12 ರೂಗೆ ಕೊಟ್ಟೂರು-ಹರಿಹರ ನಡುವೆ ಸಂಚರಿಸಿ!
ಬಳ್ಳಾರಿ. ಮಾ.3 : ಎರಡು ದಶಕಗಳಿಂದ ಕೊಟ್ಟೂರು-ಹರಿಹರ ರೈಲು ಸಂಚಾರಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಿದ್ದು, ಸೋಮವಾರದಿಂದ ಮಾರ್ಗದಲ್ಲಿನ ರೈಲು ಸಂಚಾರ ಆರಂಭವಾಗಿದೆ. ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಇದರಿಂದ ಈ ಭಾಗದ ದಶಕಗಳ ಕನಸು ನನಸಾಗಿದೆ.
ಮಾ.3ರ ಸೋಮವಾರ ಕೊಟ್ಟೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕೊಟ್ಟೂರು-ಹರಿಹರ ನಡುವಿನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಮಾರ್ಗದಲ್ಲಿ 60 ಕಿ.ಮೀ.ವೇಗದಲ್ಲಿ ರೈಲು ಸಂಚಾರ ಆರಂಭಿಸಲು, ರೈಲ್ವೆ ಸಚಿವಾಲಯದ ತಂಡ ಫೆಬ್ರವರಿಯಲ್ಲಿ ಒಪ್ಪಿಗೆ ನೀಡಿತ್ತು. ಸೋಮವಾರ ಮಾರ್ಗವನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಾಗಿದೆ. [ಭಾರತೀಯ ರೈಲು ಓಡಲು ವಿದೇಶಿ ದುಡ್ಡು]
ಪ್ರತಿ ದಿನ ಈ ರೈಲು ಬೆಳಗ್ಗೆ 8.20ಕ್ಕೆ ಹರಿಹರದಿಂದ ಹೊರಡುವ ರೈಲು ಮಧ್ಯಾಹ್ನ 12.10ಕ್ಕೆ ಕೊಟ್ಟೂರು ತಲುಪುತ್ತದೆ. ಕೊಟ್ಟೂರಿನಿಂದ 12.45ಕ್ಕೆ ಹೊರಟು ಸಂಜೆ 4.30ಕ್ಕೆ ಹರಿಹರಕ್ಕೆ ಮರಳುತ್ತದೆ. ಹರಿಹರದಿಂದ ಹರಪನಹಳ್ಳಿಗೆ ಬೆಳಗ್ಗೆ 10.30ಕ್ಕೆ ಬರುತ್ತದೆ. ಮಧ್ಯಾಹ್ನ ಕೊಟ್ಟೂರಿನಿಂದ ಹರಪನಹಳ್ಳಿಗೆ 2.10ಕ್ಕೆ ಬರುತ್ತದೆ. ಹರಿಹರದಿಂದ ಕೊಟ್ಟೂರಿಗೆ 12 ರೂ. ಪ್ರಯಾಣದರವನ್ನು ನಿಗದಿಪಡಿಸಲಾಗಿದೆ. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಕೊಟ್ಟೂರು-ಹರಿಹರ ರೈಲು ಮಾರ್ಗಕ್ಕೆ ಚಾಲನೆ
ಮಾ.3ರ ಸೋಮವಾರ ಕೊಟ್ಟೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕೊಟ್ಟೂರು-ಹರಿಹರ ನಡುವಿನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಇದರಿಂದ ಎರಡು ದಶಕಗಳ ಈ ಭಾಗದ ಜನರು ಕನಸು ನನಸಾಗಿದೆ. ಹರಿಹರದಿಂದ ಕೊಟ್ಟೂರಿಗೆ 12 ರೂ. ಪ್ರಯಾಣದರವನ್ನು ನಿಗದಿಗೊಳಿಸಲಾಗಿದೆ.

ಸಾಂಸ್ಕೃತಿಕ ನಗರಿ ಇನ್ನು ಫುಲ್ ಕ್ಲೀನ್
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಸದ ಸಮಸ್ಯೆ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದ್ದು, ಮಹಾನಗರಪಾಲಿಕೆಯು ಕಸದ ನಿರ್ವಹಣೆಗಾಗಿ ನಗರವಾಸಿಗಳಿಗೆ ಬಣ್ಣದ ತೊಟ್ಟಿಗಳನ್ನು ವಿತರಿಸುವ ಕಾರ್ಯಕ್ರಮ ಆರಂಭಿಸಿದೆ. ಶಾಸಕ ತನ್ವೀರ್ ಸೇಠ್ ತೊಟ್ಟಿ ನೀಡುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದ್ದಾರೆ. ಕಸದಲ್ಲಿಯೇ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಪ್ರತ್ಯೇಕ ತೊಟ್ಟಿಗಳಲ್ಲಿ ನೀಡುವುದರಿಂದ ಕಸ ವಿಲೇವಾರಿ ಸುಲಭವಾಗುತ್ತದೆ. ಹಸಿರು ತೊಟ್ಟಿಯಲ್ಲಿ ಹಸಿ ಕಸ, ಕೆಂಪು ತೊಟ್ಟಿಯಲ್ಲಿ ಒಣ ಕಸ ಹಾಕಬೇಕೆಂದು ಪಾಲಿಕೆ ಸೂಚನೆ ನೀಡಿದೆ. ಎಲ್ಲ ಮನೆಗಳಿಗೆ 2 ಡಸ್ಟ್‌ಬಿನ್‌ಗಳನ್ನು ನೀಡಲಾಗುತ್ತಿದೆ.

ಬೆಳಗಾವಿ ಅಭಿವೃದ್ಧಿಗೆ 600 ಕೋಟಿ ಯೋಜನೆ
ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸುಮಾರು ರು. 600 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯ ಜಿಲ್ಲಾಸ್ಪತ್ರೆಯನ್ನು 150 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುವುದು. 200 ಕೋಟಿ ವೆಚ್ಚದಲ್ಲಿ ನಗರದಲ್ಲಿ ವಿದ್ಯುತ್ ಕೇಬಲ್‌ಗಳನ್ನು ಅಂಡರ್ ಗ್ರೌಂಡ್‌ನಲ್ಲಿ ಅಳವಡಿಸಲಾಗುವುದು. ಜಿಲ್ಲೆಯಲ್ಲಿರುವ ಹದಗೆಟ್ಟ ರಸ್ತೆಗಳನ್ನು 3 ತಿಂಗಳಲ್ಲಿ ದುರಸ್ತಿ ಮಾಡಲಾಗುವುದು ಮುಂತಾದ ಯೋಜನೆಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು.

ರೈತರ ಕೈಗೆ ಟ್ಯಾಬ್ಲೆಟ್
ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಆಯ್ದ 250 ರೈತರಿಗೆ ಮಾ.4ರ ಮಂಗಳವಾರ ಉಚಿತವಾಗಿ 'ನಮ್ಮ ರೈತ' ಹೆಸರಿನ ಟ್ಯಾಬ್ಲೆಟ್‌ಗಳನ್ನು ಪ್ರಾಯೋಗಿಕವಾಗಿ ನೀಡಲಾಗುತ್ತಿದ್ದು, ಬಾಗಲಕೋಟೆಯ ಬಾಪೂಜಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಬೆಂಗಳೂರಿನ ವಚ್ಯುವೆಕ್ಸ್ ಸಲ್ಯೂಶನ್ಸ್‌ಗಳ ಸಹಯೋಗದಲ್ಲಿ ಈ ಯೋಜನೆ ರೂಪಿಸಲಾಗಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಎಸ್.ಆರ್.ಪಾಟೀಲ್ ಅವರು ಈ ಬಾಪೂಜಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರೂ ಆಗಿದ್ದು, ಅವರ ಪ್ರಯತ್ನದ ಫಲವಾಗಿ ಈ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಬಾಲಕಿಯನ್ನು ಪೋಷಕರಿಗೆ ನೀಡುವುದಿಲ್ಲ
ಝಂಜರವಾಡದ ಅಪ್ಪಯ್ಯ ಸ್ವಾಮಿ ಹುಚ್ಚುಟದಿಂದ ಆಶ್ರಮದಲ್ಲಿ ಬಂಧನಕ್ಕೊಳಗಾಗಿ ಅಗ್ನಿ ಅನುಷ್ಠಾನದಲ್ಲಿ ಗಾಯಗೊಂಡ ಬಾಲಕಿ ನಿಜಲಿಂಗಮ್ಮಳನ್ನು ಆಕೆಯ ಪೋಷಕರಿಗೆ ಒಪ್ಪಿಸುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದ್ದಾರೆ. ಬಾಲಕಿಯನ್ನು ಭೇಟಿಮಾಡಿ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಅವರು, ಬಾಲಕಿ ಆರೋಗ್ಯದಲ್ಲಿ ಈಗ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ಆಹಾರವನ್ನೂ ಸೇವಿಸುತ್ತಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಶಾಲೆಗೆ ಹೋಗುವ ಆಸೆ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ಇಲಾಖೆಯಿಂದಲೇ ಬೆಳೆಸುವ ಚಿಂತನೆ ಇದೆ ಎಂದರು.












Click it and Unblock the Notifications