ಭಿನ್ನಮತ ಶಮನವಾಗುತ್ತಿಲ್ಲ, ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರ 6ಕ್ಕೇರುತ್ತಿಲ್ಲ

Recommended Video

      ಎಚ್ ಡಿ ಕುಮಾರಸ್ವಾಮಿ ಸರ್ಕಾರ ಇನ್ನೂ ತೊಳಲಾಟದಲ್ಲೇ ಇದೆ | Oneindia Kannada

      ಸಮ್ಮಿಶ್ರ ಸರಕಾರ ಎನ್ನುವ ಕುಟುಂಬದಲ್ಲಿ ಸಣ್ಣಪುಟ್ಟ ಅಸಮಾಧಾನ ಇರುವುದು ಸಹಜ ಅದನ್ನು ಜನಸಾಮಾನ್ಯರೂ ಅರ್ಥ ಮಾಡಿಕೊಳ್ಳಬಲ್ಲರು. ಆದರೆ, ಆ ಅಸಮಾಧಾನದ ವ್ಯಾಪ್ತಿ ಮಿತಿ ಮೀರಿದರೆ ಅದು ಕಿರಿಕಿರಿ ಆಗಲಾರಂಭಿಸುತ್ತದೆ.

      ಕುಮಾರಸ್ವಾಮಿ ನೇತೃತ್ವದ ಸರಕಾರ ಅಧಿಕಾರ ಬಂದಾಗಿನಿಂದ ಇಂದಿನವರೆಗೂ, ಬರೀ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿಯ ವಿಚಾರದಲ್ಲಿ ಸರಕಾರದ ಎರಡು ಪಾಲುದಾರ ಪಕ್ಷದ ಮುಖಂಡರ ಅಸಮಾಧಾನ, ಆರೋಪ, ಪ್ರತ್ಯಾರೋಪದ್ದೇ ರಗಳೆಗಳು ಆಗಿಹೋಗಿದೆ.

      ಅವರು ಇವರನ್ನು ಬೈಯೋದು, ಇವರು ಅವರ ವಿರುದ್ದ ಆರೋಪಿಸುವುದು. ಕೊನೆಗೆ, ಸಿದ್ದರಾಮಯ್ಯನವರನ್ನು ಭೇಟಿಯಾಗುವುದು, ಪರಮೇಶ್ವರ್ ಎಲ್ಲರನ್ನೂ ಸಮಾಧಾನ ಪಡಿಸುವುದು, ಎರಡು ದಿನಕ್ಕೊಮ್ಮೆ ವೇಣುಗೋಪಾಲ್ ರಾಜ್ಯಕ್ಕೆ ದೌಡಾಯಿಸುವುದು, ಇದೇ ನಡೆಯುತ್ತಿದೆ.

      ಎರಡು ಪಕ್ಷಗಳ ಮುಖಂಡರ ನಡುವಿನ ಬಹಿರಂಗ ಹೇಳಿಕೆಗಳು, ಸರಕಾರ ಇನ್ನೂ ಸರಿಯಾಗಿ ಇನ್ನೂ ಟೇಕ್ ಆಫ್ ಆಗಿಲ್ಲ ಎನ್ನುವ ಭಾವನೆ ಜನರಲ್ಲಿ ಮೂಡುವಂತೆ ಮಾಡುತ್ತಿದೆ. ಜೊತೆಗೆ, ಈ ಸರಕಾರ ಹೆಚ್ಚುದಿನ ಅಸ್ತಿತ್ವದಲ್ಲಿ ಇರದು ಎಂದು ಅನುಮಾನಿಸುವಂತೆ ಎರಡು ಪಕ್ಷಗಳ ಮುಖಂಡರೇ ಮಾಡುತ್ತಿದ್ದಾರೆ. (ಈ ವಿಚಾರದಲ್ಲಿ ಬಿಜೆಪಿ ಏನೂ ಮಾಡಬೇಕಾಗಿಲ್ಲ)

      ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಮನ್ವಯ ಸಮಿತಿ

      ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಮನ್ವಯ ಸಮಿತಿ

      ಎರಡೂ ಪಕ್ಷಗಳ ಸದಸ್ಯರು ಸೌಹಾರ್ದತೆಯಿಂದ ಆಡಳಿತ ನಡೆಸಿಕೊಂಡು ಹೋಗಲಿ ಎಂದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಿದರೆ, ಅದರಲ್ಲೇ ಸಮನ್ವಯದ ಕೊರತೆ ಎದುರಾದ ಹಲವು ಉದಾಹರಣೆಗಳಿವೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸೂಪರ್ ಸಿಎಂ ಎಂದೇ ಹೆಸರಾಗಿರುವ ರೇವಣ್ಣ ನಡುವೆ ಹಲವು ಸುತ್ತಿನ ವಾಕ್ಸಮರಗಳು ನಡೆದಿವೆ. ಮುಂದೆಯೂ ನಡೆಯುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

      ಭಿನ್ನಮತ ಕಮ್ಮಿಯಾಗುವ ಬದಲು, ಹೆಚ್ಚೇ ಆಗಿದೆ

      ಭಿನ್ನಮತ ಕಮ್ಮಿಯಾಗುವ ಬದಲು, ಹೆಚ್ಚೇ ಆಗಿದೆ

      ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಾತಿ ಪ್ರಕ್ರಿಯೆಯ ನಂತರ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಭಿನ್ನಮತ ಕಮ್ಮಿಯಾಗುವ ಬದಲು, ಹೆಚ್ಚೇ ಆಗಿದೆ. ಕಾಂಗ್ರೆಸ್ಸಿನ ಹಲವು ಮುಖಂಡರು, ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಬೀದಿರಂಪ ಮಾಡಬೇಡಿ, ಜೆಡಿಎಸ್ ಜೊತೆ ಮಾತುಕತೆ ನಡೆಸಿಯೇ ಪಟ್ಟಿ ತಯಾರಿಸಿದ್ದು. ನೀವು ಈ ರೀತಿ ಬಹಿರಂಗ ಹೇಳಿಕೆಯನ್ನು ನೀಡುತ್ತಿದ್ದರೆ, ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತದೆ. ಅದು ಮುಂಬರುವ ಚುನಾವಣೆಯಲ್ಲೂ ಪಕ್ಷಕ್ಕೆ ತೊಂದರೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರು ಮನವಿ ಮಾಡಿದರೂ, ಕಾಂಗ್ರೆಸ್ ಮುಖಂಡರು ತಮ್ಮ ಅಸಮಾಧಾನವನ್ನು ಹೊರಹಾಕುತ್ತಲೇ ಇದ್ದಾರೆ.

      ಕೆಲವು ನಿಗಮ ಮಂಡಳಿಯ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ

      ಕೆಲವು ನಿಗಮ ಮಂಡಳಿಯ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ

      ಹೈಕಮಾಂಡ್ ಒಪ್ಪಿಗೆ ನೀಡಿರುವ ಪಟ್ಟಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಆಂಗೀಕರಿಸದೇ, ಅಲ್ಲೂ ಕೆಲವು ನಿಗಮ ಮಂಡಳಿಯ ಮೇಲೆ ಜೆಡಿಎಸ್ ಕಣ್ಣಿಟ್ಟಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿದ್ದಾರೆ. ಈ ವಿಚಾರದಲ್ಲಿ, ದಿನೇಶ್ ಮತ್ತು ರೇವಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ನನಗೆ ಹೇಳೋಕೆ ಬರುವ ಮೊದಲು, ನಿಮ್ಮ ಪಕ್ಷದ ಮುಖಂಡರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಎಂದು ರೇವಣ್ಣ ಗರಂ ಆಗಿದ್ದಾರೆ. ಅವನ್ಯಾರು ನನಗೆ ಹೇಳುವುದಕ್ಕೆ ಎಂದು ಸುಧಾಕರ್ ವಿರುದ್ದವೂ ರೇವಣ್ಣ ಕಿಡಿಕಾರಿದ್ದಾರೆ.

      ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್

      ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್

      ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅಂತೂ, ವ್ಯಂಗ್ಯ ಮಿಶ್ರ ದಾಟಿಯಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ವಿರುದ್ದ ಕಿಡಿಕಾರಿದ್ದಾರೆ. ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಜೆಡಿಎಸ್ ತಮ್ಮ ಕುಟುಂಬದವರಿಗೇ ಇಟ್ಟುಕೊಳ್ಳಲಿ. ಎಲ್ಲವನ್ನೂ ಅಧಿಕಾರಿಗಳೇ ಮಾಡುವುದಾದರೆ, ಸಿಎಂ ಯಾಕೆ ಬೇಕು. ಎಸ್ ಎಸ್ ಎಲ್ ಸಿ ಫೇಲ್ ಆದವರೆಲ್ಲಾ ಎರಡೆರಡು ಹುದ್ದೆಯನ್ನು ಇಟ್ಟುಕೊಂಡಿದ್ದಾರೆಂದು, ಸುಧಾಕರ್ ಸಹೋದರರ ವಿರುದ್ದ ಕಿಡಿಕಾರಿದ್ದಾರೆ.

      ಕುಮಾರಸ್ವಾಮಿಯವರ ಬಳಿ ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ

      ಕುಮಾರಸ್ವಾಮಿಯವರ ಬಳಿ ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ

      ಇನ್ನು, ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ನಿಗಮ ಮಂಡಳಿಯ ಕೆಲವು ಹುದ್ದೆಗಳಿಗೆ ಮುಖ್ಯಮಂತ್ರಿ ಯಾಕೆ ಸಹಿ ಹಾಕಿಲ್ಲ ಎಂದು ಕೇಳುತ್ತೇನೆ. ಯಾಕೆ ಒಪ್ಪಿಗೆ ಕೊಟ್ಟಿಲ್ಲ ಎಂದು ಕುಮಾರಸ್ವಾಮಿಯವರ ಬಳಿ ಮಾತನಾಡುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮಂಡ್ಯದಲ್ಲಿ ಸಭೆ ಸೇರಿದ್ದ ಮಾಜಿ ಕಾಂಗ್ರೆಸ್ ಮುಖಂಡರೂ, ಜೆಡಿಎಸ್ ವಿರುದ್ದ ಹರಿಹಾಯ್ದಿದ್ದರು.

      ನಿಮ್ಮ ಸಮಸ್ಯೆಗಳನ್ನು ನೀವು ಮೊದಲು ಪರಿಹರಿಸಿಕೊಳ್ಳಿ

      ನಿಮ್ಮ ಸಮಸ್ಯೆಗಳನ್ನು ನೀವು ಮೊದಲು ಪರಿಹರಿಸಿಕೊಳ್ಳಿ

      ಇದನ್ನೆಲ್ಲಾ ಗಮನಿಸುತ್ತಿರುವ ದೇವೇಗೌಡ, ನಿಮ್ಮ ಸಮಸ್ಯೆಗಳನ್ನು ನೀವು ಮೊದಲು ಪರಿಹರಿಸಿಕೊಳ್ಳಿ ಮತ್ತು ಅದಕ್ಕೆ ನಮ್ಮನ್ನು ಜವಾಬ್ದಾರಿಯನ್ನಾಗಿ ಮಾಡಬೇಡಿ ಎಂದು ಕಾಂಗ್ರೆಸ್ಸಿನವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಮಗೇನು ಸಿಗಬೇಕು, ಅದು ಸಿಗಲೇಬೇಕು, ಇಲ್ಲಾಂದ್ರೆ ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ ಎಂದು ರೇವಣ್ಣ, ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ, ಇವರು ಯಾವ ಪುರುಷಾರ್ಧಕ್ಕಾಗಿ ಸರಕಾರ ನಡೆಸುತ್ತಿದ್ದಾರಾ ದೇವರೇ ಬಲ್ಲ...

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+