ಮಂಡ್ಯ ಮನೆ ಖಾಲಿ ಮಾಡಿ, ರಾಹುಲ್ ಮನೆಗೆ ತೆರಳಿದ ರಮ್ಯಾ
ಮಂಡ್ಯ, ಮೇ 19: ಖುದ್ದು ರಾಹುಲ್ ಗಾಂಧಿಯೇ ವಿಶೇಷ ಮುತುವರ್ಜಿ/ ಕಾಳಜಿ ವಹಿಸಿದರೂ ಹೀನಾಯ ಸೋಲು ಕಂಡ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ನಿನ್ನೆ ಭಾನುವಾರ ಮಂಡ್ಯ ಮನೆ ಖಾಲಿ ಮಾಡಿದ್ದಾರೆ. ಮನೆಯಲ್ಲಿದ್ದ ಸಾಮಾನು ಸರಂಜಾಮುಗಳನ್ನು ಲಾರಿಗೆ ತುಂಬಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ನನಗೊಂದು ತೊಟ್ಟಿ ಮನೆ ಬೇಕು, ಗೆಲ್ಲಲಿ/ ಸೋಲಲಿ ನಾನಿನ್ನು 'ಮಂಡ್ಯದ ಹೆಣ್ಣು' ಎಂದು 8 ತಿಂಗಳ ಹಿಂದೆ ಮಂಡ್ಯದಲ್ಲೆಲ್ಲಾ ಹವಾ ಎಬ್ಬಿಸಿದ್ದ ಮಾಜಿ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಅವರಿಗೆ ಮಂಡ್ಯದ ವಿದ್ಯಾನಗರದ ಕೆಆರ್ ರಸ್ತೆಯಲ್ಲಿರುವ ಸಾದತ್ ಅಲಿ ಖಾನ್ ಅವರು ತಮ್ಮ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು.
ಆದರೆ ಸಾದತ್ ಮನೆ ಐಗೋಳು ಬರಲಿಲ್ಲ. ಅದರಿಂದಲೇ ತಾನು ಸೋತಿದ್ದು ಎಂದು ಪರಿಭಾವಿಸಿದ ರಮ್ಯಾ ಫಲಿತಾಂಶ ಬಂದ ವಾರದಲ್ಲೇ ಗಂಟು ಮೂಟೆ ಕಟ್ಟಿತ್ತಿರುವುದನ್ನು ಮಂಡ್ಯದ ಜನತೆ ನಿನ್ನೆ ಸೋಜಿಗದಿಂದ ನೋಡುತ್ತಿದ್ದರು. (ಅಂಬರೀಷ್)

ಫಲಿತಾಂಶದ ದಿನವೇ ಮನೆ ಖಾಲಿ ಮಾಡಿದ ರಂಜಿತಾ
ಸ್ಥಳೀಯರಿಗೂ ಮೇಡಂ ರಮ್ಯಾ ಬೇಡವಾದ್ದರಿಂದ ಯಾರೊಬ್ಬರೂ ರಮ್ಯಾ ಕೈಹಿಡಿದು 'ನೀವು ಇಲ್ಲೇ ಇರಿ' ಎಂದು ಹೇಳಲಿಲ್ಲ. ರಮ್ಯಾ ಸಹ 'ನೀವು ನನ್ನನ್ನು ಗೆಲ್ಲಿಸಲಿಲ್ಲ ಮಾಡಲಿಲ್ಲ. ಮಂಡ್ಯದಲ್ಲಿ ಇನ್ನೇನಿದೆ ಎಂದು ಉಳಿಯಬೇಕು' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ರಮ್ಯಾರ ತಾಯಿ ರಂಜಿತಾ ಅವರು ಎರಡು ದಿನಗಳ ಹಿಂದೆಯೇ ಮನೆಯನ್ನು ಅರ್ಧ ಖಾಲಿ ಮಾಡಿದ್ದರು. ಆ ಪ್ರಕ್ರಿಯೆ ಭಾನುವಾರ ಪೂರ್ಣಗೊಂಡಿದೆ.

ಸಾದತ್ ಅಲಿ ಮನೆ ಕಾಂಗೈ ನಾಯಕರಿಗೆ ಕೈಕೊಟ್ಟಿದೆ
ಹಾಗೆ ನೋಡಿದರೆ ಮನೆಯ ಮಾಲೀಕರಾದ ಸಾದತ್ ಅಲಿ ಅವರು ಮನೆಯನ್ನು ಮೇಡಂ ರಮ್ಯಾಗೆ ಬಾಡಿಗೆಗೆ ಕೊಡುವುದಕ್ಕೆ ಹಿಂದೇಟು ಹಾಕಿದ್ದರು. ಈ ಮನೆ ರಾಜಕೀಯ ನಾಯಕರಿಗೆ ಎಂದೂ ಅದೃಷ್ಟ ತಂದು ಕೊಟ್ಟಿಲ್ಲ. ಖುದ್ದು ಸಾದತ್ ಅಲಿ ಅವರೂ ರಾಜಕೀಯದಲ್ಲಿ ಏಳಿಗೆ ಕಾಣಲಿಲ್ಲ.

ಎಸ್ಎಂ ಕೃಷ್ಣ ಅವರಿಗೂ ಕೈಕೊಟ್ಟಿತ್ತು
ಈ ಮನೆಯನ್ನು ತಮ್ಮ ರಾಜಕೀಯ ಸ್ಥಾವರ ಮಾಡಿಕೊಂಡಿದ್ದ ಕೆವಿ ಶಂಕರಗೌಡ, ಎಸ್ಎಂ ಕೃಷ್ಣ, ಸಾಹುಕಾರ್ ಚನ್ನಯ್ಯನವರಂಥ ನಾಯಕರು ಸೋಲುಂಡಿದ್ದರು. ಅದೇ ಪರಂಪರೆ ಮುಂದುವರಿದು ಇದೀಗ ಆ ಮನೆಯು ರಮ್ಯಾ ಅವರಿಗೂ ಕೈ ಕೊಟ್ಟಿದೆ.

ಮಂಡ್ಯದ ಗಂಡು vs ಮಂಡ್ಯದ ಹೆಣ್ಣು
ರಮ್ಯಾ ಸೋಲಿನಿಂದ ಬೇಸರಗೊಂಡಿರುವ ಅವರ ಅಭಿಮಾನಿಗಳು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ವಿರುದ್ಧ ಬರಹಗಳನ್ನೊಳಗೊಂಡ ಫ್ಲೆಕ್ಸ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮದ್ದೂರಿನ ಕೊಲ್ಲಿ ವೃತ್ತದಲ್ಲಿ ಶನಿವಾರ ರಾತ್ರಿ ದಿಢೀರ್ ಎಂಬ ಅಂಬಿ ಭಾವಚಿತ್ರಗಳೊಂದಿಗೆ ಫ್ಲೆಕ್ಸ್ ಕಾಣಿಸಿಕೊಂಡಿದೆ.

ರಾಹುಲ್ ಭೇಟಿಗೆ ದಿಲ್ಲಿಗೆ ತೆರಳಿದ ರಮ್ಯಾ
ಬೆಂಗಳೂರಿಗೆ ಮನೆ ಶಿಪ್ಟ್ ಮಾಡಿದ ಮರುಘಳಿಗೆಯೇ ರಮ್ಯಾ ಭಾನುವಾರ ಸಂಜೆ ದಿಲ್ಲಿ ಪ್ರಯಾಣ ಬೆಳೆಸಿದ್ದಾರೆ. AICC ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಸೋಲಿಗೆ ಕಾರಣಾದವರು ಮತ್ತು ಕಾರಣವಾದ ಅಂಶಗಳನ್ನು ರಾಹುಲ್ ಗಮನಕ್ಕೆ ತರುವ ಆಲೋಚನೆ ರಮ್ಯಾಗಿದೆ. ಆದರೆ ಖುದ್ದು ರಾಹುಲ್ ಇಂದು ತಮ್ಮ ತಾಯಿಯ ಜತೆಗೂಡಿ AICC ಸ್ಥಾನಮಾನ ಬಿಟ್ಟುಕೊಡುವ ಸಾಧ್ಯತೆಗಳಿವೆ.












Click it and Unblock the Notifications