆ ಇರುವುದರಿಂದ ವೇಳಾಪಟ್ಟಿ ನಿಗದಿಪಡಿಸುವುದನ್ನು ಮುಂದೂಡುವಂತೆ ಖಾಸಗಿ ಬಸ್ ಮಾಲೀಕರು ಮನವಿ ಮಾಡಿದರು.












Click it and Unblock the Notifications