Operation Hasta: ಬಿಜೆಪಿಯ ಅತೃಪ್ತ ಮುಖಂಡರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ- ಲಕ್ಷ್ಮಣ ಸವದಿ
ಬೆಂಗಳೂರು ನವೆಂಬರ್ 20: ಆಗಾಗ ಕೈ ನಾಯಕರಿಂದ ಬರುವ ಆಪರೇಷನ್ ಹಸ್ತದ ಮಾತುಕತೆ ರಾಜ್ಯ ರಾಜಕೀಯದಲ್ಲಿ ಸಂಚಲವನ್ನೇ ಮೂಡಿಸುತ್ತವೆ. ಈ ಬಗ್ಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತನಾಡಿದ್ದು ಮುಂಬರುವ ಚುನಾವಣೆಯ ಬಗ್ಗೆ ಕುತೂಹಲ ಮೂಡಿಸಿದೆ. ಬಿಜೆಪಿಯ ಅತೃಪ್ತ ಮುಖಂಡರು ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಲವು ಮುಖಂಡರು ಸಂಪರ್ಕದಲ್ಲಿ ಇದ್ದು, ಅವರು ಪಕ್ಷಕ್ಕೆ ಬಂದಮೇಲೆ ಸ್ಥಾನಮಾನ ಬಗ್ಗೆ ಚಿಂತನೆ ಮಾಡಬೇಕು ಎಂದಿದ್ದಾರೆ. ಜೊತೆಗೆ ನಮ್ಮ ಪಕ್ಷದವರ ಸಹಮತವನ್ನು ಪಡೆದುಕೊಂಡು ಚರ್ಚೆ ಮಾಡ್ತೀವಿ. ಬಿಜೆಪಿಯಿಂದ ಬಂದವರಿಗೆ ಗೊಂದಲ ಹಾಗೂ ಅನ್ಯಾಯ ಆಗಬಾರದು. ಆ ನಿಟ್ಟಿನಲ್ಲಿ ಆಯಾ ಕ್ಷೇತ್ರದ ನಮ್ಮ ಮುಖಂಡರ ಜೊತೆ ಚರ್ಚಿಸುತ್ತೇವೆ ಎಂದಿದ್ದಾರೆ. ಇದರೊಂದಿಗೆ 'ಸ್ವಇಚ್ಛೆಯಿಂದ ಬರುವವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು' ಎಂದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಕೆಲವು ಶಾಸಕರು ಬೇಸರಗೊಂಡಿದ್ದಾರೆ. ಅಲ್ಲದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ ಕಾರಣಕ್ಕಾಗಿ ಕೆಲವರು ಪಕ್ಷದ ನಾಯಕರ ವಿರುದ್ಧ ಅಸಮಧಾನಗೊಂಡಿದ್ದಾರೆ. ಇವರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ.
ಇದಲ್ಲದೆ ಡಿಸಿಎಂ ಡಿಕೆ ಶಿವಕುಮಾರ್ ಕೂಡ 42 ಮಂದಿ ಬಿಜೆಪಿ ಹಾಗೂ ದಳ ಮುಖಂಡರು ನಮ್ಮ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಈಗಾಗಲೇ ಹೇಳಿಕೊಂಡಿದ್ದಾರೆ. 135 ಸ್ಥಾನಗಳನ್ನು ವಿಧಾನಸಭೆ ಚುನಾವಣೆಯಲ್ಲಿ ಗಳಿಸಿರುವ ಕಾಮಗ್ರೆಸ್ ಮತ್ತೆ ಆಪರೇಷನ್ ಹಸ್ತಕ್ಕೆ ಕೈಹಾಕಿದರೆ, ಇತ್ತ ಬಿಜೆಪಿಯೂ ಸುಮ್ಮನೆ ಇರುವಂತೆ ಕಾಣಿಸುತ್ತಿಲ್ಲ.
ಈ ಹಿಂದೆಯೂ ಬಿಜೆಪಿ ಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಒಡೆದು ಆಪರೇಷನ್ ಕಮಲದ ಮೂಲಕ ಅಧಿಕಾರದ ಗದ್ದುಗೆಯನ್ನು ಹಿಡಿದಿತ್ತು. ಈಗಲೂ ಬಿಜೆಪಿ ಇದರ ಹೊರತಾಗಿಲ್ಲ ಎನ್ನುವ ಸುಳಿವು ಆಗಾಗ ಸಿಗುತ್ತಲೇ ಇರುತ್ತದೆ. ಬಿಜೆಪಿಯ ಒಂದು ಒಂದು ತಂಡ ಆಪರೇಷನ್ ಕಮಲಕ್ಕೆ ತೆರೆಮರೆಯಲ್ಲಿ ವ್ಯವಸ್ಥಿತ ಪ್ರಯತ್ನ ನಡೆಸುತ್ತಿದೆ. ಆದರೆ ಬಹಿರಂಗವಾಗಿ ಈ ಬಗ್ಗೆ ಯಾವ ನಾಯಕರೂ ಹೇಳಿಕೆಯನ್ನು ನೀಡಿಲ್ಲ.
ಈ ತಂಡದಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೂಡ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ವಿದೇಶಕ್ಕೆ ಹಾರಿರುವ ಸತೀಶ್ ಜಾರಕಿಹೊಳಿ ಅವರ ಸುತ್ತ ಸಾಕಷ್ಟು ಅನುಮಾನಗಳು ಸೃಷ್ಟಿಯಾಗಿವೆ. ಇನ್ನೂ ಕಾಂಗ್ರೆಸ್ ಪಕ್ಷದಲ್ಲಿರುವ ಭಿನ್ನಮತೀಯ ಚಟುವಟಿಕೆಯಿಂದ ಅಸಮಧಾನಗೊಂಡಿರುವ ಕೆಲವು ಶಾಸಕರನ್ನು ಇವರೆಲ್ಲಾ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ.
ಹೀಗೆ ಆಪರೇಷನ್ ಆತಂಕ ಸೃಷ್ಟಿಸುತ್ತಿರುವ ಬಿಜೆಪಿಗೂ ಬಿಸಿ ಮುಟ್ಟಿಸಲು ಕಾಂಗ್ರೆಸ್ ಸಜ್ಜಾಗಿ ಕುಳಿತಂತೆ ಕಾಣುತ್ತಿದೆ. ಬಿಜೆಪಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಒಳಗಡೆ ನಡೆಯುವ ಬೆಳವಣಿಗಳನ್ನೂ ಅವಲೋಕಿಸುತ್ತಿದ್ದಾರೆ. ಪಕ್ಷದಲ್ಲಿನ ಮನಸ್ತಾಪಗಳು ಬಿರುಕುಗಳನ್ನು ಸರಿಪಡಿಸುತ್ತಾ ಮುಂಬರುವ ಚುನಾವಣೆಗೆ ಜಾಗರೂಕತೆಯಿಂದ ಹೆಜ್ಜೆ ಇಡಲು ಕಾಂಗ್ರೆಸ್ ನಿರ್ಧರಿಸಿದಂತೆ ಕಾಣುತ್ತಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ತಮ್ಮೊಂದಿಗೆ ಅತೃಪ್ತರು ಸಂಪರ್ಕದಲ್ಲಿ ಇದ್ದಾರೆ ಎನ್ನುವ ಮಾತುಗಳನ್ನು ಬಲವಾಗಿ ಪ್ರತಿಪಾದಿಸುತ್ತಿದ್ದರೂ ಅವರ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಎರಡೂ ಪಕ್ಷಗಳು ಹೇಳಿಕೊಳ್ಳುವ ಆ ಅತೃಪ್ತರು ಯಾರು ಎನ್ನುವ ಬಗ್ಗೆ ಕಾದು ನೋಡಬೇಕಿದೆ.












Click it and Unblock the Notifications