Government Employee: ಸರ್ಕಾರಿ ನೌಕರರ ವಿರುದ್ಧ ದೂರು, ವಿಚಾರಣೆ ವರದಿ ಮೇಲೆ ಶಿಸ್ತು ಕ್ರಮ ಹೇಗೆ?
ಬೆಂಗಳೂರು, ಅಕ್ಟೋಬರ್ 14: ಕರ್ನಾಟಕದ ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ದೂರುಗಳು ಸಲ್ಲಿಕೆಯಾಗುತ್ತವೆ. ಈ ಮಾದರಿ ದೂರುಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಈಗಾಗಲೇ ಆದೇಶಿಸಲಾಗಿದೆ. ದೂರಿನ ವಿಚಾರಣೆ ನಡೆದು ಪ್ರಾಥಮಿಕ ವಿಚಾರಣೆ ವರದಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು, ದೂರುದಾರರು ಮೇಲ್ಮನವಿ ಸಲ್ಲಿಸುವುದು ಮುಂತಾದ ನಿಯಮಗಳ ಮಾಹಿತಿಯನ್ನು ಸರ್ಕಾರಿ ನೌಕರರ ಅನುಕೂಲಕ್ಕಾಗಿ ನೀಡಲಾಗಿದೆ.
ಈಗಾಗಲೇ ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ದೂರುಗಳು ಸಲ್ಲಿಕೆಯಾದಾಗ ಅವುಗಳನ್ನು ಹೇಗೆ ಇತ್ಯರ್ಥಪಡಿಸಬೇಕು ಎಂದು ಒಟ್ಟು 10 ಹಂತಗಳನ್ನು ನೀಡಲಾಗಿದೆ. ಅಲ್ಲದೇ ಯಾವುದೇ ದೂರುಗಳನ್ನು 90 ದಿನಗಳಲ್ಲಿ ಇತ್ಯರ್ಥಗೊಳಿಸಬೇಕು ಎಂದು ಕಾಲಮಿತಿ ನಿಗದಿಗೊಳಿಸಲಾಗಿದೆ.

ಪ್ರಾಥಮಿಕ ವಿಚಾರಣೆ: ಈ ನಿಯಮಾವಳಿಗಳಲ್ಲಿ ಹಂತ-8ರಲ್ಲಿ ಪ್ರಾಥಮಿಕ ವಿಚಾರಣೆ ವರದಿಯ ಮೇಲೆ ನಿರ್ಣಯದ ಕುರಿತು ಮಾಹಿತಿ ನೀಡಲಾಗಿದೆ. ಪ್ರಾಥಮಿಕ ವಿಚಾರಣೆಯನ್ನು ನಡೆಸಿ ಸಲ್ಲಿಸಲಾದ ಅಂತಿಮ ವರದಿ ಆಧಾರದ ಮೇಲೆ ಸಕ್ಷಮ ಪ್ರಾಧಿಕಾರಿಗಳು ಪ್ರಕರಣವನ್ನು ಮುಕ್ತಾಯಗೊಳಿಸಿ ಆದೇಶಿಸಿದಲ್ಲಿ, ಸದರಿ ಆದೇಶದ ಪ್ರತಿಯನ್ನು ದೂರುದಾರರಿಗೆ ನೀಡುವುದು. ಸದರಿ ಅದೇಶದಿಂದ ಬಾಧಿತರಾದಲ್ಲಿ ದೂರುದಾರರು ಮೇಲ್ಮನವಿ ಸಲ್ಲಿಸಲು ಅನುವಾಗುವಂತೆ, ಸಕ್ಷಮ ಮೇಲ್ಮನವಿ ಪ್ರಾಧಿಕಾರಿಗಳ ಬಗ್ಗೆ ತಿಳಿಸತಕ್ಕದ್ದು ಎಂದು ತಿಳಿಸಿದೆ.
ಹಂತ-9ರಲ್ಲಿ ಪ್ರಾಥಮಿಕ ವಿಚಾರಣೆ ವರದಿಯ ಮೇಲೆ ಶಿಸ್ತು ಕ್ರಮದ ಮಾಹಿತಿ ಇದೆ. ಪ್ರಾಥಮಿಕ ವಿಚಾರಣೆ ವರದಿಯ ಮೇಲೆ ಶಿಸ್ತು ಕ್ರಮವಾಗಿ ಇಲಾಖಾ ವಿಚಾರಣೆ ನಡೆಸಲು ತೀರ್ಮಾನಿಸಿದ್ದಲ್ಲಿ, ಇಲಾಖಾ ವಿಚಾರಣೆ ನಡೆಸಲು ತೀರ್ಮಾನಿಸಿರುವ ಬಗ್ಗೆ ದೂರುದಾರರಿಗೆ ಒಂದು ಪ್ರತಿ ನೀಡುವುದು. ಇದು ದೂರುದಾರರಿಗೆ ನೀಡಬಹುದಾದ ಅಂತಿಮ ಪ್ರತಿಯಾಗಿರುತ್ತದೆ. ಇಲಾಖಾ ವಿಚಾರಣೆ ಅಂತಿಮವಾಗುವವರೆಗೆ ನಂತರದ ಮುಂದಿನ ಹಂತಗಳ ಕುರಿತಾದ ಮಾಹಿತಿಯನ್ನು ದೂರುದಾರರಿಗೆ ತಿಳಿಸುವ ಅಗತ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹಂತ-10ರಲ್ಲಿ ಇಲಾಖಾ ವಿಚಾರಣೆಯ ಮಾಹಿತಿ ಇದೆ. ಸರ್ಕಾರದ ಸುತ್ತೋಲೆ ದಿನಾಂಕ 4.10.2021ರನ್ವಯ ತಿಳಿಸಿರುವಂತೆ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 11ರಡಿ ಕಠಿಣ ದಂಡನೆಯನ್ನು ವಿಧಿಸಲು ಕಾಲಾವಧಿಯನ್ನು ಪಾಲಿಸಬೇಕು ಎಂದು ತಿಳಿಸಿದೆ.
ಹಲವಾರು ಸಂದರ್ಭದಲ್ಲಿ ಸಾರ್ವಜನಿಕರಿಂದ, ಜನಪ್ರತಿನಿಧಿಗಳಿಂದ ಅಥವಾ ಸಂಘ-ಸಂಸ್ಥೆಗಳಿಂದ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸಲ್ಲಿಕೆಯಾಗುವ ದೂರು ವೈಯುಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಾಗ್ರಹ ಪೀಡಿತವಾಗಿರುತ್ತವೆ. ಹಲವು ದೂರುಗಳಿಗೆ ಪೂರಕವಾದ ಮಾಹಿತಿ/ ದಾಖಲೆಗಳು ಇರುವುದಿಲ್ಲ.
ಈ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ/ ನೌಕರರ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗುವುದಲ್ಲದೇ ದಕ್ಷ ಹಾಗೂ ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಅಲ್ಲದೇ ದೂರುಗಳನ್ನು ಸಮಂಜಸವಾಗಿ ನಿರ್ವಹಿಸದ ಕಾರಣ ಸರ್ಕಾರಿ ನೌಕರರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸ್ವೀಕೃತಗೊಂಡ ದೂರುಗಳ ಮೇಲೆ ಹಂತವಾರು ಕ್ರಮ ಕೈಗೊಳ್ಳಲು ಒಟ್ಟು 10 ಹಂತಗಳನ್ನು ನೀಡಲಾಗಿದೆ. ಇದರಲ್ಲಿ ದೂರು ಸ್ವೀಕಾರದಿಂದ ಹಿಡಿದು ಇಲಾಖಾ ವಿಚಾರಣೆ ತನಕ ಮಾಹಿತಿ ಇದೆ.
ಅಲ್ಲದೇ ವಿಚಾರಣಾ ವರದಿ ಪರಿಶೀಲಿಸಲು ಹಾಗೂ ಅದನ್ನು ಸ್ವೀಕರಿಸುವ ಬಗ್ಗೆ ನಿರ್ಣಯಿಸಲು ಗರಿಷ್ಠ ಕಾಲಮಿತಿ 1 ತಿಂಗಳು. ಕಾರಣ ಕೇಳುವ 2ನೇ ಸೂಚನಾ ಪತ್ರವನ್ನು ವಿಚಾರಣಾ ವರದಿಯ ಜೊತೆಗೆ, ಆಪಾದಿತ ಸರ್ಕಾರಿ ನೌಕರನಿಗೆ ನೀಡಲು ಗರಿಷ್ಠ ಕಾಲಮಿತಿ 1 ತಿಂಗಳು. ಅಂತಿಮ ಆದೇಶವನ್ನು ಹೊರಡಿಸಲು ಗರಿಷ್ಠ ಕಾಲಮಿತಿ 1 ತಿಂಗಳು. ಶಿಸ್ತಿನ ಕ್ರಮ ಜರುಗಿಸಲು ಒಟ್ಟಾರೆ ಕಾಲಮಿತಿ 9 ತಿಂಗಳು ಎಂದು ಸುತ್ತೋಲೆಯಲ್ಲಿ ವಿವರಣೆ ಕೊಡಲಾಗಿದೆ.












Click it and Unblock the Notifications