ಅನರ್ಹ ಶಾಸಕರು ಬಿಜೆಪಿ ಸೇರಲು ಮುಹೂರ್ತ ನಿಗದಿ
ಬೆಂಗಳೂರು, ನವೆಂಬರ್ 13 : ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ರಾಜ್ಯ ರಾಜಕೀಯದ ಲೆಕ್ಕಾಚಾರವನ್ನು ಬದಲಾವಣೆ ಮಾಡಿದೆ. ಅನರ್ಹ ಶಾಸಕರು ಬಿಜೆಪಿ ಸೇರಲು ಮುಹೂರ್ತ ನಿಗದಿಯಾಗಿದೆ.
ಬುಧವಾರ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅನರ್ಹ ಶಾಸಕರು ದೆಹಲಿಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಭೇಟಿ ಮಾಡಿದರು. ಸಿ. ಪಿ. ಯೋಗೇಶ್ವರ ಜೊತೆ ಸಂತೋಷ್ ಭೇಟಿ ಮಾಡಿದ ಶಾಸಕರು ಪಕ್ಷ ಸೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, "ನವೆಂಬರ್ 14ರ ಗುರುವಾರ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಕಚೇರಿಯಲ್ಲಿ ಬಿಜೆಪಿ ಸೇರಲಿದ್ದೇವೆ" ಎಂದು ಹೇಳಿದರು. ಇಂದು ಸಂಜೆ ಎಲ್ಲಾ ಶಾಸಕರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.
"ನಮ್ಮ ರಾಜೀನಾಮೆಯನ್ನು ಸ್ಫೀಕರ್ ಅಂಗೀಕರಿಸಬೇಕಿತ್ತು ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೆ. ಸುಪ್ರೀಂಕೋರ್ಟ್ ನಮ್ಮ ಪರವಾಗಿ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ" ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಚುನಾವಣಾ ಆಯೋಗ 15 ಕ್ಷೇತ್ರಗಳ ಉಪ ಚುನಾವಣೆಗೆ ಈಗಾಗಲೇ ಅಧಿಸೂಚನೆ ಪ್ರಕಟ ಮಾಡಿದೆ. ನಾಮತ್ರಗಳನ್ನು ಸಲ್ಲಿಕೆ ಮಾಡಲು ನವೆಂಬರ್ 18 ಕೊನೆಯ ದಿನವಾಗಿದೆ. ಅನರ್ಹ ಶಾಸಕರು ಬಿಜೆಪಿ ಸೇರಿ ಅಷ್ಟರೊಳಗೆ ನಾಮಪತ್ರ ಸಲ್ಲಿಸಬೇಕಾಗಿದೆ.
17 ಅನರ್ಹ ಶಾಸಕರ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಎಲ್ಲಾ ಶಾಸಕರಿಗೂ ಉಪ ಚುನಾವಣೆ ಟಿಕೆಟ್ ಸಿಗಲಿದೆಯೇ? ಕಾದು ನೋಡಬೇಕು. ಹಲವು ಕ್ಷೇತ್ರಗಳಲ್ಲಿ ಅನರ್ಹರು ಬಿಜೆಪಿಗೆ ಸೇರುವುದಕ್ಕೆ ವಿರೋಧ ವ್ಯಕ್ತವಾಗಿದೆ.












Click it and Unblock the Notifications