ರಾಜ್ಯ ರಾಜಕೀಯದಲ್ಲೀಗ ಪಕ್ಷಾಂತರ ಪರ್ವ: ಯಾರಿಗೆ ಲಾಭ? ಯಾರಿಗೆ ನಷ್ಟ?
ಬೆಂಗಳೂರು, ಅಕ್ಟೋಬರ್ 04: ವಿಧಾನಸಭಾ ಚುನಾವಣೆ ನಂತರ ರಾಜ್ಯದ ರಾಜಕೀಯ ಮಗ್ಗಲು ಬದಲಿಸಿದೆ. ಏನೆಲ್ಲ ಆಗಲ್ಲ ಅಂಥ ಅಂದುಕೊಂಡಿದ್ದೆಲ್ಲವೂ ಆಗುತ್ತಿದೆ. 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರನ್ನು ಪಕ್ಷಕ್ಕೆ ಎಳೆದುಕೊಂಡು ಗುಡ್ಡೆ ಹಾಕಿಕೊಳ್ಳುವ ತವಕದಲ್ಲಿದೆ. ಇದರ ಹಿಂದೆಯೂ ಲೆಕ್ಕಚಾರ ಅಡಗಿದೆ. ಆದರೆ ಈ ಪ್ರಯತ್ನಗಳು ದೀರ್ಘ ಬಾಳಿಕೆ ಬರುತ್ತವೆಯಾ? ಗೊತ್ತಿಲ್ಲ.
ಅಧಿಕಾರದಲ್ಲಿರುವ ಪಕ್ಷಕ್ಕೆ ಬೇರೆ ಬೇರೆ ಪಕ್ಷಗಳಿಂದ ನಾಯಕರು ಸೇರುವುದು ಹೊಸತೇನಲ್ಲ. ಈ ರೀತಿಯ ಪಕ್ಷಾಂತರಿ ನಾಯಕರು ಎಲ್ಲ ಕಾಲದಲ್ಲಿಯೂ ಇದ್ದೇ ಇರುತ್ತಾರೆ. ಮತ್ತು ನಾಳೆ ಇನ್ನೊಂದು ಪಕ್ಷಕ್ಕೆ ಜಿಗಿಯಲು ಅವರು ಹಿಂದೇಟು ಹಾಕುವುದಿಲ್ಲ. ಈಗ ಕಾಂಗ್ರೆಸ್ ನಾಯಕರು ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ ಎಂಬ ಕರೆ ನೀಡಿ ಬಿಜೆಪಿ ಮತ್ತು ಜೆಡಿಎಸ್ ನಿಂದ ಬರುವ ನಾಯಕರಿಗೆ ಶಾಲು ಹಾಕಿ ಪಕ್ಷಕ್ಕೆ ತುಂಬಿಸಿಕೊಳ್ಳುತ್ತಿದ್ದಾರೆ. ಇದು ಎದುರಾಳಿಗಳ ಶಕ್ತಿಯನ್ನು ಕುಗ್ಗಿಸುವ ಮತ್ತು ಕಾಂಗ್ರೆಸ್ ಪಕ್ಷದ ಬಲವನ್ನು ಹಿಗ್ಗಿಸುವ ಕೆಲಸದಂತೆ ಕಂಡು ಬರುತ್ತಿದೆ.

ಆಪರೇಷನ್ ಕಮಲದ ಮುಂದೆ ಈಗ ಕಾಂಗ್ರೆಸ್ ನಾಯಕರು ಮಾಡುತ್ತಿರುವುದು ದೊಡ್ಡದೇನಲ್ಲ. ಸದ್ಯಕ್ಕೆ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವ ನಾಯಕರನ್ನು ನೋಡಿದರೆ ಸಣ್ಣಪುಟ್ಟ ಮೀನುಗಳಷ್ಟೆ 'ಕೈ' ಗಾಳಕ್ಕೆ ಬೀಳುತ್ತಿವೆ. ಮುಂದೆ ತಿಮಿಂಗಿಲಗಳೇ ಬಿದ್ದರೂ ಬೀಳಬಹುದು ಅದು ಆಚೆಗಿರಲಿ. ಈ ಹಿಂದೆ ಬಿಜೆಪಿ ನಾಯಕರು ಕಾಂಗ್ರೆಸ್ ನಿಂದ ಘಟಾನುಘಟಿ ನಾಯಕರನ್ನೇ ಎಳೆದು ತಂದಿದ್ದರು. ಅದಕ್ಕಿಂತ ಹೆಚ್ಚಾಗಿ ಈಗ ಜೆಡಿಎಸ್ ನ್ನೇ ಜತೆಗೆ ಎಳೆದುಕೊಂಡಿದ್ದಾರೆ. ಇದರ ಮುಂದೆ ಆಪರೇಷನ್ ಹಸ್ತ ದೊಡ್ಡದಾಗಿ ಕಾಣುತ್ತಿಲ್ಲ.
20 ಸ‍್ಥಾನ ಗೆಲ್ಲುವುದು ಕೈ ಅಜೆಂಡಾ
ಇವತ್ತು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವ ಯಾವುದೇ ನಾಯಕನಿರಲಿ ಆತ ಸೇರ್ಪಡೆಗೊಂಡ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಕೊನೆಯವರೆಗೂ ಉಳಿಯುತ್ತಾನಾ? ಎಂಬುದಕ್ಕೆ ಖಚಿತತೆ ಕಡಿಮೆಯೇ.. ನಾಳೆ ಅಧಿಕಾರದ ಆಸೆಗೆ ಮಗ್ಗಲು ಬದಲಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಈಗಾಗಲೇ ಕೆಲವರು ಘರ್ ವಾಪಸ್ಸಿಯಾದ ಉದಾಹರಣೆಗಳಿವೆ. ಯಾವುದು ಗಟ್ಟಿ ಯಾವುದು ಜೊಳ್ಳು ಎನ್ನುವುದು ಲೋಕಸಭಾ ಚುನಾವಣೆ ಬಳಿಕ ಗೊತ್ತಾಗಬಹುದೇನೋ?

ಲೋಕಸಭಾ ಚುನಾವಣೆ ಹೊತ್ತಿಗೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಎಷ್ಟು ನಾಯಕರು ಬರುತ್ತಾರೋ ಅಷ್ಟು ನಾಯಕರನ್ನು ಎಳೆದುಕೊಂಡರೆ ಅವರ ಜತೆಯಲ್ಲಿ ಒಂದಷ್ಟು ಮತಗಳನ್ನುನ ಗಟ್ಟಿ ಮಾಡಿಕೊಳ್ಳಬಹುದು ಎನ್ನುವುದು ಕಾಂಗ್ರೆಸ್ ನಾಯಕರ ಆಲೋಚನೆಯಾಗಿದೆ. ಹೀಗಾಗಿ ಪಕ್ಷಕ್ಕೆ ಬರುವ ನಾಯಕರು ಮತ್ತು ಕಾರ್ಯಕರ್ತರನ್ನು ಸೇರಿಸಿಕೊಳ್ಳುತ್ತಲೇ ಹೋಗುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಸ್ಥಾನ ಗೆಲ್ಲಬೇಕೆನ್ನುವುದು ಕಾಂಗ್ರೆಸ್ ನ ಅಜೆಂಡಾವಾಗಿದೆ. ರಾಜ್ಯದಲ್ಲಿ 135 ವಿಧಾನಸಭಾ ಸ್ಥಾನ ಗೆದ್ದವರಿಗೆ 20 ಸ‍್ಥಾನ ಗೆಲ್ಲುವುದು ಕಷ್ಟವೇನಲ್ಲ ಎಂಬುದು ಅವರಲ್ಲಿರುವ ವಿಶ್ವಾಸವಾಗಿದೆ. ಅದು ಸಾಧ‍್ಯವಾಗಲೂ ಬಹುದು.
ಪಕ್ಷಾಂತರಿ ನಾಯಕರಿಂದ ಮತ ಬರುತ್ತಾ?
2024ರ ಲೋಕಸಭಾ ಚುನಾವಣೆಗೆ ಕನಿಷ್ಟ ಆರೇಳು ತಿಂಗಳು ಬಾಕಿಯಿದೆ. ಈಗ ಕಾಂಗ್ರೆಸ್ ಸರ್ಕಾರ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಹೊಸ ಅಧ‍್ಯಾಯ ಬರೆದಿದೆ. ಅದು ಕೆಲವರಿಗೆ ಅನುಕೂಲವೂ ಆಗಿದೆ. ಅದೇ ಜನಪ್ರಿಯತೆಯ ಗುಂಗಿನಲ್ಲೇ ಲೋಕಸಭಾ ಚುನಾವಣೆಯಲ್ಲಿ ಜನರ ಬಳಿಗೆ ಹೋಗುವ ತೀರ್ಮಾನವನ್ನು ಮಾಡಿದ್ದಾರೆ. ಮತ್ತು ಚುನಾವಣೆಯಲ್ಲಿ ಕನಿಷ್ಟ ಇಪ್ಪತ್ತು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆಯೂ ಅವರಲ್ಲಿದೆ. ಇದರ ಜತೆ ಜತೆಗೆ ಬೇರೆ ಪಕ್ಷಗಳಿಂದ ಬರುತ್ತಿರುವ ನಾಯಕರೊಂದಿಗೆ ಒಂದಷ್ಟು ಮತಗಳು ಪಕ್ಷಕ್ಕೆ ಹರಿದು ಬರುತ್ತವೆ ಎಂಬ ವಿಶ್ವಾಸವೂ ಅವರಲ್ಲಿದೆ.

ಮ್ಯಾಜಿಕ್ ಸಂಖ್ಯೆಗಿಂತಲೂ ಅಧಿಕ ಸ‍್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಬೇರೆ ಬೇರೆ ಪಕ್ಷದಿಂದ ಬರುವ ನಾಯಕರನ್ನು ಸೇರಿಸಿಕೊಳ್ಳುತ್ತಾ ಹೋದರೆ ಪಕ್ಷದಲ್ಲಿನ ನಾಯಕರ ಸಂಖ್ಯೆ ಹೆಚ್ಚಾಗುತ್ತದೆ. ಲೋಕ ಸಭಾ ಚುನಾವಣಾ ದೃಷ್ಟಿಯಿಂದ ನೋಡಿದರೆ ಮೇಲ್ನೋಟಕ್ಕೆ ಅದರಿಂದ ಲಾಭದಂತೆ ಕಂಡು ಬಂದರೂ ನಂತರದ ದಿನಗಳಲ್ಲಿ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದರೂ ಅಚ್ಚರಿಯಿಲ್ಲ. ಮೇಲ್ಮಟ್ಟದ ನಾಯಕರು ಎಲ್ಲರನ್ನು ಪಕ್ಷದೊಳಕ್ಕೆ ಸುಲಭವಾಗಿ ಸೇರಿಸಿಕೊಳ್ಳಬಹುದು ಆದರೆ ತಳಮಟ್ಟದಲ್ಲಿ ಅದರ ಪರಿಣಾಮಗಳು ಬೇರೆಯದ್ದೇ ಆಗಿರುತ್ತದೆ.
ಪಕ್ಷಗಳು ನಾಯಕರನ್ನು ಸೃಷ್ಟಿಸಬೇಕು
ಧೀರ್ಘಕಾಲದಿಂದ ಪಕ್ಷಕ್ಕಾಗಿ ದುಡಿಯುತ್ತಾ ಬಂದಿರುವ ನಾಯಕರಿಗೆ ಇದರಿಂದ ಅಸಮಾಧಾನವಾಗುತ್ತದೆ. ಜತೆಗೆ ಬಣಗಳು ಹುಟ್ಟಿಕೊಳ್ಳುತ್ತವೆ. ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರ ನಡುವೆ ಪೈಪೋಟಿಗಳು ಆರಂಭವಾಗುತ್ತವೆ. ಇದರಿಂದ ನಿಧಾನವಾಗಿ ಬಂಡಾಯಗಳು ಶುರುವಾಗಿ ಬಣಗಳಾಗಿ ವಿಂಗಡಣೆಗೊಂಡು ಅದರಿಂದ ಪಕ್ಷಕ್ಕೆ ತೊಂದರೆಯಾದರೂ ಅಚ್ಚರಿಪಡಬೇಕಾಗಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಜೆಪಿಯ ನಾಯಕರು ಕಳೆದ ವಿಧಾನಸಭಾ ಚುನಾವಣೆ ವೇಳೆ ಯಾವ ರೀತಿಯ ಹೇಳಿಕೆಗಳನ್ನು ನೀಡಿದರು ಮತ್ತು ಅವರ ಕಾರ್ಯವೈಖರಿ ಹೇಗಿತ್ತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ.
ಅವತ್ತು ಅಧಿಕಾರ ಹಿಡಿಯಲೇ ಬೇಕೆಂಬ ಹಠಕ್ಕೆ ಬಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಎಳೆದು ತಂದಿದ್ದರು. ಆದರೆ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಸಾಧ್ಯವಾಗಲೇ ಇಲ್ಲ. ಆ ಪೈಕಿ ಕೆಲವು ನಾಯಕರು ಈಗಲೂ ಬಿಜೆಪಿಯಲ್ಲಿದ್ದರೂ ಅವರ ಸುತ್ತಲೂ ಸಂಶಯದಿಂದಲೇ ನೋಡುವ ಪರಿಸ‍್ಥಿತಿ ನಿರ್ಮಾಣವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಸ್ಥಿತಿಯೂ ಇದೇ ಆಗಿದೆ. ಅವತ್ತು ಬಿಜೆಪಿ ಇವತ್ತು ಕಾಂಗ್ರೆಸ್, ನಾಳೆ ಇನ್ಯಾವುದೋ ಪಕ್ಷ ಅಧಿಕಾರಕ್ಕೆ ಬರಬಹುದು. ಆದರೆ ಎಲ್ಲ ಕಾಲದಲ್ಲೂ ಅಧಿಕಾರದಲ್ಲಿರುವ ಪಕ್ಷದತ್ತ ನಾಯಕರು ಮುಖ ಮಾಡುವುದು ಸಾಮಾನ್ಯವೇ. ನಾಯಕರನ್ನು ಸೃಷ್ಟಿಸುವ ಪಕ್ಷವಷ್ಟೆ ಗಟ್ಟಿಯಾಗಿ ಉಳಿದುಕೊಳ್ಳಲು ಸಾಧ‍್ಯ. ಅದನ್ನು ರಾಜಕೀಯ ನಾಯಕರು ಮರೆಯಬಾರದು.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಮಾರ್ಚ್ 29ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
ಮಾರ್ಚ್ 30ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications