Dharmasthala Mask Man: ಧರ್ಮಸ್ಥಳ ಕೇಸ್‌ನ ಮಾಸ್ಕ್ ಮ್ಯಾನ್ ಬಂಧನ; ಮುಖ, ಹೆಸರು ಕೂಡ ರಿವೀಲ್!
ಧರ್ಮಸ್ಥಳ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಅನಾಮಿಕ ವ್ಯಕ್ತಿ ಸಂಚಲನ ಸೃಷ್ಟಿಸಿದ್ದ. ಕೋರ್ಟ್ ಮುಂದೆ ಹೇಳಿಕೆ ದಾಖಲು ಮಾಡಿದ್ದರಿಂದ ರಾಜ್ಯ ಸರ್ಕಾರ ಕೂಡ ಎಸ್‌ಐಟಿ ರಚಿಸಿ, ವಿಶೇಷ ತನಿಖೆಗೆ ಗ್ರೀನ್‌ಸಿಗ್ನಲ್ ಕೊಟ್ಟಿತ್ತು. ತನಿಖೆ ನಡೆಯುತ್ತಿದ್ದ ಕಾರಣ ಆ ವ್ಯಕ್ತಿಯ ಮುಖ ಸಾರ್ವಜನಿಕವಾಗಿ ತೋರಿಸದೆ ಮಾಸ್ಕ್ ಹಾಕಲಾಗಿತ್ತು. ಇದೀಗ ಆತನನ್ನು ಎಸ್‌ಐಟಿ ಬಂಧಿಸಿದ್ದು, ಆ ವ್ಯಕ್ತಿಯ ಮುಖ ಕೂಡ ರಿವೀಲ್ ಮಾಡಿದೆ.
ಸಾಕ್ಷಿದಾರನಾಗಿ ಬಂದಿದ್ದ ಈ ಅನಾಮಿಕ ಮಾಸ್ಕ್ಮ್ಯಾನ್ ಎಂದೇ ಗಮನ ಸೆಳೆದಿದ್ದ. ಇದೀಗ ಎಸ್ಐಟಿ ಅಧಿಕಾರಿಗಳು ಆತನನ್ನು ಬಂಧಿಸಿದ್ದು, ಆ ವ್ಯಕ್ತಿಯ ಮೂಲ ಹೆಸರು ಸಿ.ಎನ್.ಚಿನ್ನಯ್ಯ ಅಲಿಯಾಸ್ ಚೆನ್ನ ಎಂದು ತಿಳಿದುಬಂದಿದೆ. ಈ ಮಾಸ್ಕ್ಮ್ಯಾನ್ನ ಹಿನ್ನೆಲೆ ಏನೆಂದು ಯಾರಿಗೂ ತಿಳಿದಿರಲಿಲ್ಲ. ಇದೀಗ ಎಸ್ಐಟಿ ಅಧಿಕಾರಿಗಳು ದಾಖಲೆ ಸಮೇತ ಈತನ ಹಿನ್ನೆಲೆಯನ್ನು ಬಹಿರಂಗಪಡಿಸಿದ್ದಾರೆ. ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆತನನ್ನು 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ಈ ಚಿನ್ನಯ್ಯ ಮೂಲತಃ ಮಂಡ್ಯ ಜಿಲ್ಲೆಯವನು ಎಂದು ಹೇಳಲಾಗುತ್ತಿದೆ. ಈತ ನದಿಯಲ್ಲಿ ಮುಳುಗಿದ ಹೆಣಗಳಿಂದ ಚಿನ್ನ ಕದಿಯುತ್ತಿದ್ದ ಹಾಗೂ ಮಹಿಳೆಯರ ಮೂಗುತಿ, ಕಿವಿಯೋಲೆ, ಸರಗಳನ್ನೂ ಕದಿಯುತ್ತಿದ್ದ ಕಾರಣಕ್ಕೆ ಈತನಿಗೆ ಚಿನ್ನಪ್ಪ, ಚಿನ್ನಯ್ಯ ಎಂಬ ಹೆಸರು ಬಂದಿದೆಯಂತೆ. ಈತ ಮಂಡ್ಯದ ಚಿಕ್ಕಬಳ್ಳಿ ಗ್ರಾಮದವನು ಎಂದು ಬಹಿರಂಗಪಡಿಸಿದ್ದಾರೆ.
ಈತನನ್ನು ಮದುವೆಯಾಗಿ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಇದ್ದೆವು ಎಂದು ಮೊದಲ ಪತ್ನಿ ಹೇಳಿದ್ದರು. ಧರ್ಮಸ್ಥಳದಲ್ಲೇ ಈತನಿಗೆ ತಮಿಳುನಾಡು ಮೂಲದ ಮತ್ತೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಇತ್ತು. ಆಕೆಯನ್ನೂ ಮದುವೆಯಾಗಲು ನನ್ನನ್ನು ಓಡಿಸಿದ್ದ ಎಂದು ಆರೋಪ ಮಾಡಿದ್ದರು. ಸದ್ಯ ಎಸ್‌ಐಟಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದೆ. ತಮಿಳುನಾಡಿನ ಈರೋಡನಲ್ಲೂ ಎರಡು ವರ್ಷ ಇದ್ದಿದ್ದಾಗಿ ಆತ ಹೇಳಿದ್ದು, ನಂತರ ಉಜಿರೆಗೆ ಬಂದು ಪಂಚಾಯತ್ನಲ್ಲಿ ಕೆಲಸಕ್ಕೆ ಸೇರಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಬಂಧಿಸಿದ್ದೇಕೆ?
ಧರ್ಮಸ್ಥಳದಲ್ಲಿ ನಾನು ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಆತ ಹೇಳಿದ್ದೆಲ್ಲ ಸುಳ್ಳು ಎಂದು ತಿಳಿದುಬಂದ ಹಿನ್ನೆಲೆ ಬಂಧಿಸಲಾಗಿದೆ. ಮುಸುಕುಧಾರಿಯನ್ನು ರಾತ್ರಿಯಿಡೀ ವಿಚಾರಣೆ ನಡೆಸಿ ಎಸ್‌ಐಟಿ ಬಂಧಿಸಿದೆ. ತಮಿಳುನಾಡಿನಲ್ಲಿದ್ದ ಈ ಚೆನ್ನಯ್ಯಗೆ ಹಣದ ಆಮಿಷ ತೋರಿಸಿ ಧರ್ಮಸ್ಥಳಕ್ಕೆ ಕರೆದುಕೊಂಡಿದ್ದರು ಎಂಬ ಸ್ಫೋಟಕ ವಿಚಾರ ಕೂಡ ಬೆಳಕಿಗೆ ಬಂದಿದೆ. ಸುಜಾತಾ ಭಟ್ ಅವರೂ ತಮ್ಮ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಯೂಟರ್ನ್ ಹೊಡೆದಿದ್ದು, ಈ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ.
ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಆಗಲ್ಲ. ಸುಜಾತಾ ಭಟ್ ಕೇಸ್ ಹಾಗೂ ಸಾಕ್ಷಿ ದೂರುದಾರನ ಹಿಂದೆ ದೊಡ್ಡ ಜಾಲ ಇದೆ ಎಂಬ ಬಗ್ಗೆ ನಾನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ಎಲ್ಲದನ್ನೂ ಎಸ್‌ಐಟಿ ತನಿಖೆ ಮಾಡುತ್ತಿದ್ದು, ಅಂತಿಮ ವರದಿ ಬರುವವರೆಗೆ ನಾನು ಹೇಳಿಕೆ ನೀಡಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸಾಕ್ಷಿ ದೂರುದಾರನನ್ನು ಬಂಧಿಸಿರುವುದು ನಿಜ. ಉಳಿದ ಮಾಹಿತಿಯನ್ನು ಎಸ್‌ಐಟಿ ನೀಡಲಿದೆ ಎಂದಿದ್ದಾರೆ.












Click it and Unblock the Notifications