ಅತೃಪ್ತರ ಹಠಕ್ಕೆ ಮಣಿದ ಕಾಂಗ್ರೆಸ್, ದೆಹಲಿಗೆ ಎಂ.ಬಿ.ಪಾಟೀಲ
Recommended Video

ಬೆಂಗಳೂರು, ಜೂನ್ 08: ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಅತೃಪ್ತ ಶಾಸಕರಿಗೆ ಈ ಸದ್ಯಕ್ಕೆ ಜಯ ದೊರೆತಿದೆ. ಅತೃಪ್ತರ ಮುಖಂಡತ್ವ ವಹಿಸಿರುವ ಎಂ.ಬಿ.ಪಾಟೀಲರಿಗೆ ಹೈಕಮಾಂಡ್ ಬುಲಾವ್ ಹೇಳಿದ್ದು, ಪಾಟೀಲರು ದೆಹಲಿಗೆ ತೆರಳುತ್ತಿದ್ದಾರೆ.
20 ಜನ ಅತೃಪ್ತ ಶಾಸಕರನ್ನು ಒಟ್ಟುಗೂಡಿಸಿಕೊಂಡು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ತೊಡೆತಟ್ಟಿದ್ದ ಎಂ.ಬಿ.ಪಾಟೀಲ ಅವರು ಇದೀಗ ದೆಹಲಿಗೆ ತೆರಳಿದ್ದು, ಅಲ್ಲಿ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್, ವೇಣುಗೋಪಾಲ್ ಅವರೊಂದಿಗೆ ತಮ್ಮ ಅಳಲು ತೋಡಿಕೊಳ್ಳಲಿದ್ದಾರೆ.
ರಾಜ್ಯ ಕೈ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಸಿಎಂ ಕುಮಾರಸ್ವಾಮಿ ಎಲ್ಲರೂ ಸಂಧಾನಕ್ಕೆ ಯತ್ನ ನಡೆಸಿದರಾದರೂ ಯಾರ ಮಾತಿಗೂ ಎಂ.ಬಿ.ಪಾಟೀಲ ಬಗ್ಗದೆ-ಜಗ್ಗದೆ ಉಳಿದಿದ್ದರು.

ಅತೃಪ್ತ ಶಾಸಕರಲ್ಲಿ ಕೆಲವರಿಗಾದರೂ ಸಚಿವ ಸ್ಥಾನ ಹಾಗೂ ತಮಗೆ ಉಪ ಮುಖ್ಯಮಂತ್ರಿ ಸ್ಥಾನದ ಬೇಡಿಕೆಯನ್ನು ಎಂಬಿ ಪಾಟೀಲ ಅವರು ಇಡಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಸರಕಾರದಲ್ಲಿ ನೀರಾವರಿ ಸಚಿವರಾಗಿದ್ದ ಎಂಬಿ ಪಾಟೀಲರು ಮುಂದೆ ಮುಖ್ಯಮಂತ್ರಿಯಾಗುವ ಕನಸನ್ನೂ ಹೊಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಕೆಲವು ಖಾತೆಗಳನ್ನು ಉಳಿಸಿಕೊಂಡಿದ್ದು ಅವುಗಳಲ್ಲಿ ಯಾವುದಾದರೂ ಸ್ಥಾನವನ್ನು ಅತೃಪ್ತ ಗುಂಪಿನ ಶಾಸಕರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.












Click it and Unblock the Notifications