ಕರ್ನಾಟಕದ ಜನತೆಯ ಮಿಡಿತ ಅರಿಯಲು ಅಮಿತ್‌ಗೆ ಏಕೆ ಸಾಧ್ಯವಾಗಿಲ್ಲ?

By: ಪಾಂಡುರಂಗ
Subscribe to Oneindia Kannada

ಬೆಂಗಳೂರು, ಏಪ್ರಿಲ್ 14 : ದೇಶದ ಎಲ್ಲೆಲ್ಲೂ ಕೇಸರಿ ಹವಾ! ಮಾರ್ಚ್ ನಲ್ಲಿ ಹೊರಬಿದ್ದ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ಉಪಚುನಾವಣೆಯಲ್ಲೂ ಕಮಲದ ಜಯಭೇರಿ. ಎಲ್ಲೆಲ್ಲೂ ನರೇಂದ್ರ ಮೋದಿ ಅಲೆ.... ಅಮಿತ್ ಶಾಗೆ ಉಘೇ ಉಘೇ...

ಕರ್ನಾಟಕದ ಮೈಸೂರು ಜಿಲ್ಲೆಯ ನಂಜನಗೂಡು ಮತ್ತು ಚಾಮರಾಜಪೇಟೆ ಜಿಲ್ಲೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲೂ ಇದೇ ಮುಂದುವರಿಯುತ್ತದೆ, ಬಿಜೆಪಿ ಜಯದ ಮಾಲೆ ಧರಿಸುತ್ತದೆ, ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂದು ನಿರಾಳವಾಗಿದ್ದ ಬಿಜೆಪಿ ಹೈಕಮಾಂಡ್ ಗೆ ಕಾಂಗ್ರೆಸ್ ಮುಟ್ಟಿ ನೋಡುವಂಥ ಹೊಡೆತ ಕೊಟ್ಟಿದೆ. [ಪ್ರಸಾದ್ ಗೆ ಭರ್ಜರಿ ಗುದ್ದು ನೀಡಿದ ಸಿಎಂ ಸಿದ್ದು]

ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಪ್ರಬಲವಾಗಿಲ್ಲದ ರಾಜ್ಯಗಳಲ್ಲಿ ಕೂಡ ಅಮಿತ್ ಶಾ ತಮ್ಮ ಚಮತ್ಕಾರವನ್ನು ತೋರಿದ್ದಾರೆ, ವಿಕ್ಟರಿ ಫಾರ್ಮ್ಯುಲಾ ಕಂಡುಹಿಡಿದಿದ್ದಾರೆ. ಆದರೆ, ಕರ್ನಾಟಕ ಮಾತ್ರ ಬಿಜೆಪಿ ಪಾಲಿಗೆ ಮುಟ್ಟಿದರೆ ಮುನಿಯಂತಾಗಿದೆ. ಜನರ ನಾಡಿ ಮಿಡಿತವನ್ನು ಅರಿಯಲು ಬಿಜೆಪಿ ಹಿರಿಯ ನಾಯಕರಿಗೆ ಸಾಧ್ಯವಾಗುತ್ತಿಲ್ಲ.

ಇದಕ್ಕೆ ಕಾರಣಗಳಾದರೂ ಏನು? ಇಲ್ಲಿ ಏನು ನಡೆಯುತ್ತಿದೆ, ಇಲ್ಲಿನ ನಾಯಕರ ತಂತ್ರಗಾರಿಕೆ ಏನು ಎಂಬುದನ್ನು ಎರಡನೇ ದರ್ಜೆಯ ನಾಯಕರನ್ನು ಇಲ್ಲಿಗೆ ಕಳಿಸಿ ತಿಳಿದುಕೊಂಡರೆ ಸಾಲದು. ಸಾಕ್ಷಾತ್ ಅಮಿತ್ ಶಾ ಅವರೇ ಇಲ್ಲಿಗೆ ಬಂದು ವಸ್ತುಸ್ಥಿತಿಯ ಅವಲೋಕನ ಮಾಡದಿದ್ದರೆ ಮುಂದಿನ ಚುನಾವಣೆಯೂ ಗಗನಕುಸುಮವಾದರೂ ಅಚ್ಚರಿಯಿಲ್ಲ. [ಕಾಂಗ್ರೆಸ್ ಗೆಲುವಿಗೆ ಸೋಪಾನವಾದ 9 ಸಂಗತಿಗಳು]

ಯಡಿಯೂರಪ್ಪ ಬಿಟ್ಟರೆ ಮತ್ತಾರಿದ್ದಾರೆ?

ಯಡಿಯೂರಪ್ಪ ಬಿಟ್ಟರೆ ಮತ್ತಾರಿದ್ದಾರೆ?

ನೀವೇ ಮುಂದಿನ ಮುಖ್ಯಮಂತ್ರಿ ಅಂತ ಎಲ್ಲ ಭಾರ, ಜವಾಬ್ದಾರಿಯನ್ನು ಯಡಿಯೂರಪ್ಪನವರ ಮೇಲೆ ಹೊರಿಸಿ ಕೇಂದ್ರದ ನಾಯಕರು ತಣ್ಣಗೆ ಕುಳಿತುಬಿಟ್ಟಿದ್ದಾರೆ. ಇಲ್ಲಿ ಯಡಿಯೂರಪ್ಪ ಆಡಿದ್ದೇ ಮಾತು, ಆಡಿದ್ದೇ ಆಟ ಅಂತಾಗಿದೆ. ಈಶ್ವರಪ್ಪ ವಿರುದ್ಧ ಹಗ್ಗಜಗ್ಗಾಟ ಶುರುವಿಟ್ಟುಕೊಂಡಿದ್ದಾಗ ಗದರಿದ್ದು ಬಿಟ್ಟರೆ ಚುನಾವಣೆಯ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಹೈಕಮಾಂಡ್ ತಲೆಹಾಕಿದ್ದೇ ಕಡಿಮೆ.

ಹುಡುಕಿದರೆ ಮತ್ತೊಬ್ಬ ನಾಯಕ ಸಿಗಲಾರ

ಹುಡುಕಿದರೆ ಮತ್ತೊಬ್ಬ ನಾಯಕ ಸಿಗಲಾರ

ಹಾಗಿದ್ದರೆ ಯಡಿಯೂರಪ್ಪ ಬಿಟ್ಟರೆ ಬಿಜೆಪಿಯನ್ನು ಏಕಾಂಗಿಯಾಗಿ ಎಳೆದುಕೊಂಡು ಸಾಗಬಲ್ಲ ನಾಯಕರು ಕರ್ನಾಟಕದಲ್ಲಿ ಯಾರಿದ್ದಾರೆ ಎಂದು ದುರ್ಬೀನು ಹಾಕಿಕೊಂಡು ಹುಡುಕಿದರೆ ಒಬ್ಬರೂ ಸಿಗಲಾರರು. ಹಿರಿಯ ನಾಯಕರೆಲ್ಲ ನಿವೃತ್ತಿ ಹಂತಕ್ಕೆ ಬಂದುಬಿಟ್ಟಿದ್ದಾರೆ. ಯುವ ನಾಯಕರಲ್ಲಿ ಪಕ್ಷವನ್ನು ಮುನ್ನಡೆಸಬಲ್ಲ ತಾಕತ್ತು ಇರುವವರು ಯಾರಿದ್ದಾರೆ ಎಂದು ಹುಡುಕಿಕೊಟ್ಟವರಿಗೆ ಸಾವಿರ ಕೋಟಿ ಬಹುಮಾನ.[ನಸುನಗುತ್ತಲೇ ಕರ್ನಾಟಕ ಬಿಜೆಪಿ ಜನ್ಮ ಜಾಲಾಡಿದ ಸಿದ್ದರಾಮಯ್ಯ]

ಈಶ್ವರಪ್ಪನವರನ್ನು ಕಟ್ಟಿಹಾಕುವವರು ಯಾರು?

ಈಶ್ವರಪ್ಪನವರನ್ನು ಕಟ್ಟಿಹಾಕುವವರು ಯಾರು?

ಈಶ್ವರಪ್ಪ ತಮ್ಮನ್ನು ತಾವೇ ಯಡಿಯೂರಪ್ಪನವರಿಗೆ ಪರ್ಯಾಯ ಅಂದುಕೊಂಡಿದ್ದಾರೆ. ನಾನೂ ಮುಖ್ಯಮಂತ್ರಿ ಪಟ್ಟಕ್ಕೆ ಸ್ಪರ್ಧಿ ಎಂದು ಹೇಳುವ ತಾಕತ್ತು ಕೂಡ ಅವರಿಗೊಬ್ಬರಿಗೇ ಇರುವುದು. ಆದರೆ, ಅಂತಹ ಸಾಮರ್ಥ್ಯವನ್ನು ಅವರು ನುಡಿನಡೆಗಳಲ್ಲಿ ತೋರಿಸಿದ್ದು ತುಂಬಾ ಕಡಿಮೆ. ಹೈಕಮಾಂಡ್ ವಿಶ್ವಾಸ ಗೆಲ್ಲುವಲ್ಲಿಯೂ ಅವರು ಸೋತಿದ್ದಾರೆ. ಈಶ್ವರಪ್ಪನವರನ್ನು ಹದ್ದುಬಸ್ತಿಗೆ ತರದಹೊರತು ಮತ್ತು ಅವರ ಬಲವನ್ನು ಸಮರ್ಥವಾಗಿ ಬಳಸಿಕೊಳ್ಳದ ಹೊರತು ಮುಂದಿನ ಚುನಾವಣೆ ಗೆಲ್ಲುವುದು ಬಿಜೆಪಿಗೆ ಬಲುಕಷ್ಟ.

ಅತಿಯಾದ ಆತ್ಮವಿಶ್ವಾಸ, ತಂತ್ರಗಾರಿಕೆಯ ಕೊರತೆ

ಅತಿಯಾದ ಆತ್ಮವಿಶ್ವಾಸ, ತಂತ್ರಗಾರಿಕೆಯ ಕೊರತೆ

ದೇಶದಲ್ಲಿ ಬಿಜೆಪಿಯನ್ನು ಹಿಡಿಯುವವರು ಯಾರೂ ಇಲ್ಲ, ಇಲ್ಲೂ ಅದೇ ಆಗುತ್ತದೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಬಿಜೆಪಿಗೆ ಮುಳುವಾಗಿದೆ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಇಳಿಸದಿದ್ದಾಗಲೇ ಬಿಜೆಪಿ ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ, ಬಿಜೆಪಿ ಅಂತಹ ಯಾವ ತಂತ್ರಗಾರಿಕೆಯನ್ನೂ ಮಾಡಲಿಲ್ಲ. ಕಡೆಗೆ, ಸಿದ್ದರಾಮಯ್ಯನವರು ದೇವೇಗೌಡರಿಗೆ ಧನ್ಯವಾದ ಅರ್ಪಿಸಿ ಋಣ ತೀರಿಸಿದ್ದಾರೆ.[ಚುನಾವಣಾ ರಾಜಕಾರಣಕ್ಕೆ ಶ್ರೀನಿವಾಸ್ ಪ್ರಸಾದ್ ನಿವೃತ್ತಿ ಘೋಷಣೆ]

ಯುವಪಡೆಯ ಬಾಯಿಗೆ ಬೀಗ ಹಾಕುವವರು ಯಾರು?

ಯುವಪಡೆಯ ಬಾಯಿಗೆ ಬೀಗ ಹಾಕುವವರು ಯಾರು?

ಬಿಜೆಪಿ ನಾಯಕರು ಪ್ರಚಾರದ ಸಮಯದಲ್ಲಿ ಕೆಲ ಮಾತುಗಳನ್ನು ಆಡಿರುವುದು ವ್ಯತಿರಿಕ್ತ ಪರಿಣಾಮ ಬೀರಿರುವುದು ಫಲಿತಾಂಶ ಬಂದನಂತರ ನಾಯಕರಿಗೆ ಅರಿವಾಗುತ್ತಿದೆ. ಇಲ್ಲಿ ಬಿಜೆಪಿ ಯಾವ ಸ್ಟ್ರಾಟಜಿಸ್ಟ್ ಗಳ ಸಹಾಯವನ್ನು ಪಡೆದಹಾಗಿಲ್ಲ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವಂತಾಗಿದೆ ಬಿಜೆಪಿ ಸ್ಥಿತಿ. ಮುಂಬರುವ ಚುನಾವಣೆಯಲ್ಲಾದರೂ ಹೈಕಮಾಂಡ್ ಹಿಡಿತ ಸಾಧಿಸಿ ತಂತ್ರಗಾರಿಕೆ ರೂಪಿಸದಿದ್ದರೆ ಕಾಂಗ್ರೆಸ್ ಪಟ್ಟ ಉಳಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Defeat in Nanjangud, Gundlupet by polls in Karnataka. What should BJP high command do now to get back to winning position? BJP president Amit Shah should take a thorough look at the strategies being worked out for the upcoming assembly election.
Please Wait while comments are loading...