Government Employees: ತಪ್ಪು ತಿದ್ದಿದರೆ ಒಪ್ಪಿಕೊಳ್ಳಿ: ಸರ್ಕಾರಿ ನೌಕರರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿವಿಮಾತು

ಬೆಂಗಳೂರು, ಏಪ್ರಿಲ್21: ದೇವರು ಹಾಗೂ ನಮ್ಮ ಮಧ್ಯೆ ಅರ್ಚಕ ಇರುತ್ತಾನೆ. ಅದೇ ರೀತಿ ಸರ್ಕಾರ ಹಾಗೂ ಜನರ ನಡುವೆ ಸರ್ಕಾರಿ ನೌಕರರು ಇರುತ್ತಾರೆ. ನೀವು ಕೆಲಸಕ್ಕಾಗಿ ಜನರನ್ನು ಪದೇ, ಪದೇ ಕಚೇರಿಗೆ ತಿರುಗಿಸುವ ಕೆಲಸ ಮಾಡಬಾರದು. ಧನಾತ್ಮಕವಾಗಿ ಕೆಲಸ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ರಾಜ್ಯ ಸರಕಾರಿ ನೌಕರರ ದಿನಾಚರಣೆ- 2025 ಮತ್ತು ರಾಜ್ಯ ಮಟ್ಟದ ʼಸರ್ವೋತ್ತಮ ಸೇವಾʼ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದ ಅವರು, ಸರ್ಕಾರಿ ನೌಕರನಿಗೆ ಕೆಲಸವಾಗುವ ಬಗ್ಗೆ ತಿಳಿದಿರುತ್ತದೆ. ಆದರೂ ಸಾರ್ವಜನಿಕರನ್ನು ತಿರುಗಿಸುತ್ತಾರೆ. ಕೆಲವರಿಗೆ ಬರೀ ಕೊಕ್ಕೆ ಹಾಕುವುದೇ ಕೆಲಸ. ಕೆಲಸ ಆಗುವಂತಿದ್ದರೂ ಆ ದಾಖಲೆ, ಈ ದಾಖಲೆ ತೆಗೆದುಕೊಂಡು ಬಾ ಎಂದು ತಿರುಗಿಸುತ್ತಾರೆ. ಸಾರ್ವಜನಿಕರು ಸಲಾಂ ಹೊಡೆಯಬೇಕು, ಕಡಲೆ ಕಾಯಿ, ಹಣ್ಣು, ಕೋಳಿ ತಂದುಕೊಡಬೇಕು ಎನ್ನುವ ಧೋರಣೆ ಹೊಂದಿರುತ್ತಾರೆ. ಇಂತಹ ಸನ್ನಿವೇಶಗಳನ್ನು ಈ ಹಿಂದೆ ಗ್ರಾಮೀಣ ಭಾಗದಲ್ಲಿ ನೋಡಿದ್ದೇನೆ. ಇದರ ಬಗ್ಗೆ ರಾಜಕಾರಣದ ಜೀವನದಲ್ಲಿರುವ ನನಗೂ ಅನುಭವಕ್ಕೆ ಬಂದಿದೆ. ನೀವು ಈ ರೀತಿ ಕೆಲಸ ಮಾಡಬಾರದು ಎಂದರು.

Deputy Chief Minister DK Shivakumar Gave Advice To Government Employees

ಹಣ ಇದ್ದರೆ ಕುಟುಂಬವನ್ನು ಮಾತ್ರ ಪೋಷಿಸುತ್ತೇವೆ. ಅಧಿಕಾರ ಇದ್ದರೆ ಜನಸಾಮಾನ್ಯರಿಗೂ ಸಹಾಯ ಮಾಡುವ ಅವಕಾಶ ದೊರೆಯತ್ತದೆ. ಇಂತಹ ಸದಾವಕಾಶ ಸರ್ಕಾರಿ ನೌಕರರಿಗೆ ದೊರೆತಿದೆ. ರಾಜ್ಯದಲ್ಲಿ ಸುಮಾರು 12.5 ಲಕ್ಷ ಸರ್ಕಾರಿ ನೌಕರರು ಇದ್ದೀರಿ. ಯಾರಿಗೂ ಸಿಗದಂತಹ ಅವಕಾಶ ನಿಮಗೆ ಸಿಕ್ಕಿದೆ. 50- 100 ಹುದ್ದೆಗಳಿಗೆ ಲಕ್ಷಾಂತರ ಜನರು ಅರ್ಜಿ ಹಾಕುತ್ತಾರೆ. ಇಂತಹ ಸ್ಪರ್ಧೆಯ ನಡುವೆ ನಿಮಗೆ ಸಿಕ್ಕಿರುವ ಅವಕಾಶ ಸರಿಯಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ನಮ್ಮೆಲ್ಲರ ಬದುಕಿಗೆ ಪೋಷಕರು, ಶಿಕ್ಷಕರು ಸೇರಿದಂತೆ ಅನೇಕರು ಅವಕಾಶಗಳನ್ನು ಮಾಡಿಕೊಡುತ್ತಾರೆ. ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡುತ್ತಿದ್ದೇವೆ. ಶಾಸಕಾಂಗ ತೀರ್ಮಾನ ಮಾಡಿದ್ದನ್ನು ಜಾರಿಗೆ ತರುವ ಕಾರ್ಯಾಂಗ ಸರ್ಕಾರಿ ನೌಕರರು. ನೀವು, ನಾವು ತಪ್ಪು ಮಾಡಿದರೆ ನಮ್ಮನ್ನು ತಿದ್ದುವುದು ನ್ಯಾಯಾಂಗ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಈ ಮೂರು ಕೂಡ ಒಂದೇ ಕಡೆ ಇರುವುದು ಪ್ರಪಂಚದಲ್ಲಿ ಬೇರೆ ಎಲ್ಲಿಯೂ ಇಲ್ಲ. ಜೊತೆಗೆ ಪತ್ರಿಕಾಂಗ ಕೂಡ ತಪ್ಪು ಮಾಡಿದಾಗ ತಿದ್ದುತ್ತದೆ. ನಮ್ಮ ತಪ್ಪು ಹೇಳಿದಾಗ ಕೋಪ ಮಾಡಿಕೊಳ್ಳಬಾರದು. ಬದಲಾಗಿ ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು. ನಾವು ತಪ್ಪು ಮಾಡಿದರೆ ತಾನೇ ಅವರು ಬರೆಯವುದು. ನಾವು ತಪ್ಪೇ ಮಾಡದೇ ಇದ್ದರೆ ಯಾರು ನಮ್ಮ ಬಗ್ಗೆ ಬರೆಯುವುದಿಲ್ಲ ಎಂದರು.

ನಾವು ದೇವಸ್ಥಾನಕ್ಕೆ ಹೋಗಿ ದೇವರ ಬಳಿ ನಮ್ಮ ಕುಟುಂಬ, ಮಕ್ಕಳಿಗೆ ಒಳ್ಳೆಯದಾಗಬೇಕು ಎಂದು ಬೇಡಿಕೊಳ್ಳುತ್ತೇವೆ. ಜನರಿಗೆ ಏನಾದರೂ ತೊಂದರೆ ಉಂಟಾದಾಗ ಮಾತ್ರ ನಿಮ್ಮ ಬಳಿ ಬರುತ್ತಾರೆ. ತೊಂದರೆ ಇಲ್ಲದೇ ಹೋದರೆ ಕೆಲಸ ಸರಾಗವಾಗಿ ಹೋಗುತ್ತದೆ ಎಂದು ಹೇಳಿದರು. ಈ ಹಿಂದೆ ಬೆಂಗಳೂರು ಗ್ರಾಮಾಂತರದ ಜಿಲ್ಲಾಧಿಕಾರಿಯಾಗಿ ಚಿತ್ರದುರ್ಗ ಜಿಲ್ಲೆಯ ಪುಟ್ಟರಂಗಪ್ಪ ಇದ್ದರು. ಒಮ್ಮೆ ನಾನು ಚಿತ್ರಮಂದಿರದ ಪರವಾನಗಿ ಪಡೆಯಲು ಹೋಗಿದ್ದೆ. ಇಂದಿರಾಗಾಂಧಿಯವರ ಹತ್ಯೆ ನಡೆದಿತ್ತು. ಆಗ ಅವರು ರಜೆ ಘೋಷಣೆ ಮಾಡಬಹುದು ನಿನಗೆ ತೊಂದರೆಯಾಗುತ್ತದೆ ಎಂದು ಅಂದೇ ಪರವಾನಗಿ ನೀಡಿದರು. ಇಂದೂ ಸಹ ಅವರನ್ನು ನಾನು ನೆನಪಿಸಿಕೊಳ್ಳುತ್ತೇನೆ. ನೀವು ಸಹಾಯ ಮಾಡಿದರೆ ಸಮಾಜ ಸ್ಮರಣೆ ಮಾಡುತ್ತದೆ. ನೀವು ಇದೇ ರೀತಿ ಕೆಲಸ ಮಾಡಬೇಕು ಎಂದು ಹೇಳಿದರು.

ಸರ್ಕಾರಿ ನೌಕರರು ಕೇವಲ ಸೇವಕರಲ್ಲ, ಸಮಾಜ ಸೇವೆ ಮಾಡಲು ಸಿಕ್ಕಿರುವ ಅವಕಾಶ ಎಂದು ನೀವು ತಿಳಿಯಬೇಕು. ಮರಕ್ಕೆ ಬೇರಿನ ಮೇಲೆ, ಮಕ್ಕಳಿಗೆ ತಾಯಿಯ ಮೇಲೆ, ಭಕ್ತನಿಗೆ ದೇವರ ಮೇಲೆ ನಂಬಿಕೆ, ಅದೇ ರೀತಿ ನಾವು ನಿಮ್ಮ ಮೇಲೆಯೇ ನಂಬಿಕೆ ಇಟ್ಟಿರುತ್ತೇವೆ. ನಾವು ಏನೇ ತೀರ್ಮಾನ ಮಾಡಬಹುದು ಆದರೆ ಅದನ್ನು ಜಾರಿಗೆ ತರುವವರು, ನಾವು ಮಾಡಿರುವ ತೀರ್ಮಾನದಲ್ಲಿರುವ ಲೋಪಗಳನ್ನು ತಿಳಿಸುವವರು ನೀವು ಎಂದು ಹೇಳಿದರು.

ಕೆಂಗಲ್ ಹನುಮಂತಯ್ಯ ಅವರು ದೂರಾಲೋಚನೆ ಇಟ್ಟುಕೊಂಡು ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಿದ್ದಾರೆ. ನಮ್ಮನ್ನು ಜನರು ಐದು ವರ್ಷಗಳಿಗೊಮ್ಮೆ ಮನೆಗೆ ಕಳಿಸುತ್ತಾರೆ. ಆದರೆ ಸರ್ಕಾರಿ ನೌಕರರು 60 ವರ್ಷದ ತನಕ ಜನಸೇವೆ ಮಾಡಬಹುದು. ಜನರ ಬದುಕಿನಲ್ಲಿ ಬದಲಾವಣೆ ತರುವ ತೀರ್ಮಾನ ಮಾಡಿದ್ದೇನೆ ಎಂದು ನಿಮಗೆ ಅನ್ನಿಸಬೇಕು. ಕಾನೂನಿನ ವಿರುದ್ದ ನೀವು ಕೆಲಸ ಮಾಡಿ ಎಂದು ಹೇಳುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಜನಪರವಾಗಿ ಆಲೋಚಿಸಿ ಎಂದರು.

ಸರ್ಕಾರಿ ನೌಕರರಿಗೆ ಗ್ಯಾರಂಟಿ ಯೋಜನೆಗಳಾದ ಉಚಿತ ವಿದ್ಯುತ್, ಬಸ್ ಯೋಜನೆ ಏಕೆ ನೀಡುತ್ತೀರಿ ಎಂದು ಟೀಕೆ ಮಾಡುತ್ತಿದ್ದರು. ಆದರೂ ನಾವು ಎಲ್ಲರಿಗೂ ಸೌಲಭ್ಯ ನೀಡಿದ್ದೇವೆ. ನಮ್ಮ ಯಶಸ್ಸು ನಮ್ಮ ಕೈಯಲ್ಲಿದೆ. ನಿಮ್ಮ ಬದುಕಿಗೆ, ಯಶಸ್ಸಿಗೆ ನಮ್ಮ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೆಲಸ ಮಾಡಲಿದೆ ಎಂದರು. ನಿಮ್ಮ ಪರವಾಗಿ ತೀರ್ಮಾನ ಮಾಡಲು ಅಂಜುಮ್ ಪರ್ವೇಜ್ ಅವರ ನೇತೃತವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಷಡಕ್ಷರಿ ಅವರು ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಉತ್ತಮ ತಂಡ ನಿಮ್ಮ ಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+