ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ; ಹಲವು ಹೊಸ ಕ್ರಮಗಳು
ಬೆಂಗಳೂರು, ಆಗಸ್ಟ್ 10; ಕರ್ನಾಟಕ ಕಂದಾಯ ಇಲಾಖೆಯಲ್ಲಿ ಕಡತಗಳು ಮತ್ತು ಪತ್ರಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲಾಖೆಯ ಸಚಿವರು ಕೆಲವು ಅಧಿಕಾರಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಅಧಿಕಾರಿಗಳಿಗೆ ಹಂಚಿಕೆ ಮಾಡುವುದು ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಆದೇಶವೊಂದನ್ನು ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ರಾಜೇಂದರ್ ಕುಮಾರ್ ಕಟಾರಿಯಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು 1977ರ ನಿಯಮ 6(2), 30(2) &(3) ಸಂಬಂಧಿಸಿದಂತೆ ಅಧಿಕಾರಿ ಪ್ರತ್ಯಾಯೋಜಿಸಲು ಈ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಾವಳಿಗಳು 1977ರ ನಿಯಮ 6(2)ರ ಮತ್ತು 30(2)(3)ರ ಹಾಗೂ 76(1) & (2) ರನ್ವಯ ಅನುಸಾರ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವನೆ/ ಪ್ರಸ್ತಾಪಗಳಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಮತ್ತು ಇತರೆ ಅಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿ ಆದೇಶಿಸಲಾಗಿದೆ.
ಈ ಅಧಿಕಾರ ಪತ್ಯಾಯೋಜನೆಯನಾ ಆದೇಶದನ್ವಯ ಕಡತಗಳನ್ನು ಪರಿಶೀಲಿಸಿ ಅನುಮೋದನೆಗೆ ಮಂಡಿಸಲು ಆದೇಶಿಸಿದೆ. ಕೆಲವು ನಮೂದಿಸಿರುವ ವಿಷಯಗಳಿಗೆ ಸಂಬಂಧಪಟ್ಟ ಕಡತಗಳನ್ನು ಕಂದಾಯ ಸಚಿವರಿಗೆ ಸಲ್ಲಿಸುವುದು. ಕೆಲವು ವಿಷಯಗಳಿಗೆ ಸಂಬಂಧಿಸಿದ ಕಡತಗಳನ್ನು ವಿಲೇ ಮಾಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ, ಉಪಕಾರ್ಯದರ್ಶಿ ಮತ್ತು ಅಧೀನ ಕಾರ್ಯದರ್ಶಿಗಳಿಗೆ ಅಧಿಕಾರವನ್ನು ಪತ್ಯಾಯೋಜಿಸಿದೆ ಎಂದು ಹೇಳಿದೆ.
ಅಧಿಕಾರಗಳನ್ನು ನಿಯಮಗಳಂತೆ ಅಗತ್ಯವಿದ್ದಲ್ಲಿ ಇತರೆ ಇಲಾಖೆಗಳ ಸಮಾಲೋಚನೆ ಅಥವಾ ಅನುಮೋದನೆ ಪಡೆದು ನಿರ್ಧರಿಸುವುದು ಎಂದು ತಿಳಿಸಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕಂದಾಯ ಸಚಿವರಿಗೆ ಸಲ್ಲಿಸಬೇಕಾದ ಪ್ರಸ್ತಾವನೆಗಳು ಹೀಗಿವೆ.
ಪ್ರಸ್ತಾವನೆಗಳ ವಿವರಗಳು
* ಕಂದಾಯ ಇಲಾಖೆಯ ಗ್ರೂಪ್ 'ಎ' (ಸಹಾಯಕ ಆಯುಕ್ತರನ್ನು ಹೊರತು ಪಡಿಸಿ) ಮತ್ತು ಗ್ರೂಪ್ 'ಬಿ' ಅಧಿಕಾರಿಗಳ ಇಲಾಖಾ ವಿಚಾರಣೆ, ಲೋಕಾಯುಕ್ತ ಪ್ರಕರಣಗಳು/ ಮುಂಬಡ್ತಿ/ ವರ್ಗಾವಣೆ/ ದಂಡನೆ ವಿಧಿಸುವ/ ಮೇಲ್ಮನವಿ ಪ್ರಸ್ತಾವನೆಗಳು ಹಾಗೂ ಇತರೆ ಸೇವಾ ವಿಷಯಗಳು.
* ಕಂದಾಯ ಇಲಾಖೆಯ ವ್ಯಾಪ್ತಿಯಡಿ ಬರುವ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಗಳು. ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಅನ್ಯ ಇಲಾಖೆಗಳಿಗೆ 5 ವರ್ಷಗಳ ನಂತರದ ಅವಧಿಗೆ ನಿಯೋಜಿಸುವ ಪ್ರಸ್ತಾವನೆಗಳು.
* ಕಂದಾಯ ಇಲಾಖೆಯಡಿ ಬರುವ ನಿಗಮ ಮಂಡಳಿ/ ಪ್ರಾಧಿಕಾರಗಳಿಗೆ, ಆಯುಕ್ತರ ನೇಮಕಾತಿ/ ನಾಮ ನಿರ್ದೇಶನ ಸದಸ್ಯರ ನೇಮಕಾತಿ/ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಗಳು. ನಿಗಮ/ ಮಂಡಳಿ/ ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುವುದು.
* ತಹಶೀಲ್ದಾರ್ ಗ್ರೇಡ್-1 ವೃಂದದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನು ಪರಭಾರೆ ನಿಷೇಧ) ಅಧಿನಿಯಮ 1978ರಡಿ 01 ಎಕರೆಗೆ ಮೀರಿದ ಜಮೀನುಗಳನ್ನು ಮಾರಾಟ ಮಾಡಲು ಅನುಮತಿ ನೀಡುವ ಪ್ರಸ್ತಾವನೆಗಳು. ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ನಿಯಮ 28(ಎ) ಬಿಟ್ಟುಕೊಟ್ಟ ಭೂಮಿಗೆ ಬದಲಾಗಿ 01 ಎಕರೆ ಮೀರಿದ ಭೂಮಿಯ ಮಂಜೂರಾತಿ ಪ್ರಸ್ತಾವನೆಗಳು.
* ಖಾಸಗಿ ವ್ಯಕ್ತಿಗಳಿಗೆ/ ಸಂಘ ಸಂಸ್ಥೆಗಳಿಗೆ ಭೂ ಮಂಜೂರಾತಿ, ಭೂ ಬಂಧಿತ 'ಬಿ' ಖರಾಬು ಜಮೀನುಗಳ ಮಂಜೂರಾತಿ, ಸರ್ಕಾರಿ ಜಮೀನುಗಳ ಹರಾಜು, ಗುತ್ತಿಗೆ ಜಮೀನಿನ ಖಾಯಂ ಮಂಜೂರಾತಿ ಪ್ರಸ್ತಾವನೆಗಳು. ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ ಕಲಂ 109ರಡಿ ಅನುಮತಿ ನೀಡಲಾಗುವ ಎಲ್ಲಾ ಪ್ರಸ್ತಾವನೆಗಳು. ಸರ್ಕಾರದ ವಿವಿಧ ಉದ್ದೇಶಗಳಿಗೆ 05 ಎಕರೆಗೆ ಮೀರಿದ ಜಮೀನುಗಳನ್ನು ಮಂಜೂರು ಮಾಡುವ ಪ್ರಸ್ತಾವನೆಯಗಳನ್ನು ಒಳಗೊಂಡಂತೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 68ರಡಿ ಸಾರ್ವಜನಿಕ ಹಕ್ಕನ್ನು ವಿರಹಿತಗೊಳಿಸುವ ಪ್ರಸ್ತಾವನೆಗಳು.
* ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರು, ಸದಸ್ಯರು ಮತ್ತು ನ್ಯಾಯಿಕ ಸದಸ್ಯರ ನೇಮಕಾತಿ. ಬಗರ್‌ಹುಕುಂ ಸಮಿತಿಗಳ ಹಾಗೂ ಭೂ ನ್ಯಾಯ ಮಂಡಳಿಯ ರಚನೆಗೆ ಸಂಬಂಧಿದ ಎಲ್ಲಾ ಪ್ರಸ್ತಾವನೆಗಳು. ಸಾಮಾಜಿಕ ಪರಿಣಾಮದ ಅಧ್ಯಯನದಿಂದ ವಿನಾಯಿತಿ ನೀಡುವ ಪ್ರಸ್ತಾವನೆಗಳು (Social Impact Assessment). ಭೂಸ್ವಾಧೀನ ಅಧಿನಿಯಮ 2013ರ ಕಲಂ 10(ಎ)ರಡಿ SIA ಸಾಮಾಜಿಕ ಪರಿಣಾಮ ನಿರ್ಧರಣಾ ಅಧ್ಯಯನ ವಿನಾಯಿತಿ ನೀಡುವ ಪ್ರಸ್ತಾವನೆಗಳು.
ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ; ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಲಾಖೆಯಲ್ಲಿ ಆಡಳಿತ ಚುರುಕುಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಿ. ಇ-ಆಫೀಸ್ ಅನುಷ್ಠಾನಗೊಳಿಸಬೇಕು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಯಿಂದ ಆಗಸ್ಟ್ 15ರಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಬರುವ ಪತ್ರ ಸ್ವೀಕರಿಸುವುದಿಲ್ಲ ಎಂದು ಸಚಿವರು ಈಗಾಗಲೇ ಸೂಚನೆ ನೀಡಿದ್ದಾರೆ.
ಒಂದು ಪ್ರಕರಣದಲ್ಲಿ ಗ್ರಾಮ ಪಂಚಾಯತಿಯ ಸ್ವಚ್ಛತಾ ಸಂಕೀರ್ಣಕ್ಕೆ ಜಮೀನು ನೀಡಲು ಎರಡು ವರ್ಷ ಬೇಕೆ?. ಮೊನ್ನೆ ಈ ಕಡತ ಇ-ಆಫೀಸ್‌ನಲ್ಲಿ ನನ್ನ ಲಾಗಿನ್‌ಗೆ ಬಂದಾಗ 2 ದಿನದಲ್ಲಿ ವಿಲೇವಾರಿ ಮಾಡಿದ್ದೇನೆ.
ಇ-ಆಫೀಸ್‌ನಿಂದಾಗಿ ಸಹಜವಾಗಿ ಕಾರ್ಯ ದಕ್ಷತೆ ಹೆಚ್ಚಲಿದೆ. ಯಾವುದೇ ಸ್ಥಳದಿಂದಲೂ ನೀವು ಕಡತ ವಿಲೇವಾರಿ ಮಾಡಬಹುದಾಗಿದೆ. ಸ್ವತ ನಾನು ಇ-ಆಫೀಸ್ ಮೂಲಕ ಕಡತ ವಿಲೇವಾರಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications