ಧಾರವಾಡ ಪಾಲಿಕೆ ವಿರುದ್ಧ ಗುತ್ತಿಗೆದಾರರ ಲಂಚದ ಆರೋಪ: ಏನಿದು? ಪ್ರಕರಣ
ಧಾರವಾಡ, ಜನವರಿ 10: ಕರ್ನಾಟಕ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೇಳಿ ಬಂದಿದ್ದ ಗುತ್ತಿಗೆದಾರರ ಆರೋಪಗಳು ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿವೆ. ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ಅವರು ಧಾರವಾಡ ಪಾಲಿಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಸಂಬಂಧ ಬಿಲ್ ಕೇಳಲು ಹೋದರೆ ಮೊದಲು ಲಂಚ ಕೊಡುವಂತೆ ಮಹಾನಗರ ಪಾಲಿಕೆಯಲ್ಲಿ ಎಲ್ಲಾ ಹಂತದ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಅವರು ಬುಧವಾರ ಆಪಾದಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು, ಧಾರವಾಡ ಪಾಲಿಕೆಯಲ್ಲಿ ಟೆಂಡರ್ ಕರೆದ ಬಿಲ್ ಕೊಡಲು ಹಣ ಕೊಟ್ಟರೆ ಮಾತ್ರ ಬಿಲ್ ಬರೆಯಲಾಗುತ್ತಿದೆ. ಈ ಸಂಬಂಧ ನಮ್ಮ ಗುತ್ತಿಗೆದಾರರಿಂದ ಸಾಕಷ್ಟು ದೂರು ಬಂದಿವೆ. ಇದನ್ನು ನಿಯಂತ್ರಣಕ್ಕೆ ತರಬೇಕಿದೆ. ಪಾಲಿಕೆ ಆಯುಕ್ತರಿಗೆ ಈ ಸಂಬಂಧ ಮನವಿ ಕೊಡಲಾಗುವುದು. ಇದನ್ನು ಇಲ್ಲೇ ನಿಯಂತ್ರಣ ಮಾಡಿದರೆ ಸರಿ. ಇಲ್ಲವಾದರೆ ಸರ್ಕಾರಕ್ಕೆ ಹಾಗೂ ಲೋಕಾಯುಕ್ತಕ್ಕೆ ಕೂಡ ದೂರು ನೀಡಲಾಗುವುದು ಎಂದರು.
ದುಡ್ಡು ಕೊಟ್ಟರೆ ಮಾತ್ರ ಕೆಲಸ: ವ್ಯವಸ್ಥೆ ಹಾಳು
ಗುತ್ತಿಗೆದಾರರ ಕೆಲಸ ಮುಗಿಸಿದ ಮೇಲೆ ಬಿಲ್ ಬರೆಯಬೇಕು. ಆಗ ಅವರು ಹಣ ಕೇಳುತ್ತಾರೆ. ಹಣ ಕೊಡಲಿಲ್ಲವೆಂದರೆ ಸತಾಯಿಸುತ್ತಾರೆ. ನಮ್ಮವರು ಕೂಡ ತಪ್ಪು ಮಾಡಿದ್ದಾರೆ. ತಮ್ಮ ಹಿತಾಸಕ್ತಿಗಾಗಿ ಹಿಂಬಾಗಿಲಿನಿಂದ ಹೋಗುತ್ತಾರೆ. ದುಡ್ಡು ಕೊಟ್ಟು ಕೆಲಸ ಮಾಡಿಕೊಂಡು ಬಂದು ವ್ಯವಸ್ಥೆ ಹಾಳು ಮಾಡಲು ಹೊರಟಿದ್ದಾರೆ.

ಇದರಿಂದ ಶೇ.95 ರಷ್ಟು ಗುತ್ತಿಗೆದಾರರಿಗೆ ಪೆಟ್ಟಾಗಲಿದೆ. ಶೇ.5 ರಷ್ಟು ಜನ ತಮ್ಮ ಲಾಭಕ್ಕೆ ಬಿಲ್ ಪಾಸ್ ಮಾಡಿಸಿಕೊಂಡವರೂ ಇದ್ದಾರೆ. ನಾವು ಇದನ್ನು ನಿಯಂತ್ರಣಕ್ಕೆ ತರಬೇಕಿದೆ. ಸೆಕ್ಷನ್ ಅಧಿಕಾರಿ, ಝೋನಲ್ ಅಧಿಕಾರಿ, ಕಾರ್ಯಕಾರಿ ಅಧಿಕಾರಿಗಳು ಸಹ ಹಣ ಕೇಳುವ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ.
ಸೂಕ್ತ ಕ್ರಮಕ್ಕೆ ಒತ್ತಾಯಿಸಿದ ಗುತ್ತಿಗೆದಾರರು
ಈ ಕೂಡಲೇ ಗುತ್ತಿಗೆದಾರರಿಂದ ಹಣ ಕೇಳುವವರನ್ನು ಅಮಾನತ್ತು ಮಾಡಿ ಇಲ್ಲವೇ ವರ್ಗಾವಣೆ ಮಾಡಿ ಎಂದು ಈ ಹಿಂದೆಯೇ ಆಯುಕ್ತರಿಗೆ ಮನವಿ ಮಾಡಿದ್ದೆವು. ಈ ಮನವಿಗೆ ಅವರು ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಈಗ ಕೇಳುತ್ತಿದ್ದೇವೆ ಉತ್ತರ ಕೊಡಿ. ಜೊತೆಗೆ ಹಣ ಕೇಳುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಸೂಕ್ತ ಕ್ರಮ ಜರುಗಿಸುವಂತೆ ಅವರು ಮನವಿ ಮಾಡಿದರು.
ಅರ್ಧಕ್ಕೆ ನಿಂತ ಕ್ರೀಡಾಂಗಣ ಮರು ನಿರ್ಮಾಣ
ಧಾರವಾಡದ ಅದು ಅತೀ ದೊಡ್ಡ ಕ್ರೀಡಾಂಗಣವಾಗಿ ಹೊರ ಹೊಮ್ಮ ಬೇಕಿದ್ದ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕ್ರೀಡಾಂಗಣದ ಕಾಮಗಾರಿ ಅರ್ಧಕ್ಕೆ ನಿಂತಿವೆ. ಹೀಗಾಗಿ ಇದು ಕುಡುಕರೆ ಅಡ್ಡೆಯಾಗಿ ಮಾರ್ಪಟ್ಟಿದೆ. ಅಲ್ಲದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಅರ್ಧಕ್ಕೆ ನಿಂತ ಈ ಕ್ರೀಡಾಂಗಣದ ಮರು ಜೀವ ನೀಡಲು ಸರ್ಕಾರ ಸಜ್ಜಾಗಿದೆ ಎಂದು ತಿಳಿದು ಬಂದಿವೆ. ದೆ. ಆದರೆ, ಇದೀಗ ಆ ಕ್ರೀಡಾಂಗಣದ ಮರು ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಇದಾಗಿದ್ದರಿಂದ ಅದರ ಕೆಲಸ ಅರ್ಧಕ್ಕೆ ನಿಂತು ಹೋಗಿ ಹಲವು ದಶಕಗಳೇ ಕಳೆದಿವೆ. ಸದ್ಯ ಇದು ನಿರ್ಜನ ಪ್ರದೇಶದಂತಾಗಿದೆ. ಇದೀಗ ದಾರವಾಡ ಜಿಲ್ಲೆ ಉಸ್ತುವಾರಿ ಹೊಣ ಹೊತ್ತಿರುವ ಸಂತೋಷ್ ಲಾಡ್ ಅವರು ಕಾಮಗಾರಿಯನ್ನು ಕೈಗೆತ್ತಿಕೊಂಡು ಈ ಕ್ರೀಡಾಂಗಣವನ್ನು ಜಾಗತಿಕ ಮಟ್ಟದ ಕ್ರೀಡಾಂಗಣವನ್ನಾಗಿ ಮಾಡುವ ಪಣ ತೊಟ್ಟಿದ್ದಾರೆ.
ಈಗಾಗಲೇ ಖುದ್ದು ಸಚಿವರೇ ಭೇಟಿ ನೀಡಿದ್ದ ತಾಂತ್ರಿಕ ಕಾರಣಗಳಿಂದ ನಿಂತ ಕ್ರೀಡಾಂಗಣವನ್ನು ಪರಿಶೀಲನೆ ಮಾಡಿದರು. ಆದಷ್ಟು ಶೀಘ್ರವೇ ಇಲ್ಲಿನ ಕ್ರೀಡಾಂಗಣ ಸುವ್ಯವಸ್ಥಿತವಾಗಿ ನಿರ್ಮಾಣಗೊಂಡು ಆದಷ್ಟು ಶೀಘ್ರವೇ ಲೋಕಾರ್ಪಣೆಯಾಗಲಿದೆ ಎಂಬುದು ಸ್ಥಳೀಯರ ಆಶಯವಾಗಿದೆ.












Click it and Unblock the Notifications