ಪಠ್ಯದಲ್ಲಿ ಕೊನೆಗೆ ಉಳಿಯೋದು ಹೆಡಗೇವಾರ್, ಸೂಲಿಬೆಲೆ ಪಾಠ ಮಾತ್ರನಾ?
ಬೆಂಗಳೂರು, ಮೇ31: ಪಠ್ಯಪುಸ್ತಕ ವಿವಾದ, ರಾಷ್ಟ್ರಕವಿ ಕುವೆಂಪುರವರಿಗೆ ಅವಮಾನ ಕುರಿತು ಲೇಖಕರು ಬೇಸರಗೊಂಡಿದ್ದಾರೆ. ತಮ್ಮ ಅಸಮಧಾನವನ್ನು ಹೊರಹಾಕಲು ಪಠ್ಯಪುಸ್ತಕದಲ್ಲಿ ಅಳವಡಿಸಿರುವ ತಮ್ಮ ಪಾಠಗಳನ್ನು ಬೋಧಿಸದಂತೆ ಪಠ್ಯದಿಂದ ತೆಗೆಯುವಂತೆ ಒತ್ತಾಯುತ್ತಿದ್ದಾರೆ. ಒಬ್ಬಬ್ಬರೇ ಲೇಖಕರು ತಮ್ಮ ಪಾಠವನ್ನು ತೆಗೆಯವಂತೆ ಸೂಚಿಸುತ್ತಿದ್ದರೇ ಪಾಠದಲ್ಲಿ ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆಯ ಪಾಠ ಮಾತ್ರ ಉಳಿಯುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಪ್ರಸಕ್ತ ವರ್ಷದಲ್ಲಿ ಪರಿಷ್ಕೃತ ಪಠ್ಯಪುಸ್ತಕದಿಂದ ತಮ್ಮ ಕತೆಯನ್ನು ತೆಗೆದು ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ ಬೊಳುವಾರು ಮಹಮದ್ ಕುಂಞಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. "ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಲಾಗುತ್ತಿದೆ. ಆ ಮಟ್ಟಕ್ಕೆ ಇಳಿದು ಉತ್ತರವಾಗಲೀ, ಪ್ರತಿಕ್ರಿಯೆ ಆಗಲೀ ನೀಡುವ ಮನುಷ್ಯ ನಾನಲ್ಲ. ಕರ್ನಾಟಕದ ಜನ ನೋಡಿಕೊಳ್ಳುತ್ತಾರೆ. ಬೇಕಾದಂತಹ ಉತ್ತರವನ್ನು ಜನರೇ ನೀಡುತ್ತಾರೆ" ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. ಉಳಿದಂತೆ ತಾವು ಒದಗಿಸಿರುವ ಪಠ್ಯವನ್ನು ತೆಗೆಯುವಂತೆ ಪತ್ರ ಬರೆದಿರುವ ಲೇಖಕರ ಯಾರು ಎಂಬ ವಿವರ ಮುಂದಿದೆ...

ಬೊಳುವಾರು ಮಹಮದ್ ಕುಂಞಿ
ಪ್ರಸಕ್ತ ಸಿರಿ ಕನ್ನಡ-ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ (ಪರಿಷ್ಕೃತ) 5ನೆಯ ತರಗತಿ ಪುಸ್ತಕದ 24 ರಿಂದ 31 ನೆಯ ( ಒಟ್ಟು 8 ಪುಟಗಳು ) ಪುಟದವರೆಗೆ ಹರಡಿಕೊಂಡಿರುವ, ‘ಸುಳ್ಳು ಹೇಳಬಾರದು' ಎಂಬ ಹೆಸರಿನ ನನ್ನ ಕತೆಯೊಂದರ ಆಶಯಗಳು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತಗೊಂಡಿರುವ/ಗೊಳ್ಳಲಿರುವ ಇತರ ಕೆಲವು ಪಠ್ಯಗಳ ಆಶಯಗಳೊಂದಿಗೆ ಸರಿಯಾಗಿ ಹೊಂದಿಕೆಯಾಗದಿರುವ ಸಾಧ್ಯತೆಗಳಿರುವುದರಿಂದ, ನಮ್ಮ ಪುಟ್ಟ ಮಕ್ಕಳು ಗೊಂದಲಕ್ಕೊಳಗಾಗುವ ಸಾಧ್ಯತೆಗಳುಂಟು.
ಆದ್ದರಿಂದ, ದಯವಿಟ್ಟು ‘ಸುಳ್ಳು ಹೇಳಬಾರದು' ಎಂಬ ಈ ನನ್ನ ಕತೆಯನ್ನು ಕಿತ್ತು ಹಾಕಿ, ಪರಿಷ್ಕೃತ ಪಠ್ಯ ಕ್ರಮದ ಆಶಯಗಳಿಗೆ ಹೊಂದಿಕೊಳ್ಳುವ ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ ಬೊಳುವಾರು ಮಹಮದ್ ಕುಂಞಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ನಿವೃತ್ತ ತರ್ಕಶಾಸ್ತ್ರ ಉಪನ್ಯಾಸಕರಾದ ಚಂದ್ರಶೇಖರ್ ತಾಳ್ಯ
"ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವುದು ಶಿಕ್ಷಣ ಕೇತ್ರದ ಮೇಲಿನ ಸಾಂಸ್ಕೃತಿಕ ಹಲ್ಲೆ ಮಿತಿ ಮೀರುತ್ತಿದೆ. ಪಠ್ಯದ ಮೇಲೂ ಅದರ ಕರಿನೆರಳು ಬೀಳುತ್ತಿದೆ. ಅಸಂವಿಧಾನಿಕ ನಿರ್ಧಾರಗಳಿಂದ ಇಡೀ ಶೈಕ್ಷಣಿಕ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಈ ಅನೈತಿಕ ನಡೆ ನನ್ನಂತ ಲೇಖಕರನ್ನು ಅಧೀರನನ್ನಾಗಿ ಮಾಡುತ್ತದೆ. ಇದು ಕನ್ನಡ ಪರಂಪರೆಯನ್ನು ಕಬ್ಜಗೊಳಿಸುವ ನಡೆ. ಪಠ್ಯ ಪರಿಷ್ಕರಣೆಯ ನೆಪದಲ್ಲಿ ನಡೆಯುತ್ತಿರುವ ಈ ಸಂಸ್ಕೃತಿಯ ತಿರುವು ನಮ್ಮ ಪರಂಪರಾಗತ ಸಂಸ್ಕೃತಿಯನ್ನು ವಿರೂಪಗೊಳಿಸುವುದು. ಇದನ್ನು ತಾವು ಗಮನಿಸಬೇಕು ಎಂಬುದು ನನ್ನ ಆಗ್ರಹ. ಈ ಹಿನ್ನೆಲೆಯಲ್ಲಿ ನನ್ನ ಒಂದು ಕವಿತೆ ಒಂದು ಸೋಜಿಗದ ಪದ್ಯ ಆರನೇ ತರಗತಿಯ ದ್ವಿತೀಯ ಭಾಷಾ ಪಠ್ಯವಾಗಿ ಸೇರಿಸಿದೆ. ಅದನ್ನು ಪಠ್ಯವಾಗಿ ಬೋಧಿಸಲು ನನ್ನ ಅನುಮತಿಯನ್ನು ವಾಪಸ್ ಪಡೆಯುತ್ತಿದ್ದೇನೆ'' ಎಂದು ನಿವೃತ್ತ ತರ್ಕಶಾಸ್ತ್ರ ಉಪನ್ಯಾಸಕರಾದ ಚಂದ್ರಶೇಖರ್ ತಾಳ್ಯ ಶಿಕ್ಷಣ ಸಚಿವರಿಗೆ ಪತ್ರದ ಮುಖೇನ ತಿಳಿಸಿದ್ದಾರೆ.

ಲೇಖಕಿ ರೂಪ ಹಾಸನ
ಶಾಲಾ ಪಠ್ಯಪುಸ್ತಕ ಆಳುವ ಪಕ್ಷದ ತತ್ವ ಸಿದ್ದಾಂತಕ್ಕೆ ಅನುಗುಣವಾಗಿ ಮರು ಪರಿಷ್ಕರಣೆಗೊಂಡಿರುವುದು ಖೇದನೀಯ. ಅದನ್ನು ಈಗಾಗಲೇ ಕೆಲವು ಹಿರಿಯ ಗೌರವಾನ್ವಿತ ಸಾಹಿತಿಗಳು ಖಂಡಿಸಿ, ಪಠ್ಯಕ್ಕೆ ನೀಡದ್ದ ಸಮ್ಮತಿಯನ್ನು ಹಿಂಪಡೆದಿದ್ದಾರೆ.
ಮಕ್ಕಳು ಶೈಕ್ಷಣಿಕ ಹಕ್ಕುಗಳ ರಕ್ಷಣೆಗಾಗಿ ಕಳೆದೆರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ನಾನು ಪರಿಷ್ಕೃತ ಶಾಲಾ ಪಠ್ಯಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅವು ಮುಕ್ಯವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ನೀತಿಯ ನಿಯಮಗಳಿಗೆ ಅನುಗುಣವಾಗಿ ರೂಪಿತವಾಗಿಲ್ಲದಿರುವುದು ಎದ್ದು ಕಾಣುತ್ತಿದೆ. ಈ ಚೌಕಟ್ಟು ಸಂವಿಧಾನದ ಆಶಕ್ಕೆ ಅನುಗುಣಾಗಿರಬೇಕು. ಮರು ಪರಿಷ್ಕರಣೆ ಸಂವಿಧಾನಿಕ ಚೌಕಟ್ಟಿನಲ್ಲಿ ಇಲ್ಲದಿರುವುದು ಆತಂಕಕಾರಿಯಾಗಿದೆ.
ಈ ಕಾರಣದಿಂದಾಗಿ ಒಂಬತ್ತನೇ ತೃತೀಯ ಭಾಷೆ ಕನ್ನಡ ಪುಸ್ತಕ, ನುಡಿಗನ್ನಡ ಪಠ್ಯದಲ್ಲಿ ಅಳವಡಿಕೆಯಾಗಿದ್ದ ಅಮ್ಮನಾಗುವುದೆಂದರೆ ಕವಿತೆಯನ್ನು ಬೋಧಿಸಲು ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಈ ಮೂಲಕ ಹಿಂಪಡೆಯುತ್ತಿದ್ದು ಇದನ್ನು ನಿಮ್ಮಗಮನಕ್ಕೆ ತರುತ್ತಿದ್ದೇನೆ ಎಂದು ಲೇಖಕಿ ರೂಪ ಹಾಸನರವರು ಶಿಕ್ಷಣ ಸಚಿವರಿಗೆ ಪತ್ರ ಮೂಖಾಂತರ ತಿಳಿಸಿದ್ದಾರೆ.

ಪಠ್ಯಸಮಿತಿಯ ಅಧ್ಯಕ್ಷರಾಗಿದ್ದ ಮಧುರವರ ಪತ್ರ
ಕರ್ನಾಟಕ ರಾಜ್ಯದ ಒಂಬತ್ತನೇ ತರಗತಿಯ ದ್ವಿತೀಯ ಭಾಷೆ ಕನ್ನ ಪಠ್ಯ ಪುಸ್ತಕ ಅಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸಿದ್ದೆನು, ಈಗಲೂ ನನ್ನ ಅಧ್ಯಕ್ಷತೆಯಲ್ಲಿ ಅದೇ ಪಠ್ಯ ಮುಂದುವರೆದಿದೆ ಎಂದು ತಿಳಿದು ಬಂತು ಕರ್ನಾಟಕ ನಾಡು ನುಡಿ ಸಂಸ್ಕೃತಿಯ ಅಂತಃಸಾಕ್ಷಿಯಂತಿರುವ ಕುವೆಂಪುರವರನ್ನು ಈಗಿನ ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರು ಲಘುವಾಗಿ ಗೇಲಿ ಮಾಡಿದ್ದಕ್ಕೆ ಮನನೊಂದು ಹಾಗೂ ಪ್ರತಿಭಟಿಸುತ್ತಾ , ನಾನು ತಿಳಿ ಕನ್ನಡ, ದ್ವಿತೀಯ ಭಾಷೆ ಕನ್ನಡ ಒಂಬತ್ತನೇ ತರಗತಿ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುತ್ತೇನೆ. ಪಠ್ಯದಲ್ಲಿ ನನ್ನ ಹೆಸರು ಹಾಗೂ ನಾನು ಬರೆದ ಪಾಠ ಮಾಡುವ ಮುನ್ನ ಪ್ರಸ್ತಾವನೆಯನ್ನು ಸೇರಿಸಬಾರದಾಗಿ ವಿನಮ್ರ ವಿನಂತಿಯನ್ನು ಮಾಡುತ್ತೇನೆ ಎಂದು ಈ ಹಿಂದೆ ಪಠ್ಯಸಮಿತಿಯ ಅಧ್ಯಕ್ಷರಾಗಿದ್ದ ಈಗಲೂ ದ್ವಿತೀಯ ಭಾಷೆ ಕನ್ನಡದ ಸಮಿತಿಯ ಅಧ್ಯಕ್ಷರಾಗಿದ್ದ ಮಧುರವರು ಖಾರವಾಗಿ ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆದಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ, ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ಮೇಲೆನ ಅಸಮಾಧಾನದ ಹಿನ್ನೆಲೆಯಲ್ಲಿ ಒಬ್ಬೋಬ್ಬರೇ ಲೇಖಕರು ತಮ್ಮ ಲೇಖನವನ್ನು ಪಠ್ಯದಿಂದ ತೆಗೆಯುವಂತೆ ಆಗ್ರಹಿಸುತ್ತಿದ್ದಾರೆ.












Click it and Unblock the Notifications