ಶೆಟ್ಟರ್ Vs ಪ್ರಲ್ಹಾದ್ ಜೋಶಿ: ಶೆಟ್ಟರ್ ಗೆ ಡಿ.ಕೆ.ಶಿವಕುಮಾರ್ ಕೊಟ್ಟ ಬಿಗ್ ಟಾಸ್ಕ್
ನೀವು ರಾಜಕೀಯಕ್ಕೆ ಇಳಿದರೆ ನಾನು ಅದಕ್ಕೂ ಸಿದ್ದ, ಅಭಿವೃದ್ದಿಯ ವಿಚಾರದಲ್ಲಿ ಚರ್ಚೆಗೆ ಬಂದರೆ ಅದಕ್ಕೂ ಬದ್ದ ಎನ್ನುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಿತ್ತೂರು ಕರ್ನಾಟಕ ಭಾಗದಲ್ಲಿ ಮತ್ತೊಂದು ರಾಜಕೀಯ ಜಿದ್ದಿಗೆ ಇಳಿದಿದ್ದಾರೆ. ಆದರೆ, ಈ ಬಾರಿ ನೇರವಾಗಿ ಇಳಿಯದೆ ಇತ್ತೀಚೆಗೆ ಕಾಂಗ್ರೆಸ್ ಸೇರಿಕೊಂಡ ಜಗದೀಶ್ ಶೆಟ್ಟರ್ ಮೂಲಕ.
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಟಿಕೆಟಿನಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿ ಜಗದೀಶ್ ಶೆಟ್ಟರ್ ಮುಖಭಂಗ ಅನುಭವಿಸಿದ್ದರು. ತಮ್ಮದೇ ಹಿಂದಿನ ಪಕ್ಷದ ಶಿಷ್ಯ ಮಹೇಶ್ ಟೆಂಗಿನಕಾಯಿ ವಿರುದ್ದ 34,289 ಮತಗಳ ಅಂತರದಿಂದ ಸೋಲುಂಡಿದ್ದರು. ಈಗ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಗುರುತರ ಜವಾಬ್ದಾರಿಯನ್ನು ಶೆಟ್ಟರ್ ಅವರಿಗೆ ನೀಡಿದ್ದಾರೆ.

ಹುಬ್ಬಳ್ಳಿ - ಧಾರವಾಡ ಮಹಾನಗರಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಇದೇ ತಿಂಗಳ ಇಪ್ಪತ್ತರಂದು ನಡೆಯಲಿದೆ. ಸದ್ಯದ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿ ಸಲೀಸಾಗಿ ಚುನಾವಣೆಯನ್ನು ಗೆಲ್ಲಬಹುದು. ಆದರೆ, ನನ್ನ ಜೊತೆ ಹಲವು ಬಿಜೆಪಿ ಕಾರ್ಪೋರೇಟರುಗಳು ಇದ್ದಾರೆ ಎನ್ನುವ ಜಗದೀಶ್ ಶೆಟ್ಟರ್ ಹೇಳಿಕೆಯಿಂದಾಗಿ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಪ್ರಲ್ಹಾದ್ ಜೋಶಿ ಜೊತೆಗಿನ ಸಂಬಂಧ ಅಷ್ಟಕಷ್ಟೇ
ಬಿಜೆಪಿ ಮುಖಂಡರೊಂದಿಗೆ ಅದರಲ್ಲೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆಗಿನ ಸಂಬಂಧ ಅಷ್ಟಕಷ್ಟೇ ಆದ ನಂತರ ಈ ಪಾಲಿಕೆ ಚುನಾವಣೆಯನ್ನು ಜೋಶಿ ವರ್ಸಸ್ ಶೆಟ್ಟರ್ ಎಂದು ಬಿಂಬಿಸಲಾಗುತ್ತಿದೆ. ಮುಂದಿನ ವರ್ಷ ನಡೆಯಬೇಕಾಗಿರುವ ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿಯಿಂದ ಶೆಟ್ಟರ್ ಅವರು ಪ್ರಲ್ಹಾದ್ ಜೋಶಿ ವಿರುದ್ದ ಸ್ಪರ್ಧಿಸಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ನಡುವೆ, ಶೆಟ್ಟರ್ ಅವರ ರಾಜಕೀಯ ಸಾಮರ್ಥ್ಯವನ್ನು ಪರೀಕ್ಷಿಸುವ ಸವಾಲಿನ ಕೆಲಸವನ್ನು ಡಿಕೆಶಿ ನೀಡಿದ್ದಾರೆ.
ಹುಬ್ಬಳ್ಳಿ - ಧಾರವಾಡ ಪಾಲಿಕೆಯ ಒಟ್ಟು ಸದಸ್ಯರ ಬಲ 82
ಹುಬ್ಬಳ್ಳಿ - ಧಾರವಾಡ ಪಾಲಿಕೆಯ ಒಟ್ಟು ಸದಸ್ಯರ ಬಲ 82. ಇದರಲ್ಲಿ ಹಾಲೀ ಬಿಜೆಪಿ ಸದಸ್ಯರ ಸಂಖ್ಯೆ 39, ಕಾಂಗ್ರೆಸ್ 33, ಎಐಎಂಐಎಂ 3, ಜೆಡಿಎಸ್ 1 ಮತ್ತು 6 ಪಕ್ಷೇತರರು ಇದ್ದಾರೆ. ಮತ್ತೆ ಅಧಿಕಾರಕ್ಕೇರುವುದು ಬಿಜೆಪಿಗೆ ಸುಲಭ ತುತ್ತಾದರೂ, ಬಿಜೆಪಿಯ ಹನ್ನೊಂದು ಸದಸ್ಯರು ನನ್ನ ಜೊತೆಗಿದ್ದಾರೆ ಎನ್ನುವ ಜಗದೀಶ್ ಶೆಟ್ಟರ್ ಹೇಳಿಕೆಯಿಂದಾಗಿ ಪಾಲಿಕೆ ಚುನಾವಣೆಯ ಫಲಿತಾಂಶ ಮಹತ್ವವನ್ನು ಪಡೆದುಕೊಂಡಿದೆ.

ಮೇಯರ್ ಹುದ್ದೆಗೆ ಮಹಿಳೆ (ಸಾಮಾನ್ಯ), ಉಪಮೇಯರ್ ಹುದ್ದೆಗೆ ಸಾಮಾನ್ಯ ಕ್ಯಾಟಗರಿ
"ಜೂನ್ ಇಪ್ಪತ್ತರಂದು ಬೆಳಗ್ಗೆ 9-11ರವರೆಗೆ ನಾಮಪತ್ರ ಸಲ್ಲಿಸಲು ಮತ್ತು ಅಂದೇ ಮಧ್ಯಾಹ್ನದ ಒಂದು ಗಂಟೆಯ ನಂತರ ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದಕ್ಕೆ ಮೊದಲು ನಾಮಪತ್ರ ಹಿಂದಕ್ಕೆ ಪಡೆಯುವುದು, ನಾಮಪತ್ರ ಪರಿಶೀಲನೆ ನಡೆಯಲಿದೆ. ಈ ಬಾರಿ ಮೇಯರ್ ಹುದ್ದೆಗೆ ಮಹಿಳೆ (ಸಾಮಾನ್ಯ) ಮತ್ತು ಉಪಮೇಯರ್ ಹುದ್ದೆಗೆ ಸಾಮಾನ್ಯ ಕ್ಯಾಟಗರಿಯ ಸದಸ್ಯರು ಸ್ಪರ್ಧಿಸಬಹುದಾಗಿದೆ. ಅವಿರೋಧ ಆಯ್ಕೆ ಆಗದೇ ಇದ್ದಲ್ಲಿ, ಸದಸ್ಯರು ಕೈ ಎತ್ತುವ ಮೂಲಕ ಮೇಯರ್, ಉಪಮೇಯರ್ ಆಯ್ಕೆ ಮಾಡಲಿದ್ದಾರೆ"ಎಂದು ಸ್ಥಳೀಯ ಕಮಿಷನರ್ ಪಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ
ಹುಬ್ಬಳ್ಳಿ - ಧಾರವಾಡ ವ್ಯಾಪ್ತಿಯ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಮತ್ತು ಒಂದರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ಮುನ್ನ ಈ ಪಾಲಿಕೆ ಚುನಾವಣೆ ಮಹತ್ವ ಪಡೆದುಕೊಂಡಿರುವುದು ಒಂದು ಕಡೆ. ಇನ್ನೊಂದಡೆ, ಜಗದೀಶ್ ಶೆಟ್ಟರ್ - ಪ್ರಲ್ದಾದ್ ಜೋಶಿ - ಟೆಂಗಿನಕಾಯಿ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಸಂಘ ಪರಿವಾರದ ಪ್ರಾಬಲ್ಯದ ಹುಬ್ಬಳ್ಳಿ - ಧಾರವಾಡ ವ್ಯಾಪ್ತಿ
ಉಪ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಹೇಗಾದರೂ ಮಾಡಿ ಮೇಯರ್ ಚುನಾವಣೆಯನ್ನು ಗೆಲ್ಲಬೇಕು ಎನ್ನುವ ಟಾಸ್ಕ್ ಅನ್ನು ಶೆಟ್ಟರ್ ಅವರಿಗೆ ನೀಡಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸಂಘ ಪರಿವಾರದ ಪ್ರಾಬಲ್ಯದ ಈ ಭಾಗದಲ್ಲಿ ಶೆಟ್ಟರ್ ತಮಗಿರುವ ವೈಯಕ್ತಿಕ ವರ್ಚಸ್ಸಿನ ಮೂಲಕ ಯಶಸ್ಸನ್ನು ಪಡೆಯುತ್ತಾರಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications