ವಿದ್ಯಾರ್ಥಿನಿಯರಿಗೆ ಸಿಹಿ ಸುದ್ದಿ: 'ದೀಪಿಕಾ' ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ, ಇಲ್ಲಿದೆ ಮಾಹಿತಿ
ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ಆರಂಭಿಸಲಾದ ಮಹತ್ವಾಕಾಂಕ್ಷೆಯ 'ದೀಪಿಕಾ ವಿದ್ಯಾರ್ಥಿವೇತನ' (Deepika Scholarship) ಯೋಜನೆಗೆ ರಾಜ್ಯಾದ್ಯಂತ ವಿದ್ಯಾರ್ಥಿನಿಯರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. 2025ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಲಾದ ಈ ಯೋಜನೆಗೆ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತೆ ಮಂಜುಶ್ರೀ ಎನ್. ಅವರು ತಿಳಿಸಿದ್ದಾರೆ.
ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ, 10 ಮತ್ತು 12ನೇ ತರಗತಿಯ ನಂತರ ಉನ್ನತ ಶಿಕ್ಷಣಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದೀಗ ಎಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಜನವರಿ 1, 2026 ರಿಂದ ಆರಂಭವಾಗಿರುವ ಎರಡನೇ ಹಂತದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಆಸಕ್ತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜನವರಿ 31, 2026 ರವರೆಗೆ ವಿಸ್ತರಿಸಲಾಗಿದೆ.

ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 30,000 ರೂ.ಗಳ ವಿದ್ಯಾರ್ಥಿವೇತನ ದೊರೆಯಲಿದೆ. ಅಂದರೆ, 4 ವರ್ಷದ ಪದವಿ ಕೋರ್ಸ್ ಮಾಡುವ ವಿದ್ಯಾರ್ಥಿನಿಗೆ ಒಟ್ಟು 1,20,000 ರೂ. ಮತ್ತು 2 ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿಗೆ 60,000 ರೂ. ಆರ್ಥಿಕ ನೆರವು ಸಿಗಲಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವನ್ನು (ಜಿಇಆರ್) ಹೆಚ್ಚಿಸುವ ನಿಟ್ಟಿನಲ್ಲಿಯೂ ಈ ಯೋಜನೆ ಸಹಕಾರಿಯಾಗಲಿದೆ. 2021-22ರ ಎಐಎಸ್‌ಎಚ್‌ಇ ವರದಿಯ ಪ್ರಕಾರ ಕರ್ನಾಟಕದ ಜಿಇಆರ್ ಶೇ.36.2 ರಷ್ಟಿದ್ದು, ಇದನ್ನು ಸುಧಾರಿಸಲು 'ದೀಪಿಕಾ' ದಾರಿದೀಪವಾಗಲಿದೆ.
ಆರಂಭದಲ್ಲಿ 37,000 ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು, ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ 40,000 ಮೀರಿದರೂ ಸರ್ಕಾರವೇ ಅವರ ಶಿಕ್ಷಣದ ವೆಚ್ಚವನ್ನು ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ಇಲ್ಲೊಂದು ಪ್ರಮುಖ ಷರತ್ತಿದೆ. ಈ ವಿದ್ಯಾರ್ಥಿವೇತನ ಪಡೆಯಲು ವಿದ್ಯಾರ್ಥಿನಿಯರು ಯಾವುದೇ ಸೆಮಿಸ್ಟರ್‌ನಲ್ಲಿ 'ಬ್ಯಾಕ್‌ಲಾಗ್' (ವಿಷಯಗಳಲ್ಲಿ ಅನುತ್ತೀರ್ಣ) ಉಳಿಸಿಕೊಳ್ಳುವಂತಿಲ್ಲ. ಒಂದು ವೇಳೆ ಬ್ಯಾಕ್‌ಲಾಗ್ ಇದ್ದರೆ, ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಬಂದಿರುವ ಅರ್ಜಿಗಳ ಪರಿಶೀಲನೆ ಕಾರ್ಯ ಭರದಿಂದ ಸಾಗಿದ್ದು, ಅರ್ಹ ವಿದ್ಯಾರ್ಥಿನಿಯರ ಪಟ್ಟಿಯನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು.












Click it and Unblock the Notifications