Onion Price: ಟೊಮೆಟೊ ಬಳಿಕ ಈರುಳ್ಳಿ ಬೆಲೆ ಏರಿಕೆ, ಇಂದು ಎಷ್ಟಿದೆ?
ನಾಸಿಕ್: ಟೊಮೆಟೊ.. ಟೊಮೆಟೊ ಅಂತಾ ಇಷ್ಟುದಿನ ಜನ ಕೆಂಪು ಸುಂದರಿಯ ಹಿಂದೆ ಓಡಿದ್ದು ಆಯ್ತು. ಕೆಲ ದಿನಗಳಿಂದ ಟೊಮೆಟೊ ಬೆಲೆ ಸ್ವಲ್ಪ ಇಳಿಕೆ ಕಾಣುತ್ತಿದೆ. ಆದರೆ ಈಗ ಹೊಸದೊಂದು ಟೆನ್ಷನ್ ಶುರುವಾಗಿದೆ. ಟೊಮೆಟೊ ಬೆಲೆ ಇಳಿಕೆ ಕಾಣುತ್ತಿರುವಾಗಲೇ ಅಡುಗೆ ಮನೆಯಲ್ಲಿ ಈರುಳ್ಳಿ ಕೂಡ ಕಣ್ಣೀರು ಹಾಕಿಸಲು ಸಜ್ಜಾಗಿದೆ.
ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆ ಲಸಲಗಾಂವ್ ಎಪಿಎಂಸಿಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರಿದೆ. ಮಹಾರಾಷ್ಟ್ರದ ಈ ಮಾರುಕಟ್ಟೆಯಲ್ಲಿ ಸರಾಸರಿ ಸಗಟು ಬೆಲೆ ಕೇವಲ ಒಂದು ವಾರದಲ್ಲಿ ಶೇಕಡಾ 48ರಷ್ಟು ಹೆಚ್ಚಾಗಿದ್ದು, ಈರುಳ್ಳಿ ಕಣ್ಣೀರು ಹಾಕಿಸುವ ಸೂಚನೆ ನೀಡಿದೆ. ಅಂದಹಾಗೆ ಆಗಸ್ಟ್ 4ಕ್ಕೆ ಈರುಳ್ಳಿ ದರ ಪ್ರತಿ ಕ್ವಿಂಟಲ್‌ಗೆ 1550 ರೂಪಾಯಿ ಇತ್ತು. ಆದರೆ ಇದೇ ಶುಕ್ರವಾರ ಅಂದ್ರೆ ಆಗಸ್ಟ್ 11ರಂದು ಈರುಳ್ಳಿ ರೇಟ್ ಪ್ರತಿ ಕ್ವಿಂಟಲ್‌ಗೆ 2,300 ರೂಪಾಯಿ ತಲುಪಿದೆ. ಈ ಮೂಲಕ ಕಳೆದ ಎಂಟು ತಿಂಗಳಲ್ಲಿ ದಾಖಲಾದ ಗರಿಷ್ಠ ಸರಾಸರಿ ಸಗಟು ಈರುಳ್ಳಿ ಬೆಲೆ ಇದಾಗಿದೆ. ಡಿಸೆಂಬರ್‌ನಲ್ಲಿ ಕ್ವಿಂಟಲ್‌ಗೆ 2,311 ರೂಪಾಯಿ ತಲುಪಿತ್ತು ಈರುಳ್ಳಿ.

ಈರುಳ್ಳಿ ಬೆಲೆ ಏರಿಕೆಗೆ ಕಾರಣವೇನು?
ದೇಶದಲ್ಲಿ ಟೊಮೆಟೊ ಮತ್ತು ಈರುಳ್ಳಿ ಇಲ್ದೆ ಅಡುಗೆ ಮಾಡಲು ಆಗಲ್ಲ. ಯಾಕಂದ್ರೆ ಈ ಬೆಳೆಗಳೇ ಅಡುಗೆಗೆ ಆಧಾರ. ಅಕಸ್ಮಾತ್ ಟೊಮೆಟೊ ಅಥವಾ ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರುವುದು ತಡವಾದರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ. ಈಗಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಈಗ ಬಿತ್ತನೆ ಚಟುವಟಿಕೆಯಲ್ಲಿ ನಿರತರಾಗಿದ್ದು, ಲಾಸಲ್‌ಗಾಂವ್ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದ ಈರುಳ್ಳಿ ಭಾರಿ ಕುಸಿತ ಕಂಡಿದೆ. ಸಾಮಾನ್ಯವಾಗಿ ನಿತ್ಯ 20,000ದಿಂದ 25,000 ಕ್ವಿಂಟಲ್ ಈರುಳ್ಳಿ ಮಹಾರಾಷ್ಟ್ರದ ಲಾಸಲ್‌ಗಾಂವ್ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈಗ ಕೇವಲ 15,000 ಕ್ವಿಂಟಲ್ ಬರುತ್ತಿದ್ದು, ಬೆಲೆ ಭಾರಿ ಏರುತ್ತಿದೆ.
ಬಾಂಗ್ಲಾದೇಶಕ್ಕೆ ಈರುಳ್ಳಿ ಬೇಕಂತೆ!
ಅತ್ತ ಈರುಳ್ಳಿ ಆಗಮನ ಕೂಡ ತಡವಾಗುತ್ತಿದೆ, ಇನ್ನೊಂದು ಕಡೆ ನೆರೆಯ ಬಾಂಗ್ಲಾದಲ್ಲಿ ಈರುಳ್ಳಿಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಎರಡೂ ಕಾರಣದಿಂದ ದೇಶದಲ್ಲಿ ಈರುಳ್ಳಿಯ ಬೆಲೆ ಮುಗಿಲು ಮುಟ್ಟುತ್ತಿದೆ ಎನ್ನುತ್ತಿದ್ದಾರೆ ಲಾಸಲ್‌ಗಾಂವ್ ಮಾರುಕಟ್ಟೆಯ ವರ್ತಕರು. ಇದರ ಜೊತೆ ಆಂಧ್ರ & ಕರ್ನಾಟಕದಲ್ಲಿ ಈರುಳ್ಳಿಯ ಬೆಳೆ ಒಂದು ತಿಂಗಳು ತಡವಾಗುತ್ತಿದ್ದು ಅಹ್ಮದ್‌ನಗರದಲ್ಲಿ ಪೂರೈಕೆಯೂ ಕಡಿಮೆಯಾಗಿದೆ. ಇದು ಒಟ್ಟಾರೆ ನಾಸಿಕ್‌ನಿಂದ ಈರುಳ್ಳಿಗೆ ಬೇಡಿಕೆ ಹೆಚ್ಚಲು ಕಾರಣ ಎಂದು ಸ್ಥಳೀಯ ವರ್ತಕರು ಮಾಹಿತಿ ನೀಡಿದ್ದಾರೆ.
ಚಿಲ್ಲರೆ ಮಾರುಕಟ್ಟೆಯಲ್ಲೂ ಈರುಳ್ಳಿ ಏರಿಕೆ
ಇನ್ನು ಕಳೆದ ವಾರ ಚಿಲ್ಲರೆ ಅಂಗಡಿಗಳಲ್ಲಿ ಪ್ರತಿ ಕೆಜಿ ಈರುಳ್ಳಿ 25 ರೂಪಾಯಿ ಇತ್ತು. ಆದರೆ ಈಗ ಗುಣಮಟ್ಟಕ್ಕೆ ಅನುಗುಣವಾಗಿ 35ರಿಂದ 40 ರೂಪಾಯಿಗೆ ಈರುಳ್ಳಿ ಮಾರಾಟ ಆಗ್ತಿದೆ. ಸೂಪರ್ ಮಾರ್ಕೆಟ್‌ಗಳಲ್ಲಿ 45 ರೂಪಾಯಿಗೆ ಈರುಳ್ಳಿ ಬೆಲೆ ತಲುಪಿದೆ. ಬೆಂಗಳೂರಿನಲ್ಲೂ ಚಿಲ್ಲರೆ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಕಳೆದ ಒಂದು ವಾರದಿಂದ ಈರುಳ್ಳಿಯ ಬೆಲೆಯಲ್ಲಿ ಕೆಜಿಗೆ 12ರಿಂದ 15 ರೂಪಾಯಿ ಏರಿಕೆ ಕಂಡಿದೆ. 5 ರಾಜ್ಯಗಳಲ್ಲಿ ಚುನಾವಣೆಯ ಪರಿಣಾಮ ಬೆಲೆ ಏರಿಕೆ ಜನರಿಗೆ ಬೇಸರ ಮೂಡಿಸಬಹುದು. ಹೀಗಾಗಿ ಬೆಲೆ ಏರಿಕೆ ನಿಯಂತ್ರಣ ಮಾಡಲು ಕೇಂದ್ರವೂ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಒಟ್ನಲ್ಲಿ ಬೆಲೆ ಏರಿಕೆ ಬಿಸಿಯಲ್ಲಿ ಜನರು ಪರದಾಡುತ್ತಿದ್ದಾರೆ. ದೇಶಾದ್ಯಂತ ಟೊಮೆಟೊ & ಈರುಳ್ಳಿ ಬೆಲೆಯದ್ದೇ ಸುದ್ದಿ ಸದ್ದು ಮಾಡುತ್ತಿದೆ. ಟೊಮೆಟೊ ಬೆಲೆ ಏರಿಕೆಯಾದಾಗ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅಲರ್ಟ್ ಆಗಿರುವ ಕೇಂದ್ರ ಸರ್ಕಾರ ಈರುಳ್ಳಿ ಬೆಲೆ ಏರಿಕೆ ಆಗದಂತೆ, ಬೆಲೆ ನಿಯಂತ್ರಣಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಆದ್ರೆ ಈ ಕ್ರಮ ಅದೆಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ? ಈರುಳ್ಳಿ ಬೆಲೆ ಇನ್ನೆಷ್ಟು ಏರಿಕೆಯಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications