ವಿಶ್ವ ಹಿಂದೂ ಪರಿಷತ್ ಯಾತ್ರೆಯಲ್ಲಿ ಕಲ್ಲು ತೂರಾಟ, 30 ಜನ...
ಗುಜರಾತ್‌ನ ನರ್ಮದಾ ಜಿಲ್ಲೆಯ ಸ್ಥಿತಿ ಸೂಕ್ಷ್ಮವಾಗಿದ್ದು ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಇನ್ನು ನರ್ಮದಾ ಜಿಲ್ಲೆಯಲ್ಲಿ ಸೂಕ್ಷ್ಮ ಸ್ಥಿತಿ ಸೃಷ್ಟಿಯಾಗಲು ಕಾರಣವಾಗಿದ್ದು ಅದೊಂದು ಘಟನೆ. ವಿಶ್ವ ಹಿಂದೂ ಪರಿಷತ್ ಯಾತ್ರೆಯಲ್ಲಿ ನಡೆದ ಕಲ್ಲು ತೂರಾಟ ಈಗ ಜಿಲ್ಲೆಯನ್ನೇ ಬೂದಿ ಮುಚ್ಚಿದ ಕೆಂಡ ಮಾಡಿದೆ. ಹಾಗಾದರೆ ನಿಜಕ್ಕೂ ಅಲ್ಲಿ ಆಗಿದ್ದು ಏನು? ಅಲ್ಲಿನ ಪರಿಸ್ಥಿತಿ ಈಗ ಹೇಗಿದೆ?
ಅಂದಹಾಗೆ ವಿಶ್ವ ಹಿಂದೂ ಪರಿಷತ್ ನಡೆಸುತ್ತಿರುವ 'ಶೌರ್ಯ ಜಾಗರಣ್ ಯಾತ್ರೆ' ವೇಳೆ ಈ ಘಟನೆ ಸಂಭವಿಸಿದೆ. ನರ್ಮದಾ ಜಿಲ್ಲೆಯ ಸೆಲಂಬಾ ಪಟ್ಟಣದಲ್ಲಿ ಅಲ್ಪಸಂಖ್ಯಾತರು ಇರುವ ಪ್ರದೇಶದಲ್ಲಿ ಯಾತ್ರೆ ಸಾಗುವಾಗ ಹಿಂಸಾಚಾರ ಭುಗಿಲೆದ್ದಿದೆ. ಹಿಂಸೆ ಬುಗಿಲೆದ್ದಿದ್ದೇ ತಡ ಒಬ್ಬರ ಮೇಲೊಬ್ಬರು ಕಲ್ಲು ತೂರಾಟ ನಡೆಸಿದ್ದಾರೆ, ಎರಡೂ ಗುಂಪುಗಳನ್ನ ತಕ್ಷಣ ತಣ್ಣಗಾಗಿಸಲು ಪೊಲೀಸರು ಕೂಡ ಹರಸಾಹಸ ಮಾಡಿದ್ದಾರೆ. ಆದ್ರೆ ಅಷ್ಟೊತ್ತಿಗೆ ಕೈಯಲ್ಲಿ ದೊಣ್ಣೆ ಹಾಗೂ ಕೋಲು ಜೊತೆಗೆ ಕಲ್ಲು ಹಿಡಿದ ಎರಡೂ ಗುಂಪಿನ ಜನ ಪರಸ್ಪರ ಹಿಂಸೆ ನಡೆಸಿದ್ದಾರೆ.

ಕಲ್ಲು ತೂರಾಟ, 30 ಜನ...
ತಕ್ಷಣ ಹೆಚ್ಚಿನ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪರಿಸ್ಥಿತಿಯನ್ನು ಪೊಲೀಸರು ಹಿಡಿತಕ್ಕೆ ತಂದಿದ್ದಾರೆ. ಈ ವೇಳೆ ನಡೆದ ಕಲ್ಲು ತೂರಾಟ ಸಂಬಂಧ ಸುಮಾರು 30 ಜನರನ್ನ ಈಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಹಿಂಸೆ ವೇಳೆ 15ರಿಂದ 17 ಜನರಿಗೆ ಗಾಯವಾಗಿದೆ ಎನ್ನಲಾಗಿದೆ. ಹಾಗೇ ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಪರಿಸ್ಥಿತಿ ಹಿಡಿತಕ್ಕೆ ಸಿಕ್ಕಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ನರ್ಮದಾ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಈಗ ಮಾಹಿತಿ ನೀಡಿದ್ದಾರೆ.
ಬೆಂಕಿ ಹೊತ್ತಿದ್ದು ಯಾವಾಗ?
ಈಗ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಮೊದಲಿಗೆ ಜಗಳ ಶುರುವಾಗಿದ್ದು ಯಾತ್ರೆಯ ಮ್ಯೂಸಿಕ್ ವಿಚಾರಕ್ಕೆ ಎನ್ನಲಾಗಿದೆ. ಯಾತ್ರೆ ಮಸೀದಿ ಹತ್ತಿರ ಬಂದ ಸಮಯದಲ್ಲಿ ತಮ್ಮ ಮ್ಯೂಸಿಕ್ ಸೆಟ್‌ನ ಮ್ಯೂಸಿಕ್ ಕಡಿಮೆ ಮಾಡುವಂತೆ ಸ್ಥಳೀಯರು ಹೇಳಿದ್ದಾರೆ. ಆದ್ರೆ ಈ ವೇಳೆ ದೊಡ್ಡ ಗಲಾಟೆ ನಡೆದಿದೆ. ನೋಡ ನೋಡುತ್ತಿದ್ದಂತೆ ಎರಡೂ ಕಡೆಯವರು ಕಲ್ಲು ಹಾಗೂ ದೊಣ್ಣೆ ಹಿಡಿದು ಬಡಿದಾಡಿದ್ದಾರೆ. ಇನ್ನು ತಕ್ಷಣ ಸ್ಥಳಕ್ಕೆ ದೌಡಾಯಿಸಿ ಸ್ಥಳೀಯ ಜನಪ್ರತಿನಿಧಿಗಳು ಪರಿಸ್ಥಿತಿ ನಿಭಾಯಿಸಲು ಪೊಲೀಸರಿಗೆ ಸಹಾಯ ಮಾಡಿದ್ದಾರೆ.
ಒಟ್ನಲ್ಲಿ ಒಂದು ಸಣ್ಣ ವಿಷಯಕ್ಕೆ ಇಡೀ ಜಿಲ್ಲೆಯೇ ಈಗ ಬೂದಿ ಮುಚ್ಚಿದ ಕೆಂಡವಾಗಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಪೊಲೀಸರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಹಾಗೇ ಮತ್ತೆ ಗಲಾಟೆ ನಡೆಯದಂತೆ ಹೆಚ್ಚಿನ ಕ್ರಮ ವಹಿಸಲಾಗಿದೆ. ಈ ಮಧ್ಯೆ ಯಾತ್ರೆ ಆಯೋಜಿಸಿದ್ದವರು ಬೇರೆ ಗುಂಪನ್ನು ದೂರುತ್ತಿದ್ದರೆ, ಮ್ಯೂಸಿಕ್ ಕಾರಣ ಈ ಗಲಾಟೆ ದೊಡ್ಡಯ್ತು ಎಂಬ ಆರೋಪವೂ ಕೇಳಿಬಂದಿದೆ. ಹೀಗೆ ಇಬ್ಬರ ನಡುವೆ ಸಣ್ಣ ಮ್ಯೂಸಿಕ್ ವಿಚಾರ ದೊಡ್ಡ ಗಲಾಟೆಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ.












Click it and Unblock the Notifications