ರಾಜ್ಯದಲ್ಲಿ ಆನೆ ಸೇರಿ ವನ್ಯಜೀವಿಗಳ ಸಾವು: ಸ್ವಯಂ ಪ್ರೇರಿತ ಪಿಐಎಲ್
ಬೆಂಗಳೂರು, ಜೂನ್ 15: ರಾಜ್ಯದಲ್ಲಿ ವಿದ್ಯುತ್ ಸ್ಪರ್ಶ ಹಾಗೂ ಅಸ್ವಾಭಾವಿಕ ಕಾರಣಗಳಿಂದಾಗಿ ಆನೆ ಸೇರಿ ವನ್ಯಜೀವಿಗಳು ಸಾವನ್ನಪ್ಪುತ್ತಿರುವುದರ ಬಗ್ಗೆ ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಲ್ಲದೆ, ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಆ ಕುರಿತು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.
'ಬೆಂಗಳೂರು ಮಿರರ್' ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿದ್ದ ವರದಿ ಆಧಾರದ ಮೇಲೆ ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ, ಸ್ವಯಂಪ್ರೇರಿತ ಪಿಐಎಲ್ ದಾಖಲಿಸಲು ಆದೇಶಿಸಿತು. ಅಲ್ಲದೆ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಹೈಕೋರ್ಟ್, ನ್ಯಾಯವಾದಿ ಪುತ್ತಿಗೆ ರಮೇಶ್ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಿದೆ.

ಪ್ರತಿವಾದಿಗಳಿಗೆ ನೋಟಿಸ್: ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆ ವೇಳೆ ಲಿಖಿತ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿ ಹೈಕೋರ್ಟ್ ವಿಚಾರಣೆಯನ್ನು ಜು.2ಕ್ಕೆ ಮುಂದೂಡಿತು.
ರಾಜ್ಯದ ವನ್ಯಜೀವಿಧಾಮಗಳೂ ಸೇರಿದಂತೆ ಅನೇಕ ಭಾಗಗಳಲ್ಲಿ ಆನೆ ಸೇರಿದಂತೆ ಇತರೆ ವನ್ಯಜೀವಿಗಳು ವಿದ್ಯುತ್ ಸ್ವರ್ಶ ಅಥವಾ ಅಸ್ವಾಭಾವಿಕ ರೀತಿಯಲ್ಲಿ ಸಾವನ್ನಪ್ಪುತ್ತಿರುವುದು ಗಂಭೀರ ಮತ್ತು ಆತಂಕದ ವಿಚಾರ.
ಮಾಧ್ಯಮ ವರದಿಯಲ್ಲಿಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದಿರುವ ಅಂಶ ವೇದ್ಯವಾಗುತ್ತದೆ. ವನ್ಯಜೀವಿಧಾಮ ಮತ್ತು ರಕ್ಷಿತಾರಣ್ಯಗಳು ಮಾತ್ರವಲ್ಲದೆ, ಇತರೆ ಭಾಗಗಳಲ್ಲಿಯೂ ಆನೆ ಸೇರಿದಂತೆ ವನ್ಯಜೀವಿಗಳ ರಕ್ಷ ಣೆ ಮಾಡಬೇಕಾಗಿದೆ ಎಂದು ನ್ಯಾಯಾಲಯ ಹೇಳಿತು.
ಅಧಿಕಾರಿಗಳ ನಿರ್ಲಕ್ಷ್ಯ: ಅಲ್ಲದೆ, ಅಶ್ವತ್ಥಾಮ ಎಂಬ ಆನೆ ಮೈಸೂರಿನಲ್ಲಿಸಾವಿಗೀಡಾಗಿದೆ. ಚಿಕ್ಕಮಗಳೂರಿನಲ್ಲಿ ಮತ್ತೊಂದು ಆನೆ ಹಾಗೂ ಮಡಿಕೇರಿಯಲ್ಲಿ ಎರಡು ಆನೆಗಳು ಸಾವಿಗೀಡಾಗಿವೆ. ರಾಜ್ಯದಲ್ಲಿ ವಿದ್ಯುತ್ ಸ್ಪರ್ಶ ಮತ್ತು ಅಸ್ವಾಭಾವಿಕ ಕಾರಣಗಳಿಂದ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಇದಕ್ಕೆ ಮುಖ್ಯವಾಗಿ ಎಚ್ಚರಿಕೆ ವಹಿಸದಿರುವುದೇ ಕಾರಣವಾಗಿದೆ. ಹಾಗಾಗಿ, ನ್ಯಾಯಾಲಯ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನದ 226ನೇ ವಿಧಿಯಡಿ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಆದೇಶಿಸಿತು.
ಈ ವಿಚಾರದಲ್ಲಿಅರಣ್ಯ ಇಲಾಖೆ ಸೇರಿದಂತೆ ಇತರೆ ಸಂಬಂಧಿಸಿದ ಅಧಿಕಾರಿಗಳು ಶಾಸನಬದ್ಧ ಕಾರ್ಯಗಳ ಕುರಿತಂತೆ ತಿಳಿಸಬೇಕಾಗಿದೆ. ಈ ನಿಟ್ಟಿನಲ್ಲಿಮುಂದಿನ ವಿಚಾರಣೆ ವೇಳೆ ಪ್ರತಿವಾದಿ ಇಲಾಖೆಗಳ ಅಧಿಕಾರಿಗಳು, ಆನೆ ಸೇರಿ ವನ್ಯಜೀವಿಗಳ ಅಸ್ವಾಭಾವಿಕ ಸಾವು ತಡೆಯುವುದು ಮತ್ತು ಅವುಗಳಿಗೆ ರಕ್ಷಣೆ ಒದಗಿಸುವ ಕುರಿತು ಕೈಗೊಂಡಿರುವ ಕ್ರಮಗಳೇನು?.
ಇತ್ತೀಚೆಗೆ ಬೆಳಕಿಗೆ ಬಂದ ಆನೆಗಳ ಸತತ ಸಾವು ತಡೆಯುವುದಕ್ಕೆ ಕೈಗೊಂಡಿರುವ ಕ್ರಮಗಳೇನು? ಈ ರೀತಿಯ ಘಟನೆಗಳನ್ನು ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ಅಳವಡಿಸಿಕೊಂಡಿರುವ ಕಾರ್ಯವಿಧಾನಗಳು ಯಾವುವು? ಈ ರೀತಿಯ ಸಾವುಗಳಿಗೆ ಯಾವ ರೀತಿ ಆಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಲಾಗುವುದು ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ನ್ಯಾಯಪೀಠ ಸೂಚನೆ ನೀಡಿತು.












Click it and Unblock the Notifications