ಸರ್ಕಾರಿ ಶಾಲಾ ಮಕ್ಕಳ ಕೈಗೂ ಬರಲಿದೆ ಡೈರಿ
ಬೆಂಗಳೂರು, ನವೆಂಬರ್ 04 : ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಇರುವಂತಹ ಡೈರಿ ವ್ಯವಸ್ಥೆ ಈ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲೂ ಜಾರಿಗೆ ಬರಲಿದೆ. ಸರ್ಕಾರವೇ ಉಚಿತವಾಗಿ ಮಕ್ಕಳಿಗೆ ಡೈರಿಯನ್ನು ವಿತರಣೆ ಮಾಡಲಿದೆ.
ಹೌದು, ಪೋಷಕರು ಮತ್ತು ಶಿಕ್ಷಕರ ನಡುವಿನ ಅಂತರ ಕಡಿಮೆ ಮಾಡಲು ಸರ್ಕಾರಿ ಶಾಲೆಗಳಲ್ಲಿಯೂ ಡೈರಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. 1 ರಿಂದ 10 ನೇ ತರಗತಿ ವರೆಗಿನ ಮಕ್ಕಳು 152 ಪುಟದ ಡೈರಿಯನ್ನು ಪ್ರತಿ ದಿನ ಶಾಲೆಗೆ ತೆಗೆದುಕೊಂಡು ಹೋಗಬೇಕು.
ಶಾಲೆಯ ಚುಟುವಟಿಕೆಗಳು, ರಜೆ ದಿನಗಳು, ತುರ್ತು ಫೋನ್ ನಂಬರ್, ಮಕ್ಕಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮಾಹಿತಿ ಡೈರಿಯಲ್ಲಿ ಇರುತ್ತದೆ. ಮಕ್ಕಳು ಶಾಲೆಗೆ ಗೈರು ಹಾಜರಾದರೆ ಮರುದಿನ ಪೋಷಕರು ಕಾರಣವನ್ನು ಬರೆದು ತಿಳಿಸಬೇಕಾಗುತ್ತದೆ.

'ಮಕ್ಕಳ ವಿದ್ಯಾಭ್ಯಾಸದ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಲು ಡೈರಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಸರ್ಕಾರದಿಂದಲೇ ಉಚಿತವಾಗಿ ಡೈರಿ ವಿತರಣೆ ಮಾಡಲಾಗುತ್ತದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
152 ಪುಟದ ಡೈರಿಯಲ್ಲಿ ಮೊದಲ ಮೂರು ಪುಟದಲ್ಲಿ ನಾಡಗೀತೆ, ರಾಷ್ಟ್ರಗೀತೆ ಇರುತ್ತದೆ. ಉಳಿದ ಒಂದು ಪುಟದಲ್ಲಿ ವಿದ್ಯಾರ್ಥಿಯ ಮಾಹಿತಿ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications