ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ಐತಿಹಾಸಿಕ ಫೋಟೋ ಹಂಚಿಕೊಂಡ ಕಾಂಗ್ರೆಸ್!
ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಸಂಸ್ಕೃತಿ ಬಗ್ಗೆ ಇಡೀ ಜಗತ್ತಿಗೆ ಗೊತ್ತು. ಸಾವಿರಾರು ವರ್ಷಗಳಿಂದ ಕನ್ನಡಿಗರ ಜೊತೆಗೆ ವ್ಯವಹರಿಸುತ್ತಿರುವ ವಿವಿಧ ದೇಶಗಳಲ್ಲಿ, ಕನ್ನಡ ಭಾಷೆ ಇತಿಹಾಸ ಸಾರುವ ಸಾಕ್ಷ್ಯಗಳು ಸಿಗುತ್ತವೆ. ಇಂತಿಪ್ಪ ಕನ್ನಡ ನಾಡು ಹರಿದು ಹಂಚಿಹೋಗಿ, ಹಲವು ರಾಜ್ಯಗಳಲ್ಲಿ ಸೇರಿಕೊಂಡಿತ್ತು. ಆದರೆ ಹೀಗೆ ಬೇರೆಯಾಗಿದ್ದ ಕರ್ನಾಟಕ ಒಗ್ಗೂಡಿ, ಕರ್ನಾಟಕ ಎಂಬ ಹೆಸರು ಪಡೆದು ಅರ್ಧಶತಮಾನ ಕಳೆದಿದೆ. ಈ ಸಂಭ್ರಮದಲ್ಲಿ ಕನ್ನಡ ನಾಡಿನ ಇತಿಹಾಸ ಸಾರುವ ಫೋಟೋ ವೈರಲ್ ಆಗುತ್ತಿದೆ.
ಕರ್ನಾಟಕ ಏಕೀಕರಣದ ನಂತರ, ನಮ್ಮ ರಾಜ್ಯಕ್ಕೆ ಮೈಸೂರು ರಾಜ್ಯ ಎಂಬ ಹೆಸರನ್ನು ಇಡಲಾಗಿತ್ತು. ಆದ್ರೆ ಒಂದೇ ಪ್ರಾಂತ್ಯ ಅಥವಾ ಒಂದು ಭಾಗದ ಹೆಸರನ್ನು ಇಡೀ ರಾಜ್ಯಕ್ಕೆ ಇಟ್ಟಿರುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಂತಿಮವಾಗಿ ಮೈಸೂರು ರಾಜ್ಯ ಹೋಗಿ, ಈಗ ಕರೆಯಲಾಗುತ್ತಿರುವ ಕರ್ನಾಟಕ ಎಂಬ ಹೆಸರು ಬಂತು. ಹೀಗೆ ಕರ್ನಾಟಕ ಎಂಬ ಹೆಸರು ಜಾರಿಗೆ ತಂದ ಕೀರ್ತಿ ಮಾಜಿ ಸಿಎಂ ದಿ. ದೇವರಾಜ್ ಅರಸು ಅವರಿಗೆ ಸಲ್ಲಬೇಕು. ಇದೀಗ ಕರ್ನಾಟಕ ಕಾಂಗ್ರೆಸ್, ಕನ್ನಡಿಗರಿಗೆ ಸಂಬಂಧಿಸಿದ ಅರಸು ಅವರ ಅಪರೂಪದ ಫೋಟೋ ಹಂಚಿಕೊಂಡಿದೆ.

ದೇವರಾಜ ಅರಸು ಸಾಧನೆ ಸ್ಮರಣೆ!
ಹೌದು ಸ್ವಾತಂತ್ರ್ಯ ಬಂದ ನಂತರ ಕನ್ನಡ ನಾಡು ಹಲವು ಸಮಸ್ಯೆಗಳನ್ನ ಎದುರಿಸುತ್ತಿತ್ತು. ಅದರಲ್ಲೂ ಹಲವು ವರ್ಷ ಕಾಲ ಬೇರೆ ಬೇರೆ ರಾಜ್ಯಗಳ ಅಡಿಯಲ್ಲಿ ಆಳ್ವಿಕೆಗೆ ಒಳಪಟ್ಟಿದ್ದ ಹಿನ್ನೆಲೆ ಸಾಕಷ್ಟು ಸವಾಲು ಎದುರಾಗಿದ್ದವು. ಇದೆಲ್ಲವನ್ನೂ ಹಂತ ಹಂತವಾಗಿ ಕರ್ನಾಟಕ ಸರಿಪಡಿಸುತ್ತಾ ಬಂತು. ಆದರೆ ಇಡೀ ರಾಜ್ಯಕ್ಕೆ ಒಂದೇ ಹೆಸರು ಹೊಂದಾಣಿಕೆ ಆಗುವಂತೆ ಇಡುವುದು ದೊಡ್ಡ ಸವಾಲಾಗಿತ್ತು. ಕೊನೆಗೆ ಅರ್ಧ ಶತಮಾನದ ಹಿಂದೆ ಈ ಕಾರ್ಯವೂ ನೆರವೇರಿತ್ತು. ಅಷ್ಟಕ್ಕೂ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದ ದಿನ ಏನಾಗಿತ್ತು ಗೊತ್ತಾ?
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, 'ನವೆಂಬರ್ 1, 1973ರಂದು ಮೈಸೂರು ರಾಜ್ಯಕ್ಕೆ "ಕರ್ನಾಟಕ"ವೆಂದು ಹೆಸರಿಸಲಾಯ್ತು. ಅಂದಿನ ಮುಖ್ಯಮಂತ್ರಿ ದಿ. ದೇವರಾಜ್ ಅರಸುರವರು ಹಂಪಿಯಲ್ಲಿ ಬಹುದೊಡ್ಡ ಕಾರ್ಯಕ್ರಮ ಆಯೋಜಿಸಿ "ಕರ್ನಾಟಕ"ವೆಂಬ ಹೆಸರಿನ ನಾಮಫಲಕವನ್ನು ಅನಾವರಣಗೊಳಿಸಿದರು. ಕಾಂಗ್ರೆಸ್ ಅಂದಿನಿಂದ ಇಂದಿನವರೆಗೂ ನಾಡು, ನುಡಿಯ ಬಗ್ಗೆ ಕಾಳಜಿ, ಗೌರವವನ್ನು ಕಾಪಾಡಿಕೊಂಡು ಬಂದಿದೆ. ದೇವರಾಜ್ ಅರಸುರವರ ಬದ್ಧತೆ, ಇಚ್ಛಾಶಕ್ತಿಯಿಂದಾಗಿ ಕನ್ನಡನಾಡು ಕರ್ನಾಟಕವಾಗಿ ರೂಪುಗೊಂಡಿದೆ.' ಎಂದು ಪೋಸ್ಟ್ ಹಾಕಿದೆ.
ನವೆಂಬರ್ 1, 1973ರಂದು ಮೈಸೂರು ರಾಜ್ಯಕ್ಕೆ "ಕರ್ನಾಟಕ"ವೆಂದು ಹೆಸರಿಸಲಾಯ್ತು.
— Karnataka Congress (@INCKarnataka) November 1, 2023
ಅಂದಿನ ಮುಖ್ಯಮಂತ್ರಿ ದಿ. ದೇವರಾಜ್ ಅರಸುರವರು ಹಂಪಿಯಲ್ಲಿ ಬಹುದೊಡ್ಡ ಕಾರ್ಯಕ್ರಮ ಆಯೋಜಿಸಿ "ಕರ್ನಾಟಕ"ವೆಂಬ ಹೆಸರಿನ ನಾಮಫಲಕವನ್ನು ಅನಾವರಣಗೊಳಿಸಿದರು.
ಕಾಂಗ್ರೆಸ್ ಅಂದಿನಿಂದ ಇಂದಿನವರೆಗೂ ನಾಡು, ನುಡಿಯ ಬಗ್ಗೆ ಕಾಳಜಿ, ಗೌರವವನ್ನು ಕಾಪಾಡಿಕೊಂಡು ಬಂದಿದೆ.… pic.twitter.com/KA6RRtvnb1
ಒಟ್ನಲ್ಲಿ ಮೈಸೂರು ರಾಜ್ಯ ಈಗ ಕರ್ನಾಟಕ ರಾಜ್ಯವಾಗಿ ಜಗತ್ತಿನಾದ್ಯಂತ ಮಿಂಚುತ್ತಿದ್ದು, ಕನ್ನಡಿಗರ ಕೀರ್ತಿ ಪ್ರಪಂಚದ ಉದ್ದಗಲಕ್ಕೂ ಹರಡಿದೆ. ಇದೇ ಸಮಯದಲ್ಲಿ ಅದ್ಧೂರಿ & ಸಂಭ್ರಮದಿಂದ ಕರ್ನಾಟಕ ರಾಜ್ಯೋತ್ಸವವನ್ನ ಆಚರಿಸಲಾಗಿದೆ. ಇದೇ ರೀತಿ ಕನ್ನಡಿಗರು ತಮ್ಮ ಭಾಷಾಭಿಮಾನ ಮರೆಯದಿರಲಿ ಎಂಬುದೇ ಎಲ್ಲರ ಆಶಯ. ಯಾಕಂದ್ರೆ ಕರ್ನಾಟಕ ಮತ್ತು ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಭವ್ಯ ಇತಿಹಾಸ ಇದೆ.












Click it and Unblock the Notifications