ಲೋಕಸಮರಕ್ಕೆ ದಳಪತಿಗಳು ಸಿದ್ದತೆ; ಲೋಕಸಭಾ ಟಿಕೆಟ್ ವಿಚಾರವಾಗಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಬೀದರ್, ಸೆಪ್ಟೆಂಬರ್ : ಜೆಡಿಎಸ್ - ಬಿಜೆಪಿ ಮೈತ್ರಿ ಮತ್ತು ಟಿಕೆಟ್ ಹಂಚಿಕೆ ವಿಷಯದ ಬಗ್ಗೆ ದೇವೇಗೌಡರು, ಕುಮಾರಸ್ವಾಮಿರವರು ಶೀಘ್ರವೇ ಮಾಹಿತಿ ನೀಡಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಯುವ ನಾಯಕರು, ಚಿತ್ರ ನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಈ ಕುರಿತು ಬೀದರ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೀದರ್ ಟಿಕೆಟ್ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಬಂಡೆಪ್ಪ ಕಾಶಂಪುರ ಅವರು ದೇವೇಗೌಡರ ಕುಟುಂಬದ ಸದಸ್ಯರಿದ್ದಂತೆ. ಈ ವಿಚಾರದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಬೇಕು. ಯಾರನ್ನು ಚುನಾವಣೆಯಲ್ಲಿ ವಿಲ್ಲಿಸಬೇಕು ಎಂಬ ನಿಟ್ಟಿನಲ್ಲಿ ಅವರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.

ದೇವೇಗೌಡರು ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಈಗ ಸಿನಿಮಾ ಶುರು ಮಾಡಿದ್ದೇನಿ. ಸದ್ಯಕ್ಕೆ ಚುನಾವಣಾ ರಾಜಕೀಯದಿಂದ ದೂರವಿರಲು ವೈಯಕ್ತಿಕವಾಗಿ ತೀರ್ಮಾನಿಸಿದ್ದೇನೆ. ಪಕ್ಷದ ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ.
ದೇವೇಗೌಡರು ಕಟ್ಟಿ ಬೆಳೆಸಿದ ಪಕ್ಷವನ್ನು ಕುಮಾರಸ್ವಾಮಿರವರು ನಡೆಸಿಕೊಂಡು ಸಾಗುತ್ತಿದ್ದಾರೆ. ಬಂಡೆಪ್ಪ ಕಾಶಂಪುರ ಅವರಂತ ಹಿರಿಯ ನಾಯಕರ ಕೊಡುಗೆ ಪಕ್ಷಕ್ಕೆ ಇದೆ. ಬಂಡೆಪ್ಪ ಕಾಶಂಪುರ ಕುಟುಂಬಕ್ಕೆ ಇತಿಹಾಸವಿದೆ ಎಂದು ಹೇಳಿದರು.
ಲೋಕಸಭೆಗೆ ನಿಲ್ಲುವ ನಿರ್ಧಾರ ಮಾಡಿಲ್ಲ: ಬಂಡೆಪ್ಪ
ಇನ್ನೂ ಈ ವೇಳೆ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಮಾತನಾಡಿ, ಲೋಕಸಭಾ ಚುನಾವಣೆ ಸ್ಪರ್ಧೆಯ ವಿಷಯದಲ್ಲಿ ಯಾರೂ ಒತ್ತಡ ಹಾಕಿಲ್ಲ. ಈ ಬಗ್ಗೆ ನಾನು ತಲೆ ಕೆಡಸಿಕೊಂಡಿಲ್ಲ ಎಂದು ಹೇಳಿದರು.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಷ್ಠರಾದ ಹೆಚ್ ಡಿ ದೇವೇಗೌಡರು ಹಳೆ ಮೈಸೂರು ಭಾಗದಲ್ಲಿ ನಮಗೆ ಶಕ್ತಿಯಿದೆ. ನಾವು ಬಿಜೆಪಿಗೆ ಸಹಾಯ ಮಾಡುತ್ತೇವೆ. ಈ ಭಾಗದಲ್ಲಿ (ಕಲ್ಯಾಣ ಕರ್ನಾಟಕ) ಅವರು (ಬಿಜೆಪಿಯವರು) ನಮಗೆ ಸಹಾಯ ಮಾಡಬೇಕು ಎಂಬ ನಿಟ್ಟಿನಲ್ಲಿ ಹೇಳಿದ್ದಾರೆ. ನಾವು ಪರಸ್ಪರ ಸಹಾಯ ಮಾಡಿಕೊಂಡು ಸಾಗುವ ನಿಟ್ಟಿನಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಬೀದರ್ ಕೋಟೆ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ ನಿಖಿಲ್
ಖಾಸಗಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೀದರ್ ಗೆ ಬಂದಿದ್ದ ನಿಖಿಲ್ ಕುಮಾರಸ್ವಾಮಿರವರನ್ನು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಕಾಶಂಪುರ ಅವರು ಬೀದರ್ ಕೋಟೆಗೆ ಕರೆ ತಂದು ಕೋಟೆಯನ್ನು ತೋರಿಸಿದರು. ಬೀದರ್ ಕೋಟೆ ನೋಡಿ, ಕೋಟೆಯ ಇತಿಹಾಸ ತಿಳಿದುಕೊಂಡ ನಿಖಿಲ್ ಕುಮಾರಸ್ವಾಮಿರವರು ಹರ್ಷ ವ್ಯಕ್ತಪಡಿಸಿದರು.












Click it and Unblock the Notifications