ಕನಕಪುರಕ್ಕೆ ನಾನೇ ಬರ್ತೀನಿ, ಬೆಂಗಳೂರಿಗೆ ಬಂದು ತೊಂದರೆ ತಗೋಬೇಡಿ!
ಬೆಂಗಳೂರು: ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸರ್ಕಾರದಲ್ಲಿ ಮೊಟ್ಟಮೊದಲ ಬಾರಿ ಉಪಮುಖ್ಯಮಂತ್ರಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅದರಲ್ಲೂ ತಮ್ಮ ಸ್ಥಾನಮಾನಕ್ಕೆ ಕಾರಣರಾದ ಕನಕಪುರ ಮತದಾರರನ್ನ ವಿಶೇಷವಾಗಿ ಗೌರವಿಸಲು ಡಿಸಿಎಂ ಡಿಕೆಶಿ ನಿರ್ಧರಿಸಿದ್ದಾರೆ. ಈ ಹಿನ್ನಲೆ ಸ್ಪೆಷಲ್ ಮೆಸೇಜ್ ಕೊಟ್ಟಿರುವ ಅವ್ರು ಕನಕಪುರಕ್ಕೆ ನಾನೇ ಬರ್ತೀನಿ ಅಂತಾ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲುವಲ್ಲಿ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್ ಪಾತ್ರ ಮಹತ್ವದ್ದು. ಹೀಗಾಗಿಯೇ ಡಿ.ಕೆ. ಶಿವಕುಮಾರ್ ಮೊಟ್ಟಮೊದಲ ಬಾರಿಗೆ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗೆ ಡಿ.ಕೆ. ಶಿವಕುಮಾರ್ ಅತ್ಯುನ್ನತ ಸ್ಥಾನ ಪಡೆದಿರುವುದು ಕನಕಪುರದ ಮತದಾರರಿಗೆ ಖುಷಿಯಾಗಿದೆ. ಹೀಗಾಗಿ ವಿಶ್ ಮಾಡಲು ಬೆಂಗಳೂರಿನ ತನಕ ಬಂದು ತೊಂದ್ರೆ ತಗೋಬಾರ್ದು ಅನ್ನೋ ಉದ್ದೇಶದಿಂದ ಕನಕಪುರದ ಬೆಂಬಲಿಗರಿಗೆ ಡಿಕೆಶಿ ಸ್ಪೆಷಲ್ ಸಂದೇಶ ನೀಡಿದ್ದಾರೆ.

ನಾನೇ ಬರ್ತೀನಿ, ನಿಮಗೆ ತೊಂದರೆ ಬೇಡ!
ಹೌದು, ಉಪಮುಖ್ಯಮಂತ್ರಿ ಆಗುತ್ತಿದ್ದಂತೆ ಸಿಎಂ ಜೊತೆಯಲ್ಲಿ ಡಿ.ಕೆ.ಶಿವಕುಮಾರ್ ಸಾಲು ಸಾಲು ಸಭೆಗಳನ್ನ ನಡೆಸುತ್ತಿದ್ದಾರೆ. ಈ ನಡುವೆ ಸಂಪುಟ ವಿಸ್ತರಣೆ ಬೇರೆ ಬಾಕಿ ಇದೆ. ಹೀಗಾಗಿ ತವರು ಕ್ಷೇತ್ರಕ್ಕೆ ಭೇಟಿ ನೀಡಲು ಆಗುತ್ತಿಲ್ಲ. ಈ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ವಿಶ್ ಮಾಡಲು ಅವರ ಬೆಂಬಲಿಗರು, ಅಭಿಮಾನಿ ಬಳಗ ಖುದ್ದು ಬೆಂಗಳೂರಿಗೆ ಬರುತ್ತಿದ್ದಾರೆ. ಹೀಗಾಗಿ ಡಿ.ಕೆ.ಶಿವಕುಮಾರ್ ಮೆಸೇಜ್ ಕೊಟ್ಟಿದ್ದು ನಾನೇ ಅಲ್ಲಿಗೆ ಬಂದು ನಿಮಗೆ ಕೃತಜ್ಞತೆ ಸಲ್ಲಿಸುವೆ, ನೀವು ಬೆಂಗಳೂರಿಗೆ ಬಂದು ತೊಂದರೆ ತಗೋಬೇಡಿ ಎಂದಿದ್ದಾರೆ.
ದೆಹಲಿ ಪ್ರವಾಸದ ಬಳಿಕ ಮುಗಿಸಿ ಭೇಟಿ
ಹೌದು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗುವ ಕಾರ್ಯಕ್ರಮವಿದೆ. ದೆಹಲಿ ಪ್ರವಾಸದ ನಂತರ ನಾನೇ ಖುದ್ದಾಗಿ ಕನಕಪುರಕ್ಕೆ ಬರುತ್ತೇನೆ ಎಂದು ಡಿಕೆಶಿ ತಿಳಿಸಿದ್ದಾರೆ. ಹೀಗಾಗಿ ನೀವು ಅಷ್ಟು ದೂರದಿಂದ ಬೆಂಗಳೂರಿಗೆ ಬರುವುದು ಬೇಡ ನಾನೇ ನಿಮ್ಮ ಬಳಿ ಬರುತ್ತೇನೆ. ಕ್ಷೇತ್ರದ ಜನರಿಗೆ ತೊಂದ್ರೆ ಆಗೋದು ಬೇಡ ಎಂಬ ಕಾಳಜಿಯಿಂದ ಈ ಮನವಿ ಮಾಡುತಿದ್ದೇನೆ. ಯಾರೂ ಅನ್ಯತಾ ಭಾವಿಸುವುದು ಬೇಡ ಎಂದು ಕೂಡ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗೆಲ್ಲಲ್ಲ ಎಂದಿದ್ದ ಬಿಜೆಪಿ, ಡಿಸಿಎಂ ಆದ್ರು!
ಚುನಾವಣೆಗೆ ಮೊದಲು ಬಿಜೆಪಿ ನಾಯಕರು ಪೂರ್ಣ ಬಹುಮತದ ಸರ್ಕಾರ ರಚಿಸುವ ಹುಮ್ಮಸ್ಸು ಹೊಂದಿದ್ದರು. ಆಗ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಕ್ಷೇತ್ರ ಟಾರ್ಗೆಟ್ ಮಾಡಿ ಈ ಬಾರಿ ಇವರು ಗೆಲ್ಲಲ್ಲ ಅಂತಾ ಚುನಾವಣೆಗೆ ಮೊದಲೇ ಭವಿಷ್ಯ ಹೇಳಿದ್ರು. ಕೇಂದ್ರದ ಬಿಜೆಪಿ ಲೀಡರ್ಸ್ ವಿರುದ್ಧ ಮಾತಾಡಿದ ಕಾರಣಕ್ಕೆ ಡಿಕೆ ಬ್ರದರ್ಸ್ ಮೊದಲ ಟಾರ್ಗೆಟ್ ಆಗಿದ್ರು ಅನ್ನೋ ಆರೋಪ ಇತ್ತು. ಆರೋಪ, ಪ್ರತ್ಯಾರೋಪ ಓಡಾಡುವಾಗಲೇ ಡಿ.ಕೆ. ಶಿವಕುಮಾರ್ ಭರ್ಜರಿ ವಿಜಯ ಸಾಧಿಸಿ ಡಿಸಿಎಂ ಪಟ್ಟಕ್ಕೂ ಆಯ್ಕೆಯಾಗಿದ್ದಾರೆ.
7 ಗೆಲುವಿನ ಸರದಾರನಿಗೆ 8ನೇ ದಿಗ್ವಿಜಯ!
ಕನಕಪುರದಲ್ಲಿ ಸತತ 7 ಗೆಲುವು ಸಾಧಿಸಿದ್ದ ಡಿ.ಕೆ.ಶಿವಕುಮಾರ್ ಸೋಲಿಸಲು ಬಿಜೆಪಿಯ ರಾಷ್ಟ್ರೀಯ ನಾಯಕರು ತೊಡೆತಟ್ಟಿ ನಿಂತಿದ್ದರು. ಹೀಗಾಗಿ ಆರ್.ಅಶೋಕ್ ಅವರಂಥ ಪ್ರಬಲ ಅಭ್ಯರ್ಥಿಯನ್ನ ಈ ಕ್ಷೇತ್ರಕ್ಕೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಒಕ್ಕಲಿಗ ಅಭ್ಯರ್ಥಿ VS ಒಕ್ಕಲಿಗ ಅಭ್ಯರ್ಥಿ ಸ್ಟ್ರಾಟಜಿ ಮೂಲಕ ಡಿಕೆ ಶಿವಕುಮಾರ್‌ಗೆ ಸೋಲಿನ ರುಚಿ ತೋರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು ಬಿಜೆಪಿ ನಾಯಕರು. ಆದರೆ ಆ ಎಲ್ಲಾ ತಂತ್ರ, ರಣತಂತ್ರ ಠುಸ್ ಪಟಾಕಿ ಆಗಿ, ಡಿ.ಕೆ. ಶಿವಕುಮಾರ್ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದರು.
ಒಟ್ನಲ್ಲಿ ಕನಕಪುರ ಜನತೆಗೆ ಈ ಬಾರಿ ಸಖತ್ ಸಂಭ್ರಮ. ತಮ್ಮ ಕ್ಷೇತ್ರದ ಶಾಸಕರು ಉಪಮುಖ್ಯಮಂತ್ರಿ ಆದ ಖುಷಿಯಲ್ಲಿ ಕನಕಪುರ ಕ್ಷೇತ್ರದ ಮತದಾರರು ಇದ್ದಾರೆ. ಹೀಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜನೆ ಮಾಡೋಕೆ ಸಿದ್ಧತೆ ಕೂಡ ಸಾಗಿದೆ. ದೆಹಲಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ವಾಪಸ್ ಬಂದನ ಅದ್ಧೂರಿ ಕಾರ್ಯಕ್ರಮ ನಡೆಯೋದು ಬಹುತೇಕ ಗ್ಯಾರಂಟಿ.












Click it and Unblock the Notifications