Karnataka Cabinet expansion; ದೆಹಲಿಗೆ ಹೊರಟ ಸಿಎಂಗೆ ಕಾಂಗ್ರೆಸ್ ಟ್ವೀಟ್ ಬಾಣ
ಬೆಂಗಳೂರು, ಡಿಸೆಂಬರ್ 26: 'ವಾರಕ್ಕೊಮ್ಮೆ ದೆಹಲಿ ವಿಮಾನ ಹತ್ತುವುದರಿಂದ ರಾಜ್ಯಕ್ಕಾಗಿರುವ ಪ್ರಯೋಜನವೇನು?' ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು ಪ್ರಶ್ನೆ ಮಾಡಿದೆ.
ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯನ್ನು 'ದೆಹಲಿ ಟೂರಿಸ್ಟ್' ಎಂದು ಟೀಕೆ ಮಾಡಿದೆ. ಅವರಿಗೆ ಆಡಳಿತದಲ್ಲಿ ಗಾಂಭೀರ್ಯತೆ ಇಲ್ಲ ಎಂದು ಆರೋಪಿಸಿದೆ.
ಸೋಮವಾರ ಸಂಜೆ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗ ಸಿಎಂ ದೆಹಲಿ ವಿಮಾನ ಹತ್ತುತ್ತಿರುವುದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.

ತನ್ನ ಟ್ವೀಟ್‌ನಲ್ಲಿ ಕಾಂಗ್ರೆಸ್ ಪಕ್ಷ, 'ಅಧಿವೇಶನದಲ್ಲಿ ಭಾಗವಹಿಸುವ ಆಸಕ್ತಿ ಇಲ್ಲದೇ ದೆಹಲಿಗೆ ಹೊರಟಿರುವ ದೆಹಲಿ ಟೂರಿಸ್ಟ್ ಬಸವರಾಜ ಬೊಮ್ಮಾಯಿ ಅವರಿಗೆ ಆಡಳಿತದಲ್ಲಿ ಗಾಂಭೀರ್ಯತೆ ಇಲ್ಲ. ಅಧಿವೇಶನ ಉತ್ತರ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದು ಈ ತಾತ್ಸಾರವೇ? ಅಥವಾ ಜನರ ಸಮಸ್ಯೆಯ ಬಗ್ಗೆ ಅಸಡ್ಡೆಯೇ?' ಎಂದು ಪ್ರಶ್ನೆ ಮಾಡಿದೆ.
ಸಂಪುಟ ವಿಸ್ತರಣೆ?; ಮೀಸಲಾತಿ ಹೆಚ್ಚಳ ಬೇಡಿಕೆ, ಸಂಪುಟ ವಿಸ್ತರಣೆ, ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ನಡೆಸುವ ವಿಚಾರದ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳು ಸೋಮವಾರ ರಾತ್ರಿ ದೆಹಲಿಗೆ ತೆರಳಲಿದ್ದಾರೆ. ಡಿಸೆಂಬರ್ 30ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯಕ್ಕೆ ಆಗಮಿಸಲಿದ್ದಾರೆ. ಇದಕ್ಕೂ ಮೊದಲು ಸಿಎಂ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ.

ಮಂಗಳವಾರ ಕರ್ನಾಟಕದ 2023ರ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚಿಸಲು ಹೈಕಮಾಂಡ್ ನಾಯಕರು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮುಖ್ಯಮಂತ್ರಿಗಳು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯನ್ನು ಕರ್ನಾಟಕ ಅಥವ ಮಧ್ಯ ಪ್ರದೇಶದಲ್ಲಿ ನಡೆಸಲು ವರಿಷ್ಠರು ತೀರ್ಮಾನಿಸಿದ್ದಾರೆ. ಕರ್ನಾಟಕದಲ್ಲಾದರೆ ಬೆಂಗಳೂರು ಅಥವ ಮೈಸೂರಿನಲ್ಲಿ ನಡೆಸುವ ಕುರಿತು ಬಸವರಾಜ ಬೊಮ್ಮಾಯಿ ಪಕ್ಷದ ವರಿಷ್ಠರ ಜೊತೆ ಚರ್ಚಿಸಲಿದ್ದಾರೆ.
ರಾಷ್ಟ್ರೀಯ ಕಾರ್ಯಾಕಾರಣಿ ನಡೆಸಲು ಕರ್ನಾಟಕ, ಮಧ್ಯ ಪ್ರದೇಶ ಎರಡೂ ರಾಜ್ಯಗಳು ಪ್ರಸ್ತಾವನೆ ಸಲ್ಲಿಸಿವೆ. 2023ರ ಏಪ್ರಿಲ್‌ನಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ರಾಜ್ಯದಲ್ಲಿಯೇ ಕಾರ್ಯಕಾರಣಿ ನಡೆಸಲು ಸಹ ವರಿಷ್ಠರು ಬಯಸಿದ್ದಾರೆ.
ಕಳೆದ ವಾರ ಕೆ. ಎಸ್. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿಗಳನ್ನು ಬೆಳಗಾವಿಯ ವಿಟಿಯು ಗೆಸ್ಟ್ ಹೌಸ್‌ನಲ್ಲಿ ಭೇಟಿಯಾಗಿದ್ದರು. ಆಗ ಮುಖ್ಯಮಂತ್ರಿಗಳು ಮುಂದಿನ ವಾರ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ಕೊಟ್ಟಿದ್ದರು.
ಸಚಿವ ಸಂಪುಟ ವಿಸ್ತರಣೆಗೆ ಒತ್ತಡ ಹೆಚ್ಚಿದ್ದರೂ ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಮಾತ್ರ ಬಾಕಿ ಇದೆ. ಆದ್ದರಿಂದ ವರಿಷ್ಠರು ಒಪ್ಪಿಗೆ ನೀಡುವ ಸಾಧ್ಯತೆ ತೀರಾ ಕಡಿಮೆ ಇದೆ ಎಂಬ ಮಾಹಿತಿ ಇದೆ. ಕೆಲವು ಶಾಸಕರು ಮಾತ್ರ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಉಳಿದವರು ಈಗಾಗಲೇ ಮುಂದಿನ ಚುನಾವಣೆಯತ್ತ ಗಮನ ಹರಿಸಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಅಸಮಾಧಾನ ಹೆಚ್ಚಾಗುವ ನಿರೀಕ್ಷೆ ಇದೆ. ಆದ್ದರಿಂದ ಯಥಾಸ್ಥಿತಿ ಕಾಪಾಡಿಕೊಳ್ಳಲು ನಾಯಕರು ಬಯಸಿದ್ದಾರೆ. ಇದರಿಂದಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುವುದೇ ಅನುಮಾನವಾಗಿದೆ.
ಮುಖ್ಯಮಂತ್ರಿಗಳು ಪದೇ ಪದೇ ದೆಹಲಿಗೆ ಭೇಟಿ ನೀಡುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಈಗ ಮತ್ತೆ ದೆಹಲಿ ಭೇಟಿ ಮುಂದಿಟ್ಟಿಕೊಂಡು ಕಾಂಗ್ರೆಸ್ ಟ್ವೀಟ್ ಬಾಣ ಬಿಟ್ಟಿದೆ.












Click it and Unblock the Notifications