ಗೌಡ್ರು ಮತ್ತೊಂದು ಬಾರಿಗೆ ಪ್ರಧಾನಿಯಾಗುವ ಸಾಧ್ಯತೆ
ಹಾಸನ, ಏ.16-ಮಾಜಿ ಪ್ರಧಾನಿ ದೇವೇಗೌಡರು ಆಗಾಗ ಜಪಿಸುವಂತೆ ಥರ್ಡ್ ಫ್ರಂಟ್ ಅಧಿಕಾರಕ್ಕೆ ಬರುವ ಸಾಧ್ಯತೆ. ಅಷ್ಟೇ ಅಲ್ಲ ಸ್ವತಃ ದೇವೇಗೌಡರು ಮತ್ತೊಂದು ಬಾರಿಗೆ ದೇಶದ ಪ್ರಧಾನಿಯಾಗುವ ಸಾಧ್ಯತೆಗಳಿವೆ... ಯಾರು ಹೀಗೆ ಹೇಳಿದ್ದು ಅಂದರೆ ದೇವೇಗೌಡರ ಹಿರಿಯ ಪುತ್ರ, ಶಾಸಕ ಎಚ್ ಡಿ ರೇವಣ್ಣ ಅವರು.
ಹೌದು. ನಿನ್ನೆ ಹಾಸನದಲ್ಲಿ ಈ ಬಗ್ಗೆ ಸುಳಿವು ನೀಡಿರುವ ರೇವಣ್ಣ ಅವರು 'ದೇವೇಗೌಡರಿಗೆ ಈಗ ರಾಜಯೋಗ ಆರಂಭವಾಗಿದೆ. ಅವರ ಆಯಸ್ಸು ಇನ್ನೂ 10 ವರ್ಷ ಹೆಚ್ಚಾಗಿದೆ' ಎಂದು ಹೇಳಿದ್ದಾರೆ. (ರಾಜಕೀಯ ಪ್ರಬುದ್ಧತೆ ಇರಬೇಕು: ಗೌಡರಿಗೆ ಕೃಷ್ಣ ಕಿವಿಮಾತು)

'ದೇವೇಗೌಡರು ಅಪ್ಪಟ ಶಿವನ ಭಕ್ತರು. ಈ ಬಾರಿಯ ಚುನಾವಣೆ ದಿನವಾದ ಏಪ್ರಿಲ್ 17 ಶುಭ ದಿನವಾಗಿದೆ. ಅದು ರಾಘವೇಂದ್ರ ಸ್ವಾಮಿಗಳ ವಾರವಾದ ಗುರುವಾರವೂ ಹೌದು. ಈ ಬಾರಿಯ ರಾಜಕೀಯ ತಿರುವಿಗೆ ಈ ಗುರುವಾರದ ದಿನ ವಿಶೇಷವು ನಾಂದಿ ಹಾಡಲಿದೆ ಅಷ್ಟಕ್ಕೂ ಜನತೆಯ ಆಶೀರ್ವಾದ ಇರುವ ತನಕ ಯಾರಿಂದಲೂ ಅವರನ್ನು ರಾಜಕೀಯವಾಗಿ ಅಂತ್ಯ ಮಾಡಲು ಸಾಧ್ಯವಿಲ್ಲ' ಎಂದು ಎದೆಯುಬ್ಬಿಸಿ ರೇವಣ್ಣ ಹೇಳಿದರು.
'ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣ ಅಂತ್ಯವಾಗುತ್ತೋ ಅಥವಾ ಕಾಂಗ್ರೆಸ್ಸಿನ ಕುಟುಂಬ ರಾಜಕಾರಣ ಕೊನೆಗಾಣುತ್ತದೆಯೇ ಕಾದು ನೋಡಿ' ಎಂದೂ ರೇವಣ್ಣ ಮಾರ್ಮಿಕವಾಗಿ ನುಡಿದರು. 'ಕೃಷ್ಣಗೆ ರಾಜಕೀಯ ಪುನರ್ಜನ್ಮ ನೀಡಿದ್ದೇ ದೇವೇಗೌಡ್ರು' ಎಂದೂ ರೇವಣ್ಣ ಹೇಳಿದರು.












Click it and Unblock the Notifications