ಚನ್ನಪಟ್ಟಣ ಗೆಲ್ಲಲ್ಲು ಕನಕಪುರ ಬಂಡೆಯಿಂದ ಅಭಿವೃದ್ಧಿ ಮಂತ್ರ; ಪ್ರತಿ ಪಂಚಾಯ್ತಿಯಲ್ಲಿ ₹2-5 ಕೋಟಿ: ಡಿ ಕೆ ಶಿವಕುಮಾರ್
ಚನ್ನಪಟ್ಟಣ, ಅಕ್ಟೋಬರ್ 04: ಚನ್ನಪಟ್ಟಣ ಕ್ಷೇತ್ರವನ್ನ ಗೆಲ್ಲುವ ನಿಟ್ಟಿನಲ್ಲಿ ಕನಕಪುರ ಬಂಡೆ ಡಿ ಕೆ ಶಿವಕುಮಾರ್ ಅಭಿವೃದ್ದಿ ಕಾರ್ಯಗಳಿಗೆ ಮುಂದಾಗಿದ್ದು, ಚನ್ನಪಟ್ಟಣದ ಪ್ರತಿ ಪಂಚಾಯ್ತಿಯಲ್ಲಿ ₹2 ಕೋಟಿಯಿಂದ ₹5-6 ಕೋಟಿವರೆಗೂ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಚನ್ನಪಟ್ಟಣದ ವಿವಿಧ ಪಂಚಾಯ್ತಿ ಮಟ್ಟದಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿದ ವೇಳೆ ಶಿವಕುಮಾರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಚನ್ನಪಟ್ಟಣದಲ್ಲಿ ₹300 ಕೋಟಿಗೂ ಹೆಚ್ಚಿನ ಅನುದಾನದ ಅಭಿವೃದ್ಧಿ ಯೋಜನೆಗಳನ್ನು ನಮ್ಮ ಸರ್ಕಾರ ಕೈಗೆತ್ತಿಕೊಂಡಿದೆ. ಈ ತಾಲೂಕಿನ ಜನರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಿ, ಫಲಾನುಭವಿಗಳಿಗೆ ಹಂಚಲಾಗುತ್ತಿದೆ. ಪ್ರತಿ ಪಂಚಾಯ್ತಿಯಲ್ಲಿ 100, 150 ಮನೆಗಳನ್ನು ನೀಡಲಾಗುತ್ತಿದೆ. ಇನ್ನು ನೀರಾವರಿ ಕಾಲುವೆ ಅಭಿವೃದ್ಧಿ, ಕೆರೆ ನೀರು ತುಂಬಿಸುವ ಕೆಲಸ ನಡೆಯಲಿದೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಇಡೀ ದಿನ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಶುಕ್ರವಾರ ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಸೇರಿ ಪಂಚಾಯ್ತಿ ಮಟ್ಟದ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುಂದಿನ ಒಂದು ವಾರದಲ್ಲಿ ಉಪಚುನಾವಣೆ ದಿನಾಂಕ ಪ್ರಕಟವಾಗಲಿದ್ದು, ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿ, ನಾವು ಅಭ್ಯರ್ಥಿ ಬಗ್ಗೆ ಆಲೋಚಿಸುತ್ತಿಲ್ಲ. ಇಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕಿ ಎಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ವ್ಯಕ್ತಿ ಹಾಗೂ ಸರ್ಕಾರ ನಾನೇ ಆಗಿದ್ದು, ಅಭ್ಯರ್ಥಿಗಿಂತ ನನ್ನ ಮುಖ ನೋಡಿ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ" ಎಂದು ತಿಳಿಸಿದರು.
ಕುಮಾರಸ್ವಾಮಿ ಅವರ ವಿರುದ್ಧ 50 ಕೋಟಿ ವಸೂಲಿ ಆರೋಪ ಹಾಗೂ ಎಫ್ಐಆರ್ ದಾಖಲಾಗಿರುವ ಕುರಿತು ಮಾತನಾಡಿ, ಗುರುವಾರ ನಡೆದ ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ನಿರತವಾಗಿದ್ದೆ. ಶುಕ್ರವಾರ ಚನ್ನಪಟ್ಟಣ ಪ್ರವಾಸ ಮಾಡುತ್ತಿದ್ದೇನೆ. ಹೀಗಾಗಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಖಾಸಗಿ ವಿಚಾರಕ್ಕೆ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಇಡೀ ಮೈಸೂರು ತುಂಬಾ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅದರ ಸೌಂದರ್ಯವನ್ನು ರಾಜ್ಯದ ಜನತೆ ಕಣ್ಣುತುಂಬಿಕೊಳ್ಳಬೇಕು. ದಸರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ರಾಜ್ಯದ ಎಲ್ಲಾ ಭಾಗಗಳಿಂದ ಜನ ಆಗಮಿಸಿ ಈ ಭವ್ಯ ಆಚರಣೆಯ ಭಾಗವಾಗಬೇಕು ಎಂದು ಮನವಿ ಮಾಡುತ್ತೇನೆ" ಎಂದು ತಿಳಿಸಿದರು.
ಜಾತಿ ಗಣತಿ ವಿಚಾರವಾಗಿ ಡಿ.ಕೆ. ಸುರೇಶ್ ಅವರ ಹೇಳಿಕೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಪಕ್ಷದ ನೀತಿಯಂತೆ ನಾವು ಈ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೂ ನಾವು ನ್ಯಾಯ ಒದಗಿಸಿಕೊಡುತ್ತೇವೆ. ಈ ವರದಿಯಲ್ಲಿ ಏನಾದರೂ ನ್ಯೂನ್ಯತೆ ಇದ್ದರೆ ಸಿದ್ದರಾಮಯ್ಯ, ನಾನು ಹಾಗೂ ನಮ್ಮ ಪಕ್ಷದ ನಾಯಕರು ಕೂತು ಸರಿಪಡಿಸುತ್ತೇವೆ. ಈ ವಿಚಾರವಾಗಿ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.












Click it and Unblock the Notifications