ಸೈಬರ್ ಕ್ರೈಮ್‍ಗಳ ಬಗ್ಗೆ ಸರಕಾರಿ ನೌಕರರಿಗೆ ಜಿಲ್ಲಾಧಿಕಾರಿ ಮಹತ್ವದ ಎಚ್ಚರಿಕೆ!
ಇತ್ತಿಚೆಗೆ ಆನ್‍ಲೈನ್ ವಂಚನೆ ಮಾಡುವ, ಆರ್ಥಿಕ ವಂಚನೆ ಮಾಡುವ ಅಪರಾಧಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ವಿಶೇಷವಾಗಿ ಸರಕಾರಿ ನೌಕರರು, ಅವರ ಕುಟುಂದವರು ಮತ್ತು ಪಿಂಚಣಿದಾರರು ಜಾಗೃತರಾಗಬೇಕೆಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದ್ದಾರೆ. ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬಾಂಬೆ ಸೆಬಿ (SEBI)ಯಿಂದ ಆಯೋಜಿಸಿದ್ದ ಪ್ರಾದೇಶಿಕ ಹೂಡಿಕೆದಾರರ ಜಾಗೃತಿ ಮತ್ತು ಆನ್‍ಲೈನ್ ಆರ್ಥಿಕ ವಂಚನೆ, ಸೈಬರ್ ಕ್ರೈಮಗಳ ಬಗ್ಗೆ ಸರಕಾರಿ ನೌಕರರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ್ದಾರೆ.
ನಿವೃತ್ತಿ ನಂತರ ಆರ್ಥಿಕ ಅನುಕೂಲತೆಗಳ ಇರಬೇಕು. ನೌಕರರು ಸೇವೆಯಲ್ಲಿದ್ದಾಗ ನಿಯಮಿತವಾಗಿ ಮತ್ತು ಸುರಕ್ಷಿತ ಕ್ಷೇತ್ರಗಳಲ್ಲಿ ಉಳಿತಾಯ ಮಾಡಬೇಕು. ಒಬ್ಬ ಹೂಡಿಕೆದಾರನಾಗಿ ಎನು ಮಾಡಬೇಕು ಮತ್ತು ಎನು ಮಾಡಬಾರದು ಎಂಬುದನ್ನು ತಿಳಿದಿರಬೇಕು. ಲಾಭದ ಆಸೆಯ ಮಾತುಗಳಿಗೆ ಮರುಳಾಗಬಾರದು. ಪ್ರತಿ ಸಂದರ್ಭದಲ್ಲಿಯೂ ಪರಿಶೀಲಿಸಿ, ಹೂಡಿಕೆಗೆ ಮುಂದುವರಿಯಬೇಕು ಎಂದು ಅವರು ಎಚ್ಚರಿಸಿದರು.

ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆ ಕ್ರಮಗಳು, ಹೂಡಿಕೆ ಮಾಡುವಾಗ ಪಾಲಿಸಬೇಕಾದ ನಿಯಮಗಳು ಮತ್ತು ವಂಚನೆಗಳಿಂದ ದೂರವಿರುವ ವಿಧಾನಗಳ ಬಗ್ಗೆ ಸರಕಾರಿ ನೌಕರರಿಗೆ ಮತ್ತು ವಿವಿಧ ಇಲಾಖೆಗಳ ಯೋಜನಾ ಫಲಾನುಭವಿಗಳಿಗೆ ತಿಳುವಳಿಕೆ ನೀಡುವುದು ಅಗತ್ಯವಿದೆ. ಯಾವುದೇ ರೀತಿಯಲ್ಲಿ ಹಣಕಾಸು ಹೂಡಿಕೆ ಮಾಡುವ ಮೊದಲು ಸರಿಯಾದ ಮಾಹಿತಿ ಸಂಗ್ರಹಿಸಿ, ಪರಿಶೀಲಿತ ಮೂಲಗಳಲ್ಲಿ ಮಾತ್ರ ಹೂಡಿಕೆ ಮಾಡಬೇಕು. ಮತ್ತು ಸಂಶಯಾಸ್ಪದ ಯೋಜನೆಗಳಿಂದ ದೂರವಿರುವುದು ಅವಶ್ಯಕ ಎಂದು ಹೇಳಿದರು.
ಸೆಬಿ, ಸ್ಟಾಕ್ ಎಕ್ಸಚೈಂಜ್, ಶೇರ್, ಡಿಬೆಂಚರ್‍ಗಳ ಬಗ್ಗೆ ಹೂಡಿಕೆ ಪೂರ್ವದಲ್ಲಿ ಮಾಹಿತಿ ಪಡೆಯಬೇಕು. ಅಂದಾಗ ವಂಚನೆಗಳಿಂದ ದೂರವಿರಬಹುದು. ತೆರಿಗೆ ಉಳಿತಾಯ, ತೆರಿಗೆ ವಿಧಿಸುವ ಹೊಸ ನಿಯಮಗಳ ಬಗ್ಗೆ ತಿಳಿದಿರಬೇಕು. ಮೊಬೈಲ್‍ಗಳಿಗೆ ಅನೇಕ ತರನಾದ ಆ್ಯಪ್‍ಗಳು, ಪೈಲ್ಸ್ ಬರುತ್ತವೆ. ಅನಗತ್ಯವಾಗಿ ಅವುಗಳನ್ನು ಡೌನ್‍ಲೋಡ್ ಮಾಡಬಾರದು. ಇದರಿಂದ ನಿಮ್ಮ ಬ್ಯಾಂಕ್ ವಿವರ ಸೇರಿದಂತೆ ವೈಯಕ್ತಿಕ ಮಾಹಿತಿ ಸೋರಿಕೆ, ಕಳುವಾಗುವ ಸಾಧ್ಯತೆ ಇರುತ್ತದೆ. ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

ಸೆಬಿ ಹಿರಿಯ ಅಧಿಕಾರಿಗಳಾದ ಎಂ.ಆರ್.ವೆಂಕಟೇಶ ಬಾಬು ಅವರು ವರ್ಚುವಲ್ ಮೂಲಕ ಸೈಬರ್ ಅರಾಧಗಳು ಮತ್ತು ಸುರಕ್ಷಿತ ಹೂಡಿಕೆಗಳ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ಅಧಿಕಾರಿ ಬದರಿ ನಾರಾಯಣ ಅವರು ಆನ್ ಲೈನ್ ವಂಚನೆಗಳು ಮತ್ತು ಆರ್ಥಿಕ ವಂಚನೆಗಳಿಂದ ಸುರಕ್ಷಿತವಾಗಿರುವ ಕ್ರಮಗಳ ಕುರಿತು ಮಾತನಾಡಿ, ಹೂಡಿಕೆದಾರರು ಮಾರುಕಟ್ಟೆಯಲ್ಲಿ ಉಂಟಾಗುವ ಅಪಾಯಗಳನ್ನು ತಿಳಿದುಕೊಂಡು ಜಾಣ್ಮೆಯಿಂದ ಹೂಡಿಕೆ ಮಾಡಬೇಕು. ಜೊತೆಗೆ ಕೆವೈಸಿ (KYC), ಪಾನ್ (PAN), ಡಿಮ್ಯಾಟ್ ಅಕೌಂಟ್ (Demat Account) ಮುಂತಾದ ಮೂಲಭೂತ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರು ಸಲಹೆ ನೀಡಿದರು.












Click it and Unblock the Notifications