‘ಏಡ್ಸ್’ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ ಮಾತು ಇದು!
'ಏಡ್ಸ್' ಒಂದು ಮಾರಕ ರೋಗ, ಇದು ವಕ್ಕರಿಸಿದರೆ ಬದುಕುವುದೇ ಇಲ್ಲ ಅನ್ನೋ ಕಾಲ ಒಂದು ಇತ್ತು. ಅದರಲ್ಲೂ ಕೋಟ್ಯಂತರ ಜನರು ಈ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ಹೀಗಿದ್ದಾಗಲೇ ಮನುಷ್ಯ ಅಲರ್ಟ್ ಆಗಿ, ಏಡ್ಸ್ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ 'ಎಚ್‌ಐವಿ' ಅಥವಾ 'ಏಡ್ಸ್' ಬಗ್ಗೆ ಜಾಗೃತಿ ಮೂಡಿದ್ದು, ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿದೆ. ಈ ಬಗ್ಗೆ ಇಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಹೌದು, ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ - 2023ರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಈ ರೋಗವನ್ನು ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. 1986 ರಲ್ಲಿ ಭಾರತದಲ್ಲಿ ಹಾಗೂ 1987 ರಲ್ಲಿ ಕರ್ನಾಟಕದಲ್ಲಿ ಮೊದಲಿಗೆ ಪತ್ತೆ ಆಗಿತ್ತು. ಇತ್ತಿಚಿನ ದಿನಗಳಲ್ಲಿ ಹೆಚ್ಐವಿ ಪೀಡಿತರ & ಅದರ ಹರಡುವಿಕೆಯೂ ಕಡಿಮೆಯಾಗುತ್ತಿದೆ. ಇದು ಒಳ್ಳೇ ಬೆಳವಣಿಗೆ. ನಮ್ಮ ಸಮಾಜನ HIV ಮುಕ್ತ ಸಮಾಜವನ್ನಾಗಿ ಮಾಡಬೇಕು. ಇದಕ್ಕಾಗಿ ಜನರಲ್ಲಿ & ಯುವಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.

'ಏಡ್ಸ್' ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯ!
2015-2020ರವರೆಗೆ ಏಡ್ಸ್ ಪೀಡಿತರ ಸಂಖ್ಯೆಯನ್ನು ಸೊನ್ನೆಗೆ ತನ್ನಿ ಎಂಬ ಘೋಷವಾಕ್ಯವಿತ್ತು. ಆದರೆ ಈ ಗುರಿ ಇನ್ನೂ ಸಾಧಿಸಲಾಗಿಲ್ಲ. ಈ ಘೋಷಣೆ ಕಾರ್ಯರೂಪಕ್ಕೆ ತರುವುದು ಕೇವಲ ಆರೋಗ್ಯ ಇಲಾಖೆ ಹೊಣೆಯಾಗಿರದೇ, ಇಡೀ ಸಮಾಜದ ಹೊಣೆ. ಮುಂದಿನ 5 ವರ್ಷಗಳಲ್ಲಿ ಭಾರತದ ದೇಶ, ಕರ್ನಾಟಕ ರಾಜ್ಯ ಏಡ್ಸ್ ಮುಕ್ತ ದೇಶ / ರಾಜ್ಯ ಆಗಲಿ. ಈ ದಿಕ್ಕಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.
ಮಾತನಾಡಿದರೆ 'ಏಡ್ಸ್' ಬರುತ್ತಾ?
'ಏಡ್ಸ್' ರೋಗ ಪೂರ್ಣ ವಾಸಿಯಾದರೆ ಏಡ್ಸ್ ಪೀಡಿತರು ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಇನ್ನು 5ರಿಂದ 6 ವರ್ಷದಲ್ಲಿ ಸೊನ್ನೆ ದಿನ ಬರಲಿ ಎಂದು ಹಾರೈಸುವೆ. ಏಡ್ಸ್ ಕೇಸ್‌ಗಳ ಪೈಕಿ ಭಾರತ ವಿಶ್ವದಲ್ಲಿ 3 ನೇ ಸ್ಥಾನದಲ್ಲಿದೆ. ಹೀಗಾಗಿ, ನಾವು ಹೆಚ್ಚು ಜಾಗೃತರಾಗುವುದು ಅಗತ್ಯ. ರೋಗಿಗಳ ಜೊತೆ ಮಾತನಾಡಿದರೆ ರೋಗ ಬರುತ್ತದೆ ಎಂದು ಕೆಲವರಿಗೆ ತಪ್ಪು ತಿಳುವಳಿಕೆಗಳಿವೆ, ಆದರೆ ಹಾಗೆ ಆಗಲ್ಲ. ಹೆಚ್ಚಾಗಿ ರಕ್ತದ ಮೂಲಕ ಹರಡುತ್ತದೆ ಇದು ಜನರಿಗೆ ಗೊತ್ತಿರಬೇಕೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಜ್ಞಾನ ಮುಂದುವರಿದರೂ ಇಂತಹ ಸ್ಥಿತಿ
ರೋಗಕ್ಕೆ ತುತ್ತಾಗಿ ಅನುಭವಿಸುವುದಕ್ಕಿಂತ ಮೊದಲೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಿದೆ. ಸಾಮೂಹಿಕವಾಗಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಏಡ್ಸ್ ರೋಗ ಬಂದರೆ ತಕ್ಷಣ ಏನೂ ಆಗೋಲ್ಲ. ಆದ್ರೆ ಇದು ವಾಸಿಯಾಗದ ರೋಗ. ವಿಜ್ಞಾನ ಇಷ್ಟೆಲ್ಲ ಬೆಳವಣಿಗೆಯಾದ್ರೂ ಏಡ್ಸ್ ರೋಗಕ್ಕೆ ಮಾತ್ರ ಇನ್ನೂ ಔಷಧಿ ಕಂಡುಹಿಡಿದಿಲ್ಲ. ಆರೋಗ್ಯ ಇಲಾಖೆಯವರು ಈ ಬಗ್ಗೆ ಸಂಶೋಧನೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು ಎಂದರು ಸಿಎಂ ಸಿದ್ದರಾಮಯ್ಯ.
ಹಾಗೇ ಅಂತಿಮವಾಗಿ, ಸಮುದಾಯಗಳು ಮುನ್ನಡೆಸಲಿ, ಎಂಬ ಧ್ಯೇಯವಾಕ್ಯದೊಂದಿಗೆ ಈ ವರ್ಷ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. 2017 ರಲ್ಲಿ ಏಡ್ಸ್ ನಿಯಂತ್ರಣ ಕಾಯ್ದೆಯನ್ನ ಜಾರಿಗೆ ತಂದಿದ್ದು ನಮ್ಮ ಸರ್ಕಾರ ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಹಾಗೇ ಈ ರೋಗದ ವಿರುದ್ಧ ಹೆಚ್ಚು ಜಾಗೃತಿ ಮೂಡಿಸಲಾಗುವುದು ಎಂದರು ಸಿಎಂ ಸಿದ್ದರಾಮಯ್ಯ. ಈ ವೇಳೆ ಸಚಿವರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಈ ಮೂಲಕ ಕರ್ನಾಟಕ ಸರ್ಕಾರ ಕೂಡ ಏಡ್ಸ್ ಕಾಯಿಲೆ ಹರಡುವಿಕೆ ವಿರುದ್ಧ ಸಮರವನ್ನು ಸಾರಿದೆ.












Click it and Unblock the Notifications