ಅರಣ್ಯದಲ್ಲಿ ರೈಲುಗಳ ವೇಗ ತಗ್ಗಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ: ರಾಜ್ಯದಲ್ಲೂ ಸುಪ್ರಿಂ ತೀರ್ಪು ಅನ್ವಯ
ಹೊಸಪೇಟೆ-ವಾಸ್ಕೋಡ ಗಾಮ ಹಾಗೂ ಲೋಂಡಾ-ಮೀರಜ್ ರೈಲು ಮಾರ್ಗಗಳಲ್ಲಿ ರಾತ್ರಿ ವೇಳೆ ರೈಲುಗಳ ವೇಗ ತಗ್ಗಿಸಲು ನಿರ್ದೇಶಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಬೆಂಗಳೂರು, ಮಾರ್ಚ್ 22: ಇತ್ತೀಚಿನ ದಿನಗಳಲ್ಲಿ ಅರಣ್ಯದಲ್ಲಿ ರಾತ್ರಿ ವೇಳೆ ರೈಲಿಗೆ ಸಿಲುಕಿ ಪ್ರಾಣಿಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಅಮೂಲ್ಯ ಪ್ರಾಣಿ ಸಂಪತ್ತು ಕಳೆದುಕೊಳ್ಳುತ್ತಿದ್ದೇವೆ ಎಂದು ಪ್ರಾಣಿಪ್ರಿಯರಿಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ.
ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ಹೊಸಪೇಟೆ-ವಾಸ್ಕೋಡ ಗಾಮ ಹಾಗೂ ಲೋಂಡಾ-ಮೀರಜ್ ರೈಲು ಮಾರ್ಗಗಳಲ್ಲಿ ರಾತ್ರಿ ವೇಳೆ ರೈಲುಗಳ ವೇಗ ತಗ್ಗಿಸಲು ನಿರ್ದೇಶಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈಗಾಗಲೇ ಅರ್ಜಿ ಸಂಬಂಧ ಪ್ರತಿಕ್ರಿಯಿಸುವಂತೆ ರಾಜ್ಯ ಅರಣ್ಯ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.

ಪರಿಸರ ವಾದಿ ಗಿರಿಧರ್ ಕುಲಕರ್ಣಿ, ಹೊಸಪೇಟೆ- ವಾಸ್ಕೋಡಗಾಮ ಮತ್ತು ಲೋಂಡಾ- ಮೀರಜ್ ರೈಲು ಮಾರ್ಗದಲ್ಲಿ ರಾತ್ರಿ ವೇಳೆ ರೈಲುಗಳ ಅಧಿಕ ವೇಗದ ಚಾಲನೆಯಿಂದ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿದೆ. ಇದರಿಂದ ವೇಗದ ಮಿತಿ ಕಡಿತಗೊಳಿಸಲು ರೈಲ್ವೆ ಇಲಾಖೆಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಳೆ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಅರ್ಜಿ ವಿಚಾರಣೆ ನಡೆಸಿ ಬೆಳಗಾವಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ, ಬೆಳಗಾವಿ, ಹಳಿಯಾಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ನಿರ್ದೇಶಕರು ಅರ್ಜಿ ಕುರಿತು ಎರಡು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಸುಪ್ರೀಂ ಕೋರ್ಟ್ ನಿರ್ದೇಶನ ಪಾಲನೆ
ದೇಶದಾದ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರೈಲ್ವೇ ಮಾರ್ಗಗಳಲ್ಲಿ ವೇಗದ ಮಿತಿ ಕಡಿಮೆಗೊಳಿಸುವಂತೆ ರೈಲ್ವೆ ಇಲಾಖೆಗೆ ಸುಪ್ರಿಂ ಕೋರ್ಟ್ ನಿರ್ದೇಶಿಸಿದೆ. ಒಂದೊಮ್ಮೆ ವೇಗದ ಮಿತಿ ಕಡಿಮೆಗೊಳಿಸದಿದ್ದರೆ ತಪ್ಪಿತಸ್ಥ ಚಾಲಕ ಮತ್ತು ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ತೀರ್ಪಿನಲ್ಲಿ ಸೂಚಿಸಲಾಗಿದೆ. ಅದರಂತೆ ರಾಜ್ಯದಲ್ಲೂ ಸುಪ್ರಿಂ ಕೋರ್ಟ್ ತೀರ್ಪು ಅನ್ವಯಿಸಲಿದೆ.
ದೇಶದ ಯಾವುದೇ ಭಾಗದಲ್ಲಿರುವ ವನ್ಯ ಜೀವಿ ಸಂಪತ್ತು ಸಮಾನವಾದ ಪ್ರಾಮುಖ್ಯತೆ ಹೊಂದಿರುತ್ತದೆ ಎಂದು ಮೌಖಿಕವಾಗಿ ನುಡಿದ ಹೈಕೋರ್ಟ್, ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ರಾಜ್ಯ ಅರಣ್ಯ ಪ್ರಾಧಿಕಾರಗಳಿಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಹೊಸಪೇಟೆ-ವಾಸ್ಕೋಡಗಾಮ ಹಾಗೂ ಲೋಂಡಾ-ಮೀರಜ್ ಮಾರ್ಗಗಳು ಧಾರವಾಡ, ಬೆಳಗಾವಿ, ಹಳಿಯಾಳ ಹಾಗೂ ದಾಂಡೇಲಿ ಸಂರಕ್ಷಿತ ಅರಣ್ಯಗಳ ನಡುವೆ ಹಾದುಹೋಗಿವೆ. ಲಭ್ಯ ಮಾಹಿತಿ ಪ್ರಕಾರ 2014ರಿಂದ ಈವರೆಗೆ ಅರಣ್ಯ ಪ್ರದೇಶಗಳಲ್ಲಿ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಆನೆ, ಕಾಡುಕೋಣ, ಕರಡಿ, ಕಾಡುನಾಯಿ, ಕಾಡುಹಂದಿಗಳು ಹಾಗೂ ಜಿಂಕೆಗಳು ಸೇರಿ 60ಕ್ಕೂ ಅಧಿಕ ಪ್ರಾಣಿಗಳು ಮೃತಪಟ್ಟಿವೆ. ರೈಲುಗಳು ವೇಗವಾಗಿ ಸಂಚರಿಸುವುದೇ ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ದೇಶದ ಎಲ್ಲಾ ದಟ್ಟ ಅರಣ್ಯಗಳಲ್ಲಿ ರೈಲುಗಳ ವೇಗ ತಗ್ಗಿಸಬೇಕು ಎಂದು ರೈಲ್ವೇ ಇಲಾಖೆಗೆ ಸುಪ್ರೀಂಕೋರ್ಟ್ 2013ರಲ್ಲೇ ಆದೇಶ ನೀಡಿದೆ. ವೇಗ ಕಡಿಮೆ ಮಾಡದಿದ್ದರೆ ಚಾಲಕರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆದೇಶಿಸಿದೆ. ಆದರೆ ಆದೇಶ ಪಾಲನೆಯಾಗಿಲ್ಲ. ಆದ್ದರಿಂದ, ಈ ನಿಟ್ಟಿನಲ್ಲಿ ಸಕ್ಷಮ ಪ್ರಾಧಿಕಾರಗಳಿಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.












Click it and Unblock the Notifications