ಹೈಕಮಾಂಡ್‌ಗೆ ಅಚ್ಚರಿ ತಂದ ಕರ್ನಾಟಕ ಕಾಂಗ್ರೆಸ್ ಬೇಡಿಕೆ!
ಬೆಂಗಳೂರು, ಸೆಪ್ಟೆಂಬರ್ 13 : ಕರ್ನಾಟಕದ ವಿರೋಧ ಪಕ್ಷದ ನಾಯಕನ ಆಯ್ಕೆ, ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಬಗ್ಗೆ ನವದೆಹಲಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್‌ನ ಕೆಲವು ನಾಯಕರು ಹೊಸ ಬೇಡಿಕೆಯೊಂದನ್ನು ಹೈಕಮಾಂಡ್ ಮುಂದೆ ಇಟ್ಟಿದ್ದು, ಅಚ್ಚರಿಗೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿದ್ದಾರೆ. ಶುಕ್ರವಾರ ಸಂಜೆ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ.
ಕೆಪಿಸಿಸಿಯಲ್ಲಿ ಮಹತ್ವದ ಬದಲಾವಣೆಗೆ ಸೂಚನೆ
ವಿರೋಧ ಪಕ್ಷದ ನಾಯಕನ ಆಯ್ಕೆ, ಕೆಪಿಸಿಸಿ ಪದಾಧಿಕಾರಿಗಳ ನೇಮಕದ ಜೊತೆಗೆ ಹೊಸ ಬೇಡಿಕೆಯೊಂದನ್ನು ಹೈಕಮಾಂಡ್ ಮುಂದೆ ಇಡಲಾಗಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್‌ರನ್ನು ಬದಲಾವಣೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ.
ಬೆಂಗಳೂರಲ್ಲಿ ಕೆ.ಸಿ.ವೇಣುಗೋಪಾಲ್ : ಸರಣಿ ಸಭೆಗಳು
2018ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗಲೇ ಕೆ. ಸಿ. ವೇಣುಗೋಪಾಲ್ ಬದಲಾವಣೆ ಬಗ್ಗೆ ಚರ್ಚೆ ಆರಂಭವಾಗಿತ್ತು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಚರ್ಚೆ ತಣ್ಣಗಾಗಿತ್ತು. ಈಗ ಪುನಃ ಹೈಕಮಾಂಡ್ ಮುಂದೆ ಈ ಬೇಡಿಕೆ ಇಡಲಾಗಿದೆ.
ವೇಣುಗೋಪಾಲ್ ಮೇಲೆ ಲೈಂಗಿಕ ಕಿರುಕುಳ ಆರೋಪ, ಕಾಂಗ್ರೆಸ್ಸಿಗೆ ಹಿನ್ನಡೆ

ಪಕ್ಷದ ಸೋಲಿಗೆ ಕಾರಣ
2013ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೂ 2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಯಶಸ್ಸುಗಳಿಸಲಿಲ್ಲ. ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಕಾರಣ ಎಂದು ಕೆಲವು ನಾಯಕರು ಆರೋಪ ಮಾಡುತ್ತಿದ್ದಾರೆ. ಉಸ್ತುವಾರಿ ಬದಲಾವಣೆಗೆ ಇದನ್ನು ಪ್ರಮುಖ ಕಾರಣ ಎಂದು ಪಟ್ಟಿ ಮಾಡಲಾಗುತ್ತಿದೆ.

ಮೈತ್ರಿ ಸರ್ಕಾರ ಪತನ
2018ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆದರೆ, ಒಂದೇ ವರ್ಷದಲ್ಲಿ ಸರ್ಕಾರ ಪತನಗೊಳ್ಳಲು ಕಾಂಗ್ರೆಸ್‌ನಲ್ಲಿನ ಗೊಂದ ಕಾರಣವಾಯಿತು. ಈ ಸಂದರ್ಭದಲ್ಲಿ ಕೆ. ಸಿ. ವೇಣುಗೋಪಾಲ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾದರು ಎಂದು ಆರೋಪ ಮಾಡಲಾಗುತ್ತಿದೆ.

ಏಕ ಪಕ್ಷೀಯ ತೀರ್ಮಾನ
ಕೆ. ಸಿ. ವೇಣುಗೋಪಾಲ್ ಚುನಾವಣೆ ಸಿದ್ಧತೆ, ಟಿಕೆಟ್ ಹಂಚಿಕೆ, ಮೈತ್ರಿ ಸರ್ಕಾರ ಬಂದ ಮೇಲೆ ಸಂಪುಟ ವಿಸ್ತರಣೆ ಮುಂತಾದ ವಿಚಾರಗಳಲ್ಲಿ ಏಕಪಕ್ಷೀಯ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ಹಲವು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ. ಆದ್ದರಿಂದ, ಉಸ್ತುವಾರಿಯನ್ನು ಬದಲಾವಣೆ ಮಾಡಿ ಎಂದು ಬೇಡಿಕೆ ಇಡಲಾಗಿದೆ.

ಹೈಕಮಾಂಡ್ ನಾಯಕರಿಗೆ ಆಪ್ತರು
ಕೆ. ಸಿ. ವೇಣುಗೋಪಾಲ್ ಹೈಕಮಾಂಡ್ ನಾಯಕರಿಗೆ ಆಪ್ತರು. ಅದರಲ್ಲೂ 2019ರ ಲೋಕಸಭಾ ಚುನಾವಣೆಯಲ್ಲಿ ಕಣ್ಣೂರು ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಗೆಲುವು ಸಾಧಿಸುವಲ್ಲಿ ಕೆ. ಸಿ. ವೇಣುಗೋಪಾಲ್ ಪಾತ್ರ ಪ್ರಮುಖವಾಗಿದೆ. ಆದ್ದರಿಂದ, ಉಸ್ತುವಾರಿ ಬದಲಾವಣೆಗೆ ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕು.