ಎಫ್‌ಎಸ್‌ಎಲ್ ವರದಿ ವಿಳಂಬ ಕಾರಣಕ್ಕೆ ಜಾಮೀನು ಕಡ್ಡಾಯವಲ್ಲ-ಹೈಕೋರ್ಟ್
ಬೆಂಗಳೂರು ಏ.8. ಮಾದಕ ದ್ರವ್ಯ ಕಳ್ಳ ಸಾಗಾಣೆ ಪ್ರಕರಣದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿ ವಿಳಂಬವಾದ ಮಾತ್ರಕ್ಕೆ ಕಡ್ಡಾಯ ಜಾಮೀನು ನೀಡಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಆರೋಪಪಟ್ಟಿ ದಾಖಲಿಸುವಾಗ ಎಫ್ಎಸ್ಎಲ್ ವರದಿ ಸಲ್ಲಿಸಿರಲಿಲ್ಲ. ಹಾಗಾಗಿ ಅಪರಾಧ ದಂಡ ಸಂಹಿತೆ (ಸಿಆರ್ ಪಿಸಿ) ಸೆಕ್ಷನ್ 167(2) ಅಡಿ ಕಡ್ಡಾಯ ಜಾಮೀನು ನೀಡಬೇಕೆಂದು ಆರೋಪಿ ಸೈಯದ್ ಮೊಹಮ್ಮದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾ.ಎಂ. ನಾಗಪ್ರಸನ್ನ ರವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದೆ.
ಎಫ್ಎಸ್ಎಲ್ ವರದಿ ವಿಳಂಬವಾದ ಮಾತ್ರಕ್ಕೆ ಆರೋಪಪಟ್ಟಿ ಅಪೂರ್ಣವಲ್ಲ. ಕಾನೂನಿನಲ್ಲಿ ನಂತರವೂ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಲು, ಅದರ ಜೊತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನೂ ಸಹ ಸಲ್ಲಿಸಲು ಅವಕಾಶವಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಕೋರ್ಟ್ ಆದೇಶವೇನು?
ಮಾನಸ ಕೃಷ್ಣ ಟಿ.ಕೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಈಗಾಗಲೇ, ಆರೋಪ ಪಟ್ಟಿಯೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇಲ್ಲದಿದ್ದರೂ, ಆ ವರದಿಯನ್ನು ಸಮಗ್ರ ವರದಿಯಲ್ಲವೆಂದು ಹೇಳಲಾಗದು ಎಂದು ಆದೇಶಿಸಿದೆ. ಅಂತೆಯೇ ಎಫ್ ಎಸ್ ಎಲ್ ವರದಿ ಸಲ್ಲಿಸಿಲ್ಲವೆಂಬ ಕಾರಣಕ್ಕೆ ಅಪರಾಧ ದಂಡ ಸಂಹಿತೆಯ ಪ್ರಕಾರ ಆರೋಪಿ ಜಾಮೀನು ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಎಫ್ ಎಸ್ ಎಲ್ ವರದಿ ವಿಳಂಬವಾಗಿದೆ ಅಥವಾ ಸಲ್ಲಿಸಿಲ್ಲವೆಂಬ ಕಾರಣಕ್ಕೆ ಆರೋಪಿಗೆ ಜಾಮೀನು ಪಡೆಯುವ ಹಕ್ಕು ದೊರೆಯುವುದಿಲ್ಲ. ಪೊಲೀಸರು ಸೆಕ್ಷನ್ 173 (2)ರ ಪ್ರಕಾರ ಅಗತ್ಯ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದರೆ ಸಾಕು ಎಂದು ನ್ಯಾಯಪೀಠ ಹಲವು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಆದೇಶವನ್ನು ಹೊರಡಿಸಿದೆ.
ಪ್ರಕರಣದಲ್ಲಿ ಮತ್ತಷ್ಟು ತನಿಖೆ ನಡೆಸಲು ಆದೇಶಿಸಿರುವ ನ್ಯಾಯಾಲಯ, ಪೊಲೀಸರು ನಿಯಮದಂತೆ ತನಿಖೆ ಮುಂದುವರಿಸಬಹುದು ಮತ್ತು ಆರೋಪಪಟ್ಟಿಯನ್ನೂ ಸಹ ಸಲ್ಲಿಸಬಹುದು. ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಇದೇ ವಿಚಾರದ ಬಗ್ಗೆ ಅಂದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇಲ್ಲದಿದ್ದರೂ ಸಹ ಪೊಲೀಸರು ಸಲ್ಲಿಸಿರುವ ತನಿಖಾ ವರದಿಯನ್ನು ಅಂತಿಮವೆಂದು ಪರಿಗಣಿಸಬಹುದೇ ಅಥವಾ ಬೇಡವೇ ಎಂಬ ಬಗ್ಗೆಯೂ ಸುಪ್ರೀಂಕೋರ್ಟ್ ಪರಿಶೀಲನೆ ನಡೆಸುತ್ತಿದೆ.
ಅರ್ಜಿದಾರರ ವಾದ:
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇಲ್ಲದೆ, ಸಲ್ಲಿಸಿರುವ ಅಂತಿಮ ವರದಿಗೆ ಮಾನ್ಯತೆ ಇಲ್ಲ. ಹಾಗಾಗಿ ಆ ಆರೋಪಪಟ್ಟಿ ದೋಷ ಪೂರಿತವಾಗಿದೆ. ಆದ್ದರಿಂದ ಆರೋಪಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ:
ಆರೋಪಿ ಕಾರಿನಲ್ಲಿ ತೆರಳುತ್ತಿದ್ದಾಗ ಆತನಿಂದ 60.60 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಆನಂತರ ಆತನ ಮೇಲೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಸೆಕ್ಷನ್ 23 ಮತ್ತು3 ಹಾಗೂ ಮಾದಕ ವಸ್ತುಗಳ ಕಳ್ಳ ಸಾಗಾಣೆ ತಡೆ ಕಾಯಿದೆ (ಎನ್ ಡಿಪಿಎಸ್ ) ಅಡಿಯಲ್ಲಿ ಬಂಧಿಸಲಾಗಿತ್ತು.
ತನಿಖೆಯ ನಂತರ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇಲ್ಲದೆ ಅಂತಿಮ ತನಿಖಾ ವರದಿಯನ್ನು ಸಲ್ಲಿಸಿದ್ದರು. ಆದರೆ ಆರೋಪಿ, ಎಫ್ ಎಸ್ ಎಲ್ ವರದಿ ಇಲ್ಲದೆಯೇ ಅಂತಿಮ ವರದಿ ಆರೋಪಪಟ್ಟಿ ಸಲ್ಲಿಸಿರುವುದನ್ನು ಪ್ರಶ್ನಿಸಿ, ಇಡೀ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದನು.












Click it and Unblock the Notifications