ವಿಧಾನಸಭೆಯಲ್ಲಿ ಧರಣಿ ಮುಂದುವರೆಸಲು ಕಾಂಗ್ರೆಸ್ ನಿರ್ಧಾರ
ಬೆಂಗಳೂರು, ಮಾ. 03: ವಿಧಾನಸಭೆಯಲ್ಲಿ ಇವತ್ತೂ ಧರಣಿ ಮುಂದುವರೆಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಪಕ್ಷದ ಎಲ್ಲ ಸದಸ್ಯರು ಕಡ್ಡಾಯವಾಗಿ ಕಲಪದಲ್ಲಿ ಹಾಜರು ಇರುವಂತೆ ನಿನ್ನೆಯೆ ವಿಪ್ ಜಾರಿಮಾಡಗಿತ್ತು.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಬಿಜೆಪಿ ಸದಸ್ಯ ಯತ್ನಾಳ್ ಕ್ಷಮೆ ಕೇಳುವವರೆಗೆ ಸದನದಲ್ಲಿ ಹೋರಾಟ ಮುಂದುವರೆಸಲು ಶಾಸಕರೊಂದಿಗೆ ಚರ್ಚಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ಧಾರ ಕೈಗೊಂಡಿದ್ದಾರೆ. ವಿಧಾನಸಭೆಯ ನಡಾವಳಿಯಡಿ ನೋಟಿಸ್ ಕೊಟ್ಟು ಚರ್ಚೆಗೆ ಅವಕಾಶ ಕೇಳಿದ್ದಾಗಿ ಶಾಸಕರಿಗೆ ತಿಳಿಸಿದ್ದಾರೆ. ಜೊತೆಗೆ ವಿಧಾನಸಭೆಯಲ್ಲಿ ಮಾಧ್ಯಮ ನಿರ್ಬಂಧ ಕುರಿತಂತೆಯೂ ಪ್ರಸ್ತಾಪ ಮಾಡಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಕಲಾಪದಲ್ಲಿ ಸದಸ್ಯರು ಹೇಗೆ ವರ್ತನೆ ಮಾಡಬೇಕು ಎಂಬುದರ ಬಗ್ಗೆಯೂ ಹಿರಿಯ ನಾಯಕರು ಸಭೆಯಲ್ಲಿ ಸಲಹೆ, ಸೂಚನೆ ಕೊಟ್ಟಿದ್ದಾರೆ. ಮಾಜಿ ಸಚಿವರಾದ ಡಾ. ಜಿ ಪರಮೇಶ್ವರ್, ಆರ್ ವಿ ದೇಶಪಾಂಡೆ, ಎಸ್. ಆರ್. ಪಾಟೀಲ್, ರಮೇಶ್ ಕುಮಾರ್, ಈಶ್ವರ್ ಖಂಡ್ರೆ ಸೇರಿದಂತೆ ಕಾಂಗ್ರೆಸ್ ಶಾಸಕರು ಭಾಗವಹಿಸಿದ್ದರು.

ಆದಿಚುಂಚನಗಿರಿ ಭೇಟಿ ರದ್ದು ಮಾಡಿದ ಡಿ ಕೆ ಶಿವಕುಮಾರ್: ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿಯಾದ ಹಿನ್ನೆಲೆಯಲ್ಲಿ ಆದಿಚುಂನಗಿರಿ ಭೇಟಿಯನ್ನು ಮಾಜಿ ಸಚಿವ ಡಿ ಕೆ ಶಿವಕುಮಾರ್ ರದ್ದು ಮಾಡಿದ್ದಾರೆ. ಆದಿಚುಂನಗಿರಿ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ಶಿವಕುಮಾರ್ ಅವರು ರದ್ದು ಮಾಡಿದ್ದು ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಿದ್ದಾರೆ.












Click it and Unblock the Notifications