ಬೆನ್ನಿಹಿನ್ ಭೇಟಿ ಖಂಡಿಸಿದ ಕ್ರೈಸ್ತರ ವಿಚಾರ ವೇದಿಕೆ
ಬೆಂಗಳೂರು, ಜ.13 : ಕ್ರೈಸ್ತಪಾದ್ರಿ ಬೆನ್ನಿಹಿನ್ ಬೆಂಗಳೂರಿನ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಕರ್ನಾಟಕ ಕ್ರೈಸ್ತರ ವಿಚಾರ ವೇದಿಕೆ ಆಗ್ರಹಿಸಿದೆ. ಸಾಮೂಹಿಕ ಪ್ರಾರ್ಥನೆ ಕಾರ್ಯಕ್ರಮದ ನೆಪದಲ್ಲಿ ಬೆನ್ನಿಹಿನ್ ಮೂಢನಂಬಿಕೆಗಳನ್ನು ಜನರಲ್ಲಿ ಬಿತ್ತುತ್ತಿದ್ದಾರೆ ಎಂದು ವೇದಿಕೆ ಆರೋಪಿಸಿದೆ.
ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ, ಕರ್ನಾಟಕ ಕ್ರೈಸ್ತರ ವಿಚಾರ ವೇದಿಕೆ ಮಖಂಡರಾದ ರೆಫಾಯಲ್ ರಾಜ್, ದೊರೆ ರಾಜ್, ಡಿ.ಕುಮಾರ್, ಸೆಲ್ವರಾಜ್ ಮುಂತಾದವರು, ಬೆನ್ನಿಹಿನ್ ನಂತಹ ಕಪಟ ಧರ್ಮ ಪ್ರಚಾರಕರಿಂದ ಧರ್ಮದ ಹೆಸರಿಗೆ ಮಸಿ ಬಳಿಯಲಾಗುತ್ತಿದೆ. [ಬೆನ್ನಿಹಿನ್ ಬೆಂಗಳೂರು ಭೇಟಿ ಖಚಿತ]
ಕರ್ನಾಟಕ ಸರ್ಕಾರ ಬೆನ್ನಿಹಿನ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು. ಬೆನ್ನಿಹಿನ್ ತಾನು ದೇವಮಾನವನೆಂದು ಘೋಷಿಸಿಕೊಂಡಿದ್ದಾರೆ, ಅವರ ಹೇಳಿಕೆ ಖಂಡನೀಯ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿದ್ದಾರೆ. ಕ್ರೈಸ್ತ ಧರ್ಮದಲ್ಲಿರುವ ಮೂಢನಂಬಿಕೆ ನಿಷೇಧಿಸಬೇಕೆಂದು ಆಗ್ರಹಿಸಿದರು.

ಬೆನ್ನಿಹಿನ್ ಕಾರ್ಯಕ್ರಮಕ್ಕೆ ಅವಕಾಶ ಬೇಡ
ಕ್ರೈಸ್ತಪಾದ್ರಿ ಬೆನ್ನಿಹಿನ್ ಬೆಂಗಳೂರಿನ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಕರ್ನಾಟಕ ಕ್ರೈಸ್ತರ ವಿಚಾರ ವೇದಿಕೆ ಆಗ್ರಹಿಸಿದೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವೇದಿಕೆ ಮುಖಂಡರು. ಸ್ವಯಂ ಘೋಷಿತ ದೇವ ಮಾನವ ಬೆನ್ನಿಹಿನ್ ಜನರಲ್ಲಿ ಧರ್ಮ ಪ್ರಚಾರದ ಹೆಸರಿನಲ್ಲಿ ಮೂಢನಂಬಿಕೆ ಬಿತ್ತುತ್ತಿದ್ದಾರೆ ಎಂದು ಮುಖಂಡರು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ವಿನೂತನ ರಾಜಕೀಯ ಪ್ರಚಾರ
ರಾಜಕಾರಣಿಗಳು ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಅನುಸರಿಸುತ್ತಾರೆ. ಹುಬ್ಬಳ್ಳಿಯಲ್ಲಿಯೂ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ ಪತ್ನಿ ವಿನೂತನ ರೀತಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ `ಭಜರಂಗಿ` ಚಿತ್ರವನ್ನು ವೀಕ್ಷಿಸಲು ಬರುವ ಮಹಿಳೆಯರಿಗೆ ಸಂಜೋತಾ ಚಿತ್ರಮಂದಿರದಲ್ಲಿ ಸೋಮವಾರ ಅರಿಶಿಣ-ಕುಂಕುಮ, ಬೇವು-ಬೆಲ್ಲ ನೀಡಿ, ಸಂಕ್ರಾಂತಿಯ ಶುಭಾಶಯ ಕೋರಲಾಯಿತು. ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ್ ಈ ಕಾರ್ಯಕ್ರಮ ಆಯೋಜಿಸಿದ್ದರು. ಅವರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಆದ್ದರಿಂದ ಈ ಕಾರ್ಯಕ್ರಮಕ್ಕೆ ರಾಜಕೀಯ ರಂಗು ಸೇರಿಕೊಂಡಿದೆ.

ತಜ್ಞ ವೈದ್ಯರನ್ನು ಕರೆಸುವಂತೆ ಒತ್ತಾಯಿಸಿ ಪ್ರತಿಭಟನೆ
ಗುಲ್ಬರ್ಗದಲ್ಲಿ ಪಾತಕಿ ಮುನ್ನಾ ಜೊತೆಗಿನ ಕಾಳಗದಲ್ಲಿ ಗುಂಡೇಟಿನಿಂದ ತಲೆ ಹಾಗೂ ಮೆದುಳಿಗೆ ಗಾಯವಾಗಿ ಹೈದ್ರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಟೇಷನ್ ಬಜಾರ್ ಪಿಐ ಮಲ್ಲಿಕಾರ್ಜುನ ಬಂಡೆ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಗುಂಡಿನ ಕಾಳಗವಾಗಿ 4 ದಿನ ಕಳೆದರೂ ಬಂಡೆ ಕೋಮಾದಲ್ಲೇ ಮುಂದುವರಿದಿದ್ದಾರೆ. ಆದ್ದರಿಂದ ವಿದೇಶದಿಂದ ತಜ್ಞ ವೈದ್ಯರನ್ನು ಕರೆಸಿ ಅವರಿಗೆ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿ ಗುಲ್ಬರ್ಗದಲ್ಲಿ ಸೋಮವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಬಂಡೆ ಅವರ ದೇಹಾರೋಗ್ಯದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ.

ಶಿಕ್ಷಣ ತಜ್ಞರ ಜೊತೆ ಸಭೆ
ಮಾತೃಭಾಷಾ ಶಿಕ್ಷಣ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಜ.21ರಂದು ಬರುವ ನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ಜ.16ರಂದು ಬೆಂಗಳೂರಿನಲ್ಲಿ ಸಾಹಿತಿಗಳು, ಶಿಕ್ಷಣ ತಜ್ಞರ ಸಭೆ ಕರೆಯಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ತೀರ್ಪು ಯಾರ ಪರವಾಗಿ ಬರುತ್ತದೆ ಎಂದು ತಿಳಿದಿಲ್ಲ. ಆದ್ದರಿಂದ ಎಲ್ಲಾ ಪರಿಸ್ಥಿತಿಗೂ ಸಿದ್ಧರಾಗುತ್ತಿದ್ದೇವೆ. ಮಾಧ್ಯಮಿಕ ಶಿಕ್ಷಣ ಯೋಜನೆಗೆ ಒಳಪಡಲು ನಾಲ್ಕು ವರ್ಷ ಅವಕಾಶವಿತ್ತು. ಜ.13 ಅಂತಿಮ ದಿನ. ಇದುವರೆಗೆ ಯಾವ ಕ್ರಮವೂ ಆಗಿಲ್ಲ. ಆದ್ದರಿಂದ ತ್ವರಿತ ಕ್ರಮ ಕೈಗೊಳ್ಳಲು ಸರಣಿ ಸಭೆ ನಡೆಸುತ್ತಿದ್ದೇವೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 3 ನಿಮಿಷ ಕಂಪಿಸಿದ ಭೂಮಿ
ಮುಡಿಗೆರೆ ತಾಲೂಕಿನ ಬಾಳೂರು ಮತ್ತು ಕುದುರೆಮುಖ ಪೊಲೀಸ್ ಠಾಣೆ ವ್ಯಾಪ್ತಿಯ ಜಾವಳಿ ಹೋಬಳಿಯಲ್ಲಿ ಸೋಮವಾರ ಬೆಳಗ್ಗೆ ಸುಮಾರು ಮೂರು ನಿಮಿಷಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. 8.15ರಿಂದ ಮೂರು ನಿಮಿಷಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ.

ಬೆಂಗಳೂರು ಸಂಚಾರ ಮಾರ್ಗ ಬದಲಾವಣೆ
14/01/2014 ರಂದು ಮುಸ್ಲಿಂ ಸಮುದಾಯದವರು ಈದ್-ಮಿಲಾದ್ ಹಬ್ಬವನ್ನು ಆಚರಣೆ ಮಾಡಲಿದ್ದು ಆ ಸಂಬಂಧ ನೃಪತುಂಗ ರಸ್ತೆಯಲ್ಲಿನ ವೈಎಂಸಿಎ ಮೈದಾನಕ್ಕೆ ಹೆಚ್ಚು ಜನರು ಅಲಂಕೃತ ವಾಹನ ಹಾಗೂ ಮೆರವಣಿಗೆ ಮೂಲಕ ಬರಲಿದ್ದಾರೆ. ಆದ್ದರಿಂದ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಜೆಸಿ ರಸ್ತೆ, ಕೆಬಿ ರಸ್ತೆ, ದೇವಾಂಗ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ಕೆಜಿ ರಸ್ತೆ, ಹಜ್ ಕ್ಯಾಂಪ್ ಜಂಕ್ಷನ್, ಬ್ರಾಡವೇ ರಸ್ತೆ, ಕ್ವೀನ್ಸ್ ರಸ್ತೆ, ಮುಂತಾದ ರಸ್ತೆಗಳು ಹೆಚ್ಚು ಸಂಚಾರ ಒತ್ತಡವಿರುತ್ತದೆ. ಆದ್ದರಿಂದ ಕೆಲವೊಂದು ಬದಲಾವಣೆ ಮಾಡಲಾಗಿದೆ. ಬದಲಾವಣೆ ಹೀಗಿದೆ.
* ನಾಗವಾರ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಬರುವ ವಾಹನ ಸಂಚಾರವನ್ನು ನಿರ್ಭಂದಿಸಿ ನಾಗವಾರ ಸಿಗ್ನಲ್ ಬಳಿ ಎಡತಿರುವು ಪಡೆದು ಕೊಂಡು ಹೆಚ್.ಬಿ.ಅರ್. ಲೇಔಟ್ ಮುಖಾಂತರ ಲಿಂಗರಾಜಪುರ ಮತ್ತು ಡೇವಿಸ್ ರಸ್ತೆಗೆ ಸೇರಿ ಅಲ್ಲಿಂದ ಮುಂದೆ ಸಾಗಬಹುದಾಗಿರುತ್ತದೆ.
* ಬಂಬೂ ಬಜಾರ್ ಕಡೆಯಿಂದ ಟ್ಯಾನರಿ ರಸ್ತೆ ನಾಗವಾರ ಕಡೆಗೆ ಹೊಗುವ ವಾಹನ ಸಂಚಾರವನ್ನು ನಿರ್ಭಂದಿಸಿ ಬಂಬೂಬಜಾರ್ ನಿಂದ ನೇತಾಜಿ ರಸ್ತೆ ಮುಖಾಂತರ ಸಂಚರಿಸಿ ಹೆಣ್ಣೂರು ಮುಖ್ಯ ರಸ್ತೆ ಸೇರಿ ಲಿಂಗರಾಜಪುರಕ್ಕೆ ಮುಖಾಂತರ ಹೆಚ್.ಬಿ.ಅರ್. ಲೇಔಟ್‍ಗೆ ಸೇರಿ ಅಲ್ಲಿಂದ ನಾಗವಾರ ಕಡೆಗೆ ತೆರಳಬಹುದು.
* ನೃಪತುಂಗ ರಸ್ತೆಯಲ್ಲಿನ ಸಂಚಾರವನ್ನು ಮದ್ಯಾಹ್ನ 2 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯವಾಗುವ ತನಕ ಸ್ಥಗಿತಗೊಳಿಸಲಾಗುತ್ತದೆ. ನೃಪತುಂಗ ರಸ್ತೆಯಲ್ಲಿ ಕೆ.ಆರ್ ಸರ್ಕಲ್‍ನಿಂದ ಪೊಲೀಸ್ ಕಾರ್ನರ್ ವರೆಗೆ ಸಂಚಾರವನ್ನು ನಿರ್ಬಂಧಿಸಿ, ಎಲ್ಲಾ ಮಾದರಿಯ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಕೆ.ಆರ್ ಸರ್ಕಲ್‍ನಿಂದ ನೃಪತುಂಗ ರಸ್ತೆಯನ್ನು ಬಳಸಿ ಹಾದು ಹೋಗುವ ವಾಹನ ಚಾಲಕರು/ಸವಾರರು ಕೆ.ಆರ್ ವೃತ್ತದಲ್ಲಿ ಕಬ್ಬನ್ ಉದ್ಯಾನವನವನ್ನು ಪ್ರವೇಶಿಸಿ ಸಿದ್ದಲಿಂಗಯ್ಯ ವೃತ್ತ, ಮಲ್ಯ ಆಸ್ಪತ್ರೆ ರಸ್ತೆ, ಹಾಗೂ ಆರ್.ಆರ್.ಎಂ.ಆರ್ ಮೂಲಕ ಮುಂದಕ್ಕೆ ಕೆ.ಆರ್ ಮಾರುಕಟ್ಟೆ, ಜಯನಗರ, ಹೊಸೂರು ರಸ್ತೆ, ಕನಕಪುರ ರಸ್ತೆ, ಬನಶಂಕರಿ ಮುಂತಾದ ಕಡೆ ಸಾಗಬಹುದಾಗಿದೆ.

ನಾಲ್ಕನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಮಷ್ಕರ
ಪಿರಿಯಾಪಟ್ಟಣದ ಕಂಪಲಾಪುರ ಗ್ರಾಮದಲ್ಲಿ ವಿಷ್ಣು ಟೆಕ್ಸ್‌ಟೆಲ್ಸ್ ಎದುರು ಕಾರ್ಮಿಕರು ನಡೆಸುತ್ತಿರುವ ಧರಣಿ 4ನೇ ದಿನಕ್ಕೆ ಕಾಲಿಟ್ಟಿದ್ದು, ಜೆಡಿಎಸ್ ಮತ್ತು ಕರವೇ ಕಾರ್ಮಿಕರ ಧರಣಿಗೆ ಬೆಂಬಲ ನೀಡಿವೆ. ವಿಷ್ಣು ಟೆಕ್ಸ್‌ಟೆಲ್ಸ್‌ನಲ್ಲಿ ನಡೆದ ಮಹಿಳೆಯರಿಬ್ಬರ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಇದನ್ನು ವಿಚಾರಿಸಲು ಬಂದ ಕಾರ್ಖಾನೆಯ ಎಂಡಿ ಎಸ್.ವಿ.ರಾಮಸ್ವಾಮಿ ಯಾವುದೇ ವಿಚಾರಣೆ ನಡೆಸದೆ ಏಕಾಏಕಿ ಕಾರ್ಮಿಕ ಮುಖಂಡ ಎಂ.ಎನ್.ಅನಿಲ್, ಶ್ರೀಕಂಠಾಚಾರಿ, ಕರಿಯಪ್ಪ, ಶಿವರಾಜು ಮತ್ತು ರಾಜೇಶ್ ಎಂಬ 5 ಮಂದಿ ಕಾರ್ಮಿಕರನ್ನು ಅಮಾನತಿನಲ್ಲಿಟ್ಟು ನೋಟಿಸ್ ಜಾರಿಮಾಡಿದರು. ಇದನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸೋಮಶೇಖರ ರೆಡ್ಡಿಗೆ ನೋಟೀಸ್
ಆಂಧ್ರ ಪ್ರದೇಶದ ಕಡಪ ಶಾಸಕ ರಾಮಚಂದ್ರಯ್ಯ ಸಹೋದರನಿಗೆ ಬೆದರಿಕೆಯೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಕರ್ನಾಟಕ ಹಾಲು ಒಕ್ಕೂಟ ಅಧ್ಯಕ್ಷ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರಿಗೆ ಆಂಧ್ರ ಪೊಲೀಸರು ನೋಟೀಸ್ ಕಳುಹಿಸಿದ್ದಾರೆ. ರೆಡ್ಡಿ ಅವರು ಮೂರು ದಿನಗಳ ಹಿಂದೆ ಶಿವಕುಮಾರ್ ಎಂಬವರಿಗೆ ಜೀವ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಲಾಗಿದೆ. ಶಿವಕುಮಾರ್ ಈ ಕುರಿತು ಕಡಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.












Click it and Unblock the Notifications